Gold Price Hike: ಚಿನ್ನದ ಬೆಲೆ ಏರಿಕೆಯಿಂದ ಹೆಣ್ಮಕ್ಕಳು ಮಾಂಗಲ್ಯ ಸರ ಹಾಕಲು ಆಗುತ್ತಿಲ್ಲ : ಮೋದಿಗೆ ತಿರುಗೇಟು ಕೊಟ್ಟ ಡಿಕೆಶಿ
ಬೆಂಗಳೂರು, ಏಪ್ರಿಲ್ 17: 2024 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಕಾರ್ಯಕ್ರಮದಲ್ಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಾಂಗಲ್ಯ ಸರ ಕಿತ್ತುಕೊಳ್ಳುತ್ತದೆ ಎಂದು ವಾಗ್ದಾಳಿ ನಡೆಸಿದ್ದರು. ಅಂದು ಪ್ರಧಾನಿ ಮೋದಿಯವರ ಈ ಹೇಳಿಕೆಗೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರ ಚಿನ್ನದ ಬೆಲೆಯನ್ನು ಏರಿಸಿದೆ. ಇದರಿಂದ ಮಹಿಳೆಯರು ಮಾಂಗಲ್ಯ ಸರ ಕಟ್ಟಿಕೊಳ್ಳಲು ಆಗುತ್ತಿಲ್ಲ ಎಂದು ಮೋದಿಗೆ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಏರಿಕೆ ಮಾಡಿದ್ದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ್ ಅವರು, ಕೇಂದ್ರ ಸರ್ಕಾರ ಚಿನ್ನದ ಬೆಲೆಯನ್ನು ಏರಿಕೆ ಮಾಡಿದೆ. ಇದರಿಂದ ಕಳೆದ 11 ವರ್ಷಗಳಿಂದ ಹೆಣ್ಣುಮಕ್ಕಳು ಮಾಂಗಲ್ಯ ಸರ ಕಟ್ಟಿಕೊಳ್ಳಲು ಆಗುತ್ತಿಲ್ಲ. ಗ್ರಾಮ್ಗೆ 40 ಸಾವಿರ ರೂ. ಇದ್ದ ಚಿನ್ನದ ಬೆಲೆ 90 ಸಾವಿರ ರೂ. ಆಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ದೇಶದಲ್ಲಿ ಇಂಧನ, ಅಗತ್ಯ ವಸ್ತುಗಳು, ರಸಗೊಬ್ಬರ, ಚಿನ್ನ, ಸಿಮೆಂಟ್, ಕಬ್ಬಿಣ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಗೆ ಮೂಲ ಕಾರಣ ಕೇಂದ್ರ ಬಿಜೆಪಿ ಸರ್ಕಾರ. ಜನರ ಮೇಲೆ ಈ ಬೆಲೆ ಏರಿಕೆ ಹೊರೆ ತಗ್ಗಿಸಲು ನಾವು ಗ್ಯಾರಂಟಿ ಯೋಜನೆ ಕೊಟ್ಟಿದ್ದು, ರೈತರ ಬದುಕು ಕಾಪಾಡಲು ಹಾಲಿನ ಬೆಲೆ ಏರಿಸಿದ್ದೇವೆ. ಹೀಗಾಗಿ ಜನಾಕ್ರೋಶ ಏನಿದ್ದರೂ ಬಿಜೆಪಿ ಸರ್ಕಾರದ ವಿರುದ್ಧ ವ್ಯಕ್ತವಾಗಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಬೆಲೆ ಏರಿಕೆಗೆ ಮೂಲ ಕಾರಣ ಕೇಂದ್ರ ಬಿಜೆಪಿ ಸರ್ಕಾರ. ಹೀಗಾಗಿ ಬಿಜೆಪಿ ನಾಯಕರ ಆಕ್ರೋಶ ಏನಿದ್ದರೂ ಕೇಂದ್ರ ಸರ್ಕಾರದ ವಿರುದ್ಧ ಇರಬೋಕೇ ಹೊರತು, ಬಡವರ ಪರವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ಕಾಂಗ್ರೆಸ್ ಸರ್ಕಾರವಲ್ಲ. ಬಿಜೆಪಿಯಲ್ಲಿ ಹಾಗೂ ಜನತಾ ದಳದಲ್ಲಿ ಆಂತರಿಕ ಜಗಳ, ನಾಯಕತ್ವದ ಕೊರತೆ ಮುಚ್ಚಿಡಲು ಇಂದು ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಿದ್ದಾರೆ.
ನಮ್ಮದು ರೈತಪರ ಸರ್ಕಾರ, ಎಲ್ಲಾ ವರ್ಗದ ಜನರ ಪರವಾದ ಸರ್ಕಾರ. ನಾವು ರೈತರಿಗೆ ನೆರವಾಗಲು ಹಾಲಿನ ಬೆಲೆ ರೂ.4 ಹೆಚ್ಚಳ ಮಾಡಿದ್ದೇವೆ. ದನಕರುಗಳ ಮೇವುಗಳಾದ ಇಂಡಿ, ಬೂಸಾ ಬೆಲೆ ಹೆಚ್ಚಾಗಿದೆ. ಹೀಗಾಗಿ ನಾವು ರೈತರಿಗೆ ನೆರವಾಗಲು ರೂ.4 ಹೆಚ್ಚಿಗೆ ಸಿಗುವಂತೆ ಮಾಡಿದರೆ ಪ್ರತಿಭಟನೆ ಮಾಡುತ್ತೀರಿ. ಆಮೂಲಕ ನೀವು ರೈತ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದೀರಿ ಎಂದು ಹರಿಹಾಯ್ದರು. ಹಾಲಿನ ಬೆಲೆ ಕೇರಳದಲ್ಲಿ 52, ಗುಜರಾತ್ 53, ದೆಹಲಿ 55, ಮಹಾರಾಷ್ಟ್ರದಲ್ಲಿ 52, ತೆಲಂಗಾಣದಲ್ಲಿ 58, ಅಸ್ಸಾಂ 60, ಹರಿಯಾಣದಲ್ಲಿ 56, ರಾಜಸ್ಥಾನದಲ್ಲಿ 50, ಮಧ್ಯಪ್ರದೇಶದಲ್ಲಿ 52, ಪಂಜಾಬ್ ನಲ್ಲಿ 56, ಉತ್ತರ ಪ್ರದೇಶದಲ್ಲಿ 56 ರೂಪಾಯಿಗಳಿವೆ. ನಮ್ಮ ರಾಜ್ಯದಲ್ಲಿ ಈ ಎಲ್ಲಾ ರಾಜ್ಯಗಳಿಗಿಂತ 10-12 ರೂಪಾಯಿ ಕಡಿಮೆ ಇದೆ. ನಾವು ರೈತರ ಬದುಕು ರಕ್ಷಣೆಗೆ 4 ರೂಪಾಯಿ ಹೆಚ್ಚಿಸಿದ್ದೇವೆ. ನೀವು ಮಳೆ, ಗಾಳಿಗೆ ಹೆದರಿ ಜನಾಕ್ರೋಶ ಯಾತ್ರೆ ಕೈಬಿಟ್ಟಿದ್ದೀರಿ.
ಕೇಂದ್ರ ಬಿಜೆಪಿ ಸರ್ಕಾರದಿಂದ ಸಿಮೆಂಟ್, ಕಬ್ಬಿಣ, ಅಡುಗೆ ಎಣ್ಣೆ, ಸೋಪು, ಉಪ್ಪು, ಟಿವಿ, ಟೂತ್ ಬ್ರೇಷ್, ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಕಳೆದ 11 ವರ್ಷಗಳಿಂದ ಹೆಣ್ಣು ಮಕ್ಕಳು ಚಿನ್ನದ ಮಾಂಗಲ್ಯ ಸರ ಖರೀದಿಸಲು ಸಾಧ್ಯವಾಗುತ್ತಿಲ್ಲ. 10 ಗ್ರಾಂ ಚಿನ್ನ 40 ಸಾವಿರದಿಂದ 96 ಸಾವಿರಕ್ಕೆ ಏರಿಕೆಯಾಗಿದೆ. 10 ಸಾವಿರ ಇದ್ದ ಮೊಬೈಲ್ 30 ಸಾವಿರವಾಗಿದೆ. ಸಿಮೆಂಟ್ 268 ರಿಂದ 410 ಆಗಿದೆ. ಇದಕ್ಕೆಲ್ಲ ಯಾರು ಕಾರಣ? ಬಿಜೆಪಿ. ಹೀಗಾಗಿ ಜನಾಕ್ರೋಶ ಬಿಜೆಪಿ ಸರ್ಕಾರದ ವಿರುದ್ಧ ಆಗಬೇಕು ಎಂದು ತಿರುಗೇಟು ನೀಡಿದರು.












Click it and Unblock the Notifications