ಬೆಂಗಳೂರಿನ ಫುಟ್‌ಪಾತ್ ಸಮಸ್ಯೆ ಕುರಿತು ಬಿಬಿಎಂಪಿಗೆ ದೂರು ನೀಡಲು 'ರಸ್ತೆ' ಆ್ಯಪ್ ಸಿದ್ಧಪಡಿಸಿದ 14ರ ಬಾಲಕ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆಗಳು, ಗುಂಡಿಬಿದ್ದ ಮತ್ತು ಒತ್ತುವರಿಯಾದ ಫುಟ್‌ಪಾತ್‌ಗಳಿಂದ ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿತ್ತು. ವಾಹನ ದಟ್ಟಣೆಯ ನಡುವೆ ಪ್ರಾಣ ಕೈಯಲ್ಲಿಡಿದು ರಸ್ತೆಯಲ್ಲಿ ನಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನ 14 ವರ್ಷದ ಬಾಲಕನೊಬ್ಬ ತಂತ್ರಜ್ಞಾನದ ಮೊರೆ ಹೋಗಿದ್ದು, ಬಿಬಿಎಂಪಿಗೆ ನೇರವಾಗಿ ದೂರು ನೀಡಲು 'ರಸ್ತೆ' ಎಂಬ ವಿನೂತನ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವ ಮೂಲಕ ಗಮನ ಸೆಳೆದಿದ್ದಾನೆ.

ಈ ಆ್ಯಪ್ ಅನ್ನು ಸಿದ್ಧಪಡಿಸಿದ್ದು ಸೂರ್ಯ ಉತ್ಕರ್ಷ ಎಂಬ ಬಾಲಕ, ಇದನ್ನು ಫುಟ್‌ಪಾತ್‌ಗಳ 'ಟಿಂಡರ್' (Tinder for Footpaths) ಎಂದು ಕರೆದಿದ್ದಾನೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಸೂರ್ಯ, ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಎಳೆಎಳೆಯಾಗಿ ವಿವರಿಸಿದ್ದಾನೆ.

Bengaluru

"ಬೆಂಗಳೂರು ನಿವಾಸಿಗಳು ಫುಟ್‌ಪಾತ್‌ಗಳ ಬಗ್ಗೆ ದೂರು ನೀಡಲು ನಾನು ಈ ಮೊಬೈಲ್ ಆ್ಯಪ್ ನಿರ್ಮಿಸಿದ್ದೇನೆ. ನಿಮಗೆ ಯಾವುದಾದರೂ ಫುಟ್‌ಪಾತ್ ಸರಿ ಇಲ್ಲ, ಹಾಳಾಗಿದೆ ಅಥವಾ ನಡೆಯಲು ಯೋಗ್ಯವಾಗಿಲ್ಲ ಎನಿಸಿದರೆ, ರಿಪೋರ್ಟ್ ಮಾಡುವಾಗ ಅದರ ಫೋಟೋ ತೆಗೆದು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಇದು ಆ್ಯಪ್‌ನ ಕ್ರೌಡ್‌ಸೋರ್ಸ್ಡ್ ಗ್ರಿಡ್‌ನಲ್ಲಿ ನಿಮ್ಮ ವಾರ್ಡ್‌ವಾರು ಮ್ಯಾಪ್ ಆಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಬಿಬಿಎಂಪಿ ಅಧಿಕಾರಿಗಳು ಆ ನಿರ್ದಿಷ್ಟ ಸ್ಥಳವನ್ನು ಗುರುತಿಸಿ ಸುಲಭವಾಗಿ ಸರಿಪಡಿಸಲು ಸಾಧ್ಯವಾಗುತ್ತದೆ," ಎಂದು ಸೂರ್ಯ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾನೆ.

ವಿಶೇಷವೆಂದರೆ ಈ ಆ್ಯಪ್‌ನಲ್ಲಿ ವಿಶಿಷ್ಟವಾದ ರ‍್ಯಾಂಕಿಂಗ್‌ ವ್ಯವಸ್ಥೆ ಕೂಡ ಇದೆ. ಪ್ರಸಿದ್ಧ ಡೇಟಿಂಗ್ ಆ್ಯಪ್ ಟಿಂಡರ್ ಮಾದರಿಯಲ್ಲೇ ಬಳಕೆದಾರರು ಫುಟ್‌ಪಾತ್‌ಗಳನ್ನು ಸ್ವೈಪ್ ಮಾಡಬಹುದು ಮತ್ತು ಅವುಗಳನ್ನು 'ಉತ್ತಮ' ಅಥವಾ 'ಕಳಪೆ' ಎಂದು ಸಹ ಗುರುತಿಸಬಹುದು. ಸಾರ್ವಜನಿಕರ ವೋಟಿಂಗ್ ಆಧಾರದ ಮೇಲೆ ಬೆಂಗಳೂರಿನ ಅತ್ಯುತ್ತಮ ಮತ್ತು ಅತಿ ಕೆಟ್ಟ ಫುಟ್‌ಪಾತ್‌ಗಳನ್ನು ಈ ಆ್ಯಪ್ ಮೂಲಕ ಪಟ್ಟಿ ಮಾಡಬಹುದಾಗಿದೆ.

"ಕೇವಲ 30 ನಿಮಿಷಗಳಲ್ಲಿ ನಾನು ಬೆಂಗಳೂರಿನ ಟ್ರಾಫಿಕ್ ಮತ್ತು ಫುಟ್‌ಪಾತ್ ಸಮಸ್ಯೆಯನ್ನು ಫಿಕ್ಸ್ ಮಾಡಿದ್ದೇನೆ. ಕಾರುಗಳಿಗಾಗಿ ರಸ್ತೆಗಳನ್ನು ನಿರ್ಮಿಸುವುದಾದರೆ, ಈ ಆ್ಯಪ್ ಅನ್ನು ಜನರಿಗಾಗಿ ನಿರ್ಮಿಸಲಾಗಿದೆ. ಸುಸಜ್ಜಿತ ಪಾದಚಾರಿ ಮಾರ್ಗಗಳು ಜನರನ್ನು ರಸ್ತೆಗಿಳಿದು ನಡೆಯುವುದನ್ನು ತಪ್ಪಿಸುತ್ತವೆ, ಜೊತೆಗೆ ವಾಹನ ದಟ್ಟಣೆಯನ್ನೂ ಗಣನೀಯವಾಗಿ ಕಡಿಮೆ ಮಾಡುತ್ತವೆ. ಪ್ರತಿಯೊಬ್ಬ ನಾಗರಿಕನೂ ನಗರದ ಸೆನ್ಸರ್ ಆಗಿ ಬದಲಾಗಬೇಕು," ಎಂದು ಸೂರ್ಯ ಬರೆದುಕೊಂಡಿದ್ದಾನೆ. '10x Apps' ಪ್ಲಾಟ್‌ಫಾರ್ಮ್ ಬಳಸಿ ಕೇವಲ 30 ನಿಮಿಷಗಳಲ್ಲಿ ನಿರ್ಮಿಸಲಾಗಿರುವ ಈ ಆ್ಯಪ್ ಆ್ಯಪ್ ಸ್ಟೋರ್‌ಗೆ ಸಲ್ಲಿಕೆಯಾಗಲು ಸಂಪೂರ್ಣವಾಗಿ ಸಿದ್ಧವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ

ಸೂರ್ಯನ ಈ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 2017ರಿಂದ ಭಾರತದಲ್ಲಿ ನೆಲೆಸಿರುವ ಹಾಗೂ ಆಗಾಗ ಬೆಂಗಳೂರಿನ ನಾಗರಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಕೆನಡಾ ಪ್ರಜೆ ಕ್ಯಾಲೆಬ್ ಫ್ರೈಸೆನ್ ಪ್ರತಿಕ್ರಿಯಿಸಿ, "ಇದು ಟ್ರಾಫಿಕ್ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ. ಜನರಿಗೆ ನಡೆಯುವುದು ಇಷ್ಟ, ಆದರೆ ಬೆಂಗಳೂರು ಪಾದಚಾರಿಗಳಿಗಾಗಿ ನಿರ್ಮಿಸಿದ ನಗರವಲ್ಲ. 100 ಅಡಿ ರಸ್ತೆ ಹಾಗೂ ಬೆರಳೆಣಿಕೆಯ ಪಾರ್ಕ್‌ಗಳನ್ನು ಹೊರತುಪಡಿಸಿದರೆ, ಇಲ್ಲಿ ಪಾದಚಾರಿಗಳಿಗೆ ಸುರಕ್ಷಿತವಾದ ಜಾಗಗಳೇ ಇಲ್ಲ," ಎಂದಿದ್ದಾರೆ.

ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, "ಇದೊಂದು ಅದ್ಭುತ ಕೆಲಸ, ನಮ್ಮ ನಗರದ ಇಂತಹ ಮೂಲಭೂತ ಸಮಸ್ಯೆಗಳಿಗೆ ನಮಗೆ ಇನ್ನಷ್ಟು ತಂತ್ರಜ್ಞಾನ ಆಧಾರಿತ ಪರಿಹಾರಗಳ ಅಗತ್ಯವಿದೆ," ಎಂದು ಪ್ರಶಂಸಿಸಿದ್ದಾರೆ.

ಆದರೆ, ಬಿಬಿಎಂಪಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊಂದಿರುವ ಕೆಲವು ಬಳಕೆದಾರರು, "ಕೇವಲ ಆ್ಯಪ್‌ನಲ್ಲಿ ದೂರು ದಾಖಲಿಸಿದ ತಕ್ಷಣ ಬಿಬಿಎಂಪಿ ಎಂಜಿನಿಯರ್‌ಗಳು ಬಂದು ಫುಟ್‌ಪಾತ್ ಸರಿಪಡಿಸುತ್ತಾರೆಯೇ? ಬಿಬಿಎಂಪಿಯ 'ಸಹಾಯ' ಆ್ಯಪ್ ಈಗಾಗಲೇ ಅಸ್ತಿತ್ವದಲ್ಲಿದೆ. ಆದರೆ ಅದರಲ್ಲಿ ದಾಖಲಾಗುವ ರಸ್ತೆ ಗುಂಡಿ ಹಾಗೂ ಫುಟ್‌ಪಾತ್ ದೂರುಗಳು ಬಹುತೇಕ ಪರಿಹಾರವಾಗುವುದೇ ಇಲ್ಲ. ಕಳೆದ ಒಂದು ವರ್ಷದಲ್ಲಿ ನಾನು ಸುಮಾರು 10 ಗುಂಡಿಗಳ ಬಗ್ಗೆ ದೂರು ನೀಡಿದ್ದರೂ, ಬಹುಪಾಲು ದೂರುಗಳು ಇಂದಿಗೂ ಪೆಂಡಿಂಗ್ ಇವೆ," ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+