ಮ್ಯಾಚ್ ಫಿಕ್ಸಿಂಗ್ ಬಗ್ಗೆ ಅಶೋಕ್ ಮಾತಾಡ್ತಿದ್ದಾರಾ ಎಂದ ಡಿ.ಕೆ ಶಿವಕುಮಾರ್!
ಬಿಜೆಪಿ ನಾಯಕರ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ. ಕೇಂದ್ರ ಜಾಯಿಂಟ್ ಪಾರ್ಲಿಮೆಂಟ್ ಕಮಿಟಿಗೆ ಒಂದು ಲೆಕ್ಕ ಇದೆ. ಆದರೆ, ಈಗ ರಾಜ್ಯದಲ್ಲಿ ಜೆಪಿಸಿ ಸಭೆ ಇದೊಂದು ನಾಟಕದ ಕಂಪನಿ ಆಗಿದೆ. ಈ ಕಮಿಟಿ ರಾಜ್ಯಕ್ಕೆ ಬರಬೇಕಾದರೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳಿಗೆ ತಿಳಿಸಬೇಕು ಎಂದಿದ್ದಾರೆ.
ವಕ್ಫ್ ಬೋರ್ಡ್ ವಿವಾದ ಜೋರಾಗುತ್ತಿರುವ ಬೆನ್ನಲ್ಲೇ ಈ ವಿಷಯವನ್ನು ಬಿಜೆಪಿ ಪ್ರಧಾನ ಅಸ್ತ್ರವನ್ನಾಗಿಸಿಕೊಂಡಿದೆ. ಈ ಸಮಿತಿ ಬರುವ ಮುನ್ನ ಮುನ್ಸೂಚನೆ ಕೊಡಬೇಕು. ಅದರಲ್ಲಿ ಇರುವ ಸದಸ್ಯರೆಲ್ಲ ಬರಬೇಕು. ಆದರೆ, ಒಬ್ಬರು ಅಧ್ಯಕ್ಷರು ಬಂದಿದ್ದಾರೆ. ಅವರ ಪಕ್ಷದ ಕೆಲಸಕ್ಕೆ ಬಂದಿದ್ದಾರೆ. ಇನ್ನೊಬ್ಬ ಎಂಪಿಯನ್ನು (ತೇಜಸ್ವಿ ಸೂರ್ಯ) ಕರೆದುಕೊಂಡು ಬಂದಿದ್ದಾರೆೆ ಎಂದು ವ್ಯಂಗ್ಯ ಮಾಡಿದ್ದಾರೆ.

ಜೆಪಿಸಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಏನಾದರೂ ಮೆಂಬರ್ ಆಗಿದ್ದಾರಾ, ಸೋಮಣ್ಣ ಮೆಂಬರ್ ಆಗಿದ್ದಾರಾ ಎಂದು ಪ್ರಶ್ನೆ ಮಾಡಿರುವ ಅವರು, ವಿ.ಸೋಮಣ್ಣ ಮಂತ್ರಿ. ಮಂತ್ರಿಯಾದವರು ಜೆಪಿಸಿಯಲ್ಲಿ ಇರೋಕೆ ಆಗಲ್ಲ. ಅವರು ಬಂದು ಜನರ ಹತ್ತಿರ ಅರ್ಜಿ ಇಸ್ಕೊಂಡಿದ್ದಾರೆ. ಜನರ ಮುಂದೆ ಪ್ರಚಾರ ಮಾಡ್ಬೇಕು ಅಂತ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಧಾರವಾಡದ ಜಿಲ್ಲಾಧಿಕಾರಿಗಳಿಗೆ ಕೇಳಿ, ಬಸವರಾಜ ಬೊಮ್ಮಾಯಿ ಸರ್ಕಾರ ಇದ್ದಾಗಲೇ ನೋಟಿಸ್ ಕೊಟ್ಟು ದಾಖಲೆ ತಿದ್ದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ದಾಖಲೆ ಬಿಡುಗಡೆ ಮಾಡ್ತೇವೆ ಅಂತ ಹೇಳಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ದಾಖಲೆ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ಯಾವ ರೈತನ ಜಮೀನನ್ನು ಕಬಳಿಸಿಕೊಳ್ಳುವಂತ ಪ್ರಶ್ನೆಯೇ ಬರುವುದಿಲ್ಲ. ನಾವು ರೈತರನ್ನು ಉಳಿಸುತ್ತೇವೆ. ಕೆಲವೊಂದು ತಾಂತ್ರಿಕವಾಗಿ ಏನೋ ಕೆಲವು ಅಧಿಕಾರಿಗಳು ಮಾಡಿರಬಹುದು. ಎಲ್ಲಾ ರೈತರಿಗೆ ರಕ್ಷಣೆ ಕೊಡುವಂತ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.
ಅನುದಾನ ಕೇಳಬೇಕಾದರೆ, ಡಿ.ಕೆ ಶಿವಕುಮಾರ್ ಅವರು ತಗ್ಗಿ ಬಗ್ಗಿ ನಡೆಯಬೇಕು ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಹೇಳಿದ್ದು ತೇಜಸ್ವಿ ಸೂರ್ಯಗೆ ಎಂದರು.
ನಾನು ಬೆಂಗಳೂರು ಉಸ್ತುವಾರಿ ಸಚಿವನಾದ ಮೇಲೆ ಬೆಂಗಳೂರು ಅಧೋಗತಿ ಆಗಿದೆ ಎಂದಿದ್ದರು. ಏನು ಅದು ಲೆಕ್ಕ ಕೊಡಿ ಅಂತ ಹೇಳಿದೆ. ಲೋಕಾಯುಕ್ತ ಮ್ಯಾಚ್ ಫಿಕ್ಸಿಂಗ್ ಅಂತ ಅಶೋಕ್ ಹೇಳ್ತಿದ್ದಾರೆ. ನಮ್ಮ ಸಂಸ್ಥೆ ಸಂವಿಧಾನದ ಒಂದು ಭಾಗ. ಇವರು ಸಂವಿಧಾನದಲ್ಲಿ ವಿರೋಧ ಪಕ್ಷದ ನಾಯಕ ಆಗಿದ್ದಾರೆ. ಇವರ ಮಾತುಗಳೆಲ್ಲ ಮ್ಯಾಚ್ ಫಿಕ್ಸಿಂಗಾ ಎಂದು ಖಾರವಾಗಿ ಪ್ರಶ್ನಿಸಿದರು.
ಇನ್ನು ವಕ್ಫ್ ಬೋರ್ಡ್‌ಗೆ ಸಂಬಂಧಿಸಿದಂತೆ ಜೆಪಿಸಿ ಜನರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಕ್ಫ್ ಬೋಡ್೯ ಆಸ್ತಿ ಕಬಳಿಸುವ ಆರೋಪ ಕೇಳಿ ಬಂದಿದೆ. ಹೀಗಾಗಿ, ಕರ್ನಾಟಕ ಜನರ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ಇದರ ವಿಸ್ತೃತ ವರದಿ ಸಿದ್ಧಪಡಿಸಿ ಸ್ಪೀಕರ್‌ಗೆ ಸಲ್ಲಿಸಲಾಗುವುದು ಎಂದು ವಕ್ಫ್ ಬೋಡ್೯ ಸಂಸದೀಯ ಜಂಟಿ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ ತಿಳಿಸಿದ್ದರು. ಹುಬ್ಬಳ್ಳಿಯಲ್ಲಿ ರೈತರಿಂದ ಅಹವಾಲು ಸ್ವೀಕರಿಸಲಾಗುತ್ತಿದೆ. ಈ ಬೆನ್ನಲ್ಲಿ ಡಿ.ಕೆ ಶಿವಕುಮಾರ್ ಅವರು ಈ ಹೇಳಿಕೆ ಕೊಟ್ಟಿದ್ದಾರೆ.












Click it and Unblock the Notifications