ಡಿಕೆಶಿ ಟಿಕೆಟ್ ಹಂಚಿಕೆ ಕಾರ್ಯತಂತ್ರ 'ಕೈ' ಸುಡಲಿದೆಯೇ?
ಬೆಂಗಳೂರು, ಸೆಪ್ಟೆಂಬರ್ 27; ಕರ್ನಾಟಕ ಕಾಂಗ್ರೆಸ್‌ನಲ್ಲಿ 2023ರ ವಿಧಾನಸಭೆ ಚುನಾವಣೆಯ ಸಿದ್ಧತೆ ಜೋರಾಗಿದೆ. ಟಿಕೆಟ್ ಹಂಚಿಕೆಯ ಬಗ್ಗೆಯೂ ಕೆಲವು ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಈ ಕುರಿತು ಸದ್ಯ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿವೆ.
ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಿಂದ ಮಾಜಿ ಶಾಸಕರು, ಕಳೆದ ಚುನಾವಣೆಯಲ್ಲಿ ಸೋತವರು ಕಾಂಗ್ರೆಸ್‌ಗೆ ಆಗಮಿಸುತ್ತಿದ್ದಾರೆ. ಇದು ಪಕ್ಷಕ್ಕೆ ಸಂಘಟನೆ ದೃಷ್ಟಿಯಿಂದ ಸಹಾಯಕವಾದರೆ ಗುಂಪುಗಾರಿಕೆಗೆ ಅವಕಾಶ ನೀಡಲಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ.
ನಾಯಕರು ಬೇಷರತ್ ಆಗಿ ಪಕ್ಷ ಸೇರುತ್ತಿದ್ದಾರೆ ಎಂದು ನಾಯಕರು ವೇದಿಕೆ ಮೇಲೆ ಭಾಷಣ ಮಾಡಿದರೂ ಟಿಕೆಟ್ ಹಂಚಿಕೆ ವಿಚಾರ ಬಂದಾಗ ಇದು ಕಗ್ಗಂಟಿಗೆ ಕಾರಣವಾಗಲಿದೆ ಎಂಬುದು ಅವರಿಗೂ ತಿಳಿದಿದೆ. ಹಲವು ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಎರಡು, ಮೂರು ಆಕಾಂಕ್ಷಿಗಳಿದ್ದಾರೆ. ಅದಕ್ಕೂ ಹೆಚ್ಚಿನ ಆಕಾಂಕ್ಷಿಗಳು ಇದ್ದಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್‌ನ ಇಬ್ಬರು ಪ್ರಭಾವಿ ನಾಯಕರು. ಚುನಾವಣೆ ಹತ್ತಿರ ಬಂದಾಗ ಇವರನ್ನು ಬೆಂಬಲಿಸಿ ಬೇರೆ ಪಕ್ಷದಿಂದ ನಾಯಕರು ಪಕ್ಷ ಸೇರಬಹುದು. ಇವರಿಗೆ ಟಿಕೆಟ್ ಭರವಸೆ ನೀಡಲೇಬೇಕು. ಆದರೆ ಇದೇ ಕಾರ್ಯತಂತ್ರ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಬಹುದೇ? ಎಂಬುದು ಸದ್ಯದ ಚರ್ಚೆಯ ವಿಚಾರ.

ಹಲವು ಕ್ಷೇತ್ರಗಳಲ್ಲಿ ಅಸಮಾಧಾನ
ಬೆಂಗಳೂರಿನ ಚಿಕ್ಕಪೇಟೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಕಗ್ಗಂಟಾಗುವ ನಿರೀಕ್ಷೆ ಇದೆ. ಇದಕ್ಕೆ ಕಾರಣ ಹೊಸ ಮತ್ತು ಹಳೆಯ ಆಕಾಂಕ್ಷಿಗಳು. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್? ಎಂಬ ಪ್ರಶ್ನೆಗಳು ಇವೆ. ಚುನಾವಣೆಗೆ ಕಾರ್ಯಕರ್ತರು ತಯಾರಿ ಆರಂಭಿಸಿದರೂ ಅಭ್ಯರ್ಥಿಯಾಗಲಿದ್ದಾರೆ? ಎಂಬ ಗೊಂದಲದಲ್ಲಿದ್ದಾರೆ.
ಮಾಜಿ ಶಾಸಕರು, ಕಳೆದ ಚುನಾವಣೆಯಲ್ಲಿ ಸೋತವರಿಗೆ ಟಿಕೆಟ್ ನೀಡಬೇಕು. ಆದರೆ ಈ ಚುನಾವಣೆ ಸಮಯದಲ್ಲಿ ದಿಢೀರ್ ಎಂದು ಹೊಸ ಅಭ್ಯರ್ಥಿಗಳು ಸೇರ್ಪಡೆಗೊಳ್ಳುತ್ತಿದ್ದು, ಅದರಲ್ಲೂ ಸಿದ್ದರಾಮಯ್ಯ ಬೆಂಬಲಿಗರು, ಡಿ. ಕೆ. ಶಿವಕುಮಾರ್ ಬೆಂಬಲಿಗರು ಇವರಲ್ಲಿ ಯಾರಿಗೆ ಟಿಕೆಟ್ ಎಂಬ ಚರ್ಚೆ ಜೋರಾಗಿದೆ. ಇದು ಉಭಯ ನಾಯಕರ ನಡುವಿನ ಪ್ರತಿಷ್ಠೆಗೆ ಕಾರಣವಾಗಿದೆ.

ಕಾಂಗ್ರೆಸ್ ಟಿಕೆಟ್ ಹಂಚಿಕೆ ನಡೆಯುವುದು ಹೇಗೆ?
ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿ, "ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ಗೌಪ್ಯವಾಗಿ ನಡೆಯುವುದಿಲ್ಲ. ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಚುನಾವಣಾ ಸಮಿತಿಯಲ್ಲಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಹೈಕಮಾಂಡ್‌ಗೆ ಶಿಫಾರಸು ಮಾಡಲಾಗುತ್ತದೆ. ಸಿಎಲ್‌ಪಿ ನಾಯಕರು, ಕೆಪಿಸಿಸಿ ಅಧ್ಯಕ್ಷರು, ಪ್ರಮುಖರೊಂದಿಗೆ ಚರ್ಚಿಸಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡುತ್ತದೆ" ಎಂದು ಹೇಳಿದ್ದಾರೆ.

ಸಿದ್ದರಾಮೋತ್ಸವದ ಬಳಿಕ ಚಿತ್ರಣ ಬದಲು
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹುಟ್ಟುಹಬ್ಬದ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಬಳಿಕ ಸಿದ್ದರಾಮಯ್ಯ ಬೆಂಬಲಿಗೆ ಉತ್ಸಾಹ ಹೆಚ್ಚಿದೆ. ಬೆಂಬಲಿಗರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೂಚನೆಗಳಿಗೆ ಕಿವಿಗೊಡುತ್ತಿಲ್ಲ ಎಂಬ ಆರೋಪಗಳಿವೆ. ಈ ವಾದವೇ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಕಗ್ಗಂಟಿಗೆ ಕಾರಣವಾಗಿದೆ.
ಭಾರತ್ ಜೋಡೋ ಯಾತ್ರೆಗೆ ತಯಾರಿ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಾತನಾಡುವಾಗ ಡಿ. ಕೆ. ಶಿವಕುಮಾರ್, "ಮಾಜಿ ಸಚಿವರು, ಹಾಲಿ ಶಾಸಕರಲ್ಲಿ ಒಂದಷ್ಟು ಮಂದಿ ಈ ಕಾರ್ಯಕ್ರಮಕ್ಕೆ ಸಹಕರಿಸುತ್ತಿಲ್ಲ, ಈ ಯಾತ್ರೆಯಲ್ಲಿ ಸರಿಯಾಗಿ ತೊಡಗಿಕೊಳ್ಳದವರಿಗೆ ಈ ಬಾರಿ ಟಿಕೆಟ್ ಇಲ್ಲ" ಎಂದು ಹೇಳಿದ್ದರು.

ಟಿಕೆಟ್ ಹಂಚಿಕೆ ಒಬ್ಬರ ಜವಾವ್ದಾರಿ ಅಲ್ಲ
ಟಿಕೆಟ್ ಹಂಚಿಕೆ ಕುರಿತು ಡಿ. ಕೆ. ಶಿವಕುಮಾರ್ ಹೇಳಿಕೆ ಬಳಿಕ ಮಾತನಾಡಿದ್ದ ಕೆಪಿಸಿಸಿಯ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, "ವಿಧಾನಸಭೆಯ ಟಿಕೆಟ್ ಹಂಚಿಕೆ ಒಬ್ಬರ ಜವಾಬ್ದಾರಿಯಲ್ಲ. ಹಲವು ಸಮಿತಿಗಳು ಚರ್ಚಿಸಿ ಪಾರದರ್ಶಕವಾಗಿ ನಿರ್ಣಯ ಕೈಗೊಳ್ಳಲಾಗುತ್ತದೆ" ಎಂದರು.
"ಟಿಕೆಟ್ ಹಂಚಿಕೆಗೆ ಚುನಾವಣಾ ಸಮಿತಿ, ಪರಿಶೀಲನಾ ಸಮಿತಿ ಎಂದು ಹಲವು ಹಂತಗಳಿವೆ. ಎಲ್ಲರೂ ಚರ್ಚೆ ಮಾಡಿ ಪಾರದರ್ಶಕವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ" ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.












Click it and Unblock the Notifications