'ಕನಕಪುರ ಬಂಡೆ' ಡಿ.ಕೆ. ಶಿವಕುಮಾರ್ ಪರಿಚಯ; ವಿದ್ಯಾರ್ಥಿ ಸಂಘಟನೆಯಿಂದ ಉಪ ಮುಖ್ಯಮಂತ್ರಿವರೆಗೆ

ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪ್ರಥಮ ಪುತ್ರನಾಗಿ 1962ರ ಮೇ 15ರಂದು ಜನಿಸಿದ ಡಿ.ಕೆ. ಶಿವಕುಮಾರ್ ಬಾಲ್ಯದಲ್ಲಿ ತಮ್ಮ ತಂದೆಯಿಂದಲೇ ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡು ಬೆಳೆದರವರು.

18ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ NSUIಗೆ ಸೇರ್ಪಡೆಗೊಂಡು 1981-83ರ ಅವಧಿಯಲ್ಲಿ ಅನತಿ ದೂರದಲ್ಲಿದ್ದ ಬೆಂಗಳೂರು ಜಿಲ್ಲೆಯ ಘಟಕದ ಅಧ್ಯಕ್ಷರಾಗಿದ್ದರು.

DK Shivakumars Incredible Journey From Student Association Leader to Deputy CM of Karnataka

ಆ ಬಳಿಕ ವಿದ್ಯಾಭ್ಯಾಸಕ್ಕೆಂದು ಬೆಂಗಳೂರು ನಗರ ಸೇರಿದ ಡಿ.ಕೆ. ಶಿವಕುಮಾರ್ ಅವರು ಆರ್.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ಕಾಂಗ್ರೆಸ್‌ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್‍ ಅಧ್ಯಕ್ಷರಾಗಿ ಕನಕಪುರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳನ್ನು ನಡೆಸಿ ಜನಮನ ಗೆದ್ದರು.

1985ರ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ

1985ರ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ನಾಯಕ ಎಚ್.ಡಿ. ದೇವೇಗೌಡರ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿ ಸಿಗುತ್ತಿರಲಿಲ್ಲ. ಆಗ ಕಾಂಗ್ರೆಸ್ ಪಕ್ಷದ ವರಿಷ್ಠರ ಕಣ್ಣಿಗೆ ಬಿದ್ದವರು ಡಿ.ಕೆ. ಶಿವಕುಮಾರ್.

ರಾಜಕಾರಣದ ಪರಿಚಯವೇ ಇಲ್ಲದಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಎಚ್.ಡಿ. ದೇವೇಗೌಡ ಅವರ ವಿರುದ್ದ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಿತು. ಸಾಕಷ್ಟು ಪ್ರಬಲ ಪ್ರತಿರೋಧವನ್ನೇ ತೋರಿದ ಡಿ.ಕೆ. ಶಿವಕುಮಾರ್, ಆ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರು ಅತ್ಯಂತ ಪ್ರಯಾಸದ ಜಯ ಪಡೆಯುವಲ್ಲಿ ಯಶಸ್ವಿಯಾದರು.

DK Shivakumars Incredible Journey From Student Association Leader to Deputy CM of Karnataka

ವಿಧಾನಸಭಾ ಚುನಾವಣೆ ನಡೆದ ಕೆಲವೇ ದಿನಗಳಲ್ಲಿ 1987ರಲ್ಲಿ ಅವರು ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡರು.

1989ರಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಮೂಲಕ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಯಾದರು. ಆಗ ಕ್ಷೇತ್ರದಲ್ಲಿ ಬೇರೂರಿದ್ದ ಜನತಾ ದಳದ ಪ್ರಾಬಲ್ಯವನ್ನು ಮೊಟಕುಗೊಳಿಸಿ ಡಿ.ಕೆ. ಶಿವಕುಮಾರ್ ಅವರು ಅತ್ಯಧಿಕ ಮತಗಳಿಂದ ಅಭೂತಪೂರ್ವ ಜಯ ಗಳಿಸಿದರು.

1991ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಬೇಕಾಗಿ ಬಂದಾಗ ಅವರ ಉತ್ತರಾಧಿಕಾರಿಯನ್ನಾಗಿ ಎಸ್. ಬಂಗಾರಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾಗುವಂತೆ ಮಾಡುವಲ್ಲಿ ಡಿ.ಕೆ. ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೆ ಬಹುಮಾನ ದ್ಯೋತಕವಾಗಿ ಎಸ. ಬಂಗಾರಪ್ಪನವರು ಈ ಯುವಕನನ್ನು ರಾಜ್ಯಮಟ್ಟದ ಸಚಿವರನ್ನಾಗಿ ಮಾಡಿ ಬಂಧಿಖಾನೆ ಖಾತೆ ನೀಡಿದರು.

DK Shivakumars Incredible Journey From Student Association Leader to Deputy CM of Karnataka

ಆದರೆ, ಕಾಂಗ್ರೆಸ್ ಪಕ್ಷದಲ್ಲಿನ ಕೆಲವು ವಿರೋಧಿಗಳ ರಾಜಕೀಯ ಪಿತೂರಿಯಿಂದಾಗಿ 1994ರಲ್ಲಿ ಪಕ್ಷದ ಟಿಕೆಟ್ ವಿರೋಧಿಸಲಾಯಿತು. ಧೃತಿಗೆಡದ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜಯ ಗಳಿಸಿದರು.

ಸಾತನೂರು ವಿಧಾನಸಭಾ ಕ್ಷೇತ್ರದಿಂದ 4ನೇ ಬಾರಿಗೆ ಗೆಲುವು

2004ರಲ್ಲಿ ಡಿ.ಕೆ. ಶಿವಕುಮಾರ್ ಅವರು ಸಾತನೂರು ವಿಧಾನಸಭಾ ಕ್ಷೇತ್ರದಿಂದ 4ನೇ ಬಾರಿಗೆ ಗೆಲುವು ಗಳಿಸಿದರೂ, ಕಾಂಗ್ರೆಸ್ ಪಕ್ಷ ಬಹುಮತ ಗಳಿಸುವಲ್ಲಿ ವಿಫಲವಾಯಿತು. ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಲು ಅಗತ್ಯವಾದ ಬಹುಮತವಿಲ್ಲದ ಕಾರಣ ಬಿಜೆಪಿ ಪಕ್ಷ ಅಧಿಕಾರಕ್ಕೇರದಂತೆ ತಡೆಯಲು ಎಚ್.ಡಿ. ದೇವೇಗೌಡ ನೇತೃತ್ವದ ಪಕ್ಷ ಜನತಾ ದಳ (ಜಾತ್ಯಾತೀತ) ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು.

ಹೀಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಉದಯಿಸಿದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್‌ಗೆ ಸ್ಥಾನವಿರಲಿಲ್ಲ. ಏಕೆಂದರೆ ಅವರು ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಬಾರದೆಂಬುದು ಎಚ್.ಡಿ. ದೇವೇಗೌಡರು ಷರತ್ತು ವಿಧಿಸಿದ್ದರು.

ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಡಿ.ಕೆ. ಶಿವಕುಮಾರ್ ತಮಗೆ ಮಾಡಲಾದ ಅಪಮಾನವನ್ನು ಸಹಿಸಿಕೊಂಡರು ಹಾಗೂ ಕಾಂಗ್ರೆಸ್ ಪಕ್ಷವನ್ನು ಪುನರ್ ಸಂಘಟಿಸುವಲ್ಲಿ ತಮ್ಮ ಸಮಯವನ್ನು ಮೀಸಲಿಟ್ಟರು.

ತಮ್ಮ ವಿರುದ್ದ ದೇವೇಗೌಡರು ನಡೆಸಿದ ಸೇಡಿನ ರಾಜಕಾರಣಕ್ಕೆ ತಮ್ಮದೇ ರೀತಿಯಲ್ಲಿ ಪ್ರತ್ಯುತ್ತರ ನೀಡುವಲ್ಲಿ ಡಿ.ಕೆ. ಶಿವಕುಮಾರ್ ಯಶಸ್ವಿಯಾದರು. 2006ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ದ ರಾಜಕೀಯವಾಗಿ, ಸಾರ್ವಜನಿಕವಾಗಿ ಅಷ್ಟೇನು ಪರಿಚಿತರಲ್ಲದ ತೇಜಸ್ವಿನಿ ಗೌಡರನ್ನು ನಿಲ್ಲಿಸಿ ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡರು.

ನಮ್ಮ ಪಕ್ಕದ ರಾಜ್ಯವಾದ ಮಹಾರಾಷ್ಟ್ರದಲ್ಲಿ ವಿಲಾಸ್‍ರಾವ್ ದೇಶ್‍ಮುಖ್ ಸಮ್ಮಿಶ್ರ ಸರ್ಕಾರ ಎನ್‌ಸಿಪಿ ಪಕ್ಷದೊಂದಿಗೆ ಸೆಣಸಾಟಕ್ಕಿಳಿದಾಗ ಸರ್ಕಾರ ಅಲ್ಪಮತದ ಅಪಾಯಕ್ಕೆ ಸಿಕ್ಕಿಕೊಂಡಿತ್ತು. ಆಗ ಎನ್‌ಸಿಪಿ ಮತ್ತು ವಿರೋಧ ಪಕ್ಷಗಳು ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಕುದುರೆ ವ್ಯಾಪಾರಕ್ಕೆ ಇಳಿದಿದ್ದವು.
ತಕ್ಷಣ ಕಾಂಗ್ರೆಸ್ ಹೈಕಮಾಂಡಿನ ಆದೇಶದಂತೆ ಕಾರ್ಯಪ್ರವೃತ್ತರಾದ ಡಿ.ಕೆ. ಶಿವಕುಮಾರ್ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರನ್ನು ಮುಂಬೈಯಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಸುಮಾರು 10-12 ದಿನಗಳ ಕಾಲ ಬೆಂಗಳೂರಿನ ವೈಭವೋಪೇತ ರೆಸಾರ್ಟ್‍ ಒಂದರಲ್ಲಿ ಇರಿಸಿಕೊಂಡು ರಕ್ಷಣೆ ನೀಡಿದರು. ಮುಂಬೈಯಲ್ಲಿ ಪರಿಸ್ಥಿತಿ ತಿಳಿಯಾಗಿ ಸರ್ಕಾರಕ್ಕೆ ಅಪಾಯವಿಲ್ಲವೆಂಬ ಸಂಗತಿ ಮನವರಿಕೆಯಾದ ನಂತರ ಮಹಾರಾಷ್ಟ್ರ ಶಾಸಕರನ್ನು ಕಳುಹಿಸಿ ಕೊಟ್ಟರು.

ಡಿ.ಕೆ. ಶಿವಕುಮಾರ್ ಸಕಾಲಿಕ ರಾಜಕೀಯ ತಂತ್ರಗಾರಿಕೆ ಫಲಕೊಟ್ಟು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ವಿಲಾಸ್‍ರಾವ್‍ ದೇಶ್‍ಮುಖ್ ಅವರ ಸರ್ಕಾರ ಯಾವುದೇ ಅಪಾಯ ಎದುರಿಸದೆ ಪಾರಾಗಿ ಮುಂದುವರೆಯಿತು. ಇದರ ಎಲ್ಲಾ ಶ್ರೇಯಸ್ಸು ಡಿ.ಕೆ. ಶಿವಕುಮಾರ್‌ಗೆ ಸಲ್ಲಬೇಕು.

ಎಸ್.ಎಂ. ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗುವಂತೆ ಮಾಡುವಲ್ಲಿ ಯಶಸ್ವಿ
2004ರಲ್ಲಿ ಪ್ರಥಮ ಬಾರಿಗೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರೂಪುಗೊಂಡಾಗ ಎಸ್.ಎಂ. ಕೃಷ್ಣ ಅವರನ್ನು ಕಡೆಗಣಿಸಿ ಎಚ್.ಡಿ. ದೇವಗೌಡರ ಒಪ್ಪಿಗೆಯಂತೆ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಬೇಕಾಗಿ ಬಂದಾಗ ಎಸ್.ಎಂ. ಕೃಷ್ಣ ಅವರಿಗೆ ಬದಲಿಯಾಗಿ ಯಾವುದಾದರೊಂದು ಸ್ಥಾನ ಕೊಡಲೇಬೇಕೆಂದು ಪಕ್ಷದ ವರಿಷ್ಠರ ಮನವೊಲಿಸಿ, ಎಸ್.ಎಂ. ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.

ಬಂಡಾಯ ಶಾಸಕರಾಗಿಯೂ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಡಿ.ಕೆ. ಶಿವಕುಮಾರ್ ಆಗಲೇ ರಾಜಕೀಯವಾಗಿ ಮೂಲೆಗುಂಪಾಗಿದ್ದ ಎಸ್.ಎಂ. ಕೃಷ್ಣ ಅವರನ್ನು ಓಲೈಸಿ ಮರಳಿ ರಾಜಕೀಯ ರಂಗಕ್ಕೆ ಕರೆತಂದರು ಹಾಗೂ ಜನತಾ ದಳ ಅಧಿಕಾರದಲ್ಲಿದ್ದರೂ, ಅಲ್ಪಮತದ ಬೆಂಬಲದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಸ್.ಎಂ. ಕೃಷ್ಣ ಅವರು ರಾಜ್ಯಸಭೆಗೆ ಸ್ಪರ್ಧಿಸುವಂತೆ ಮಾಡಿದರು. ಜನತಾ ದಳದಿಂದಲೇ ಅಗತ್ಯವಾದ ಸದಸ್ಯರ ಬೆಂಬಲ ಸಿಗುವಂತೆ ವ್ಯೂಹ ರಚನೆ ಮಾಡಿ ಎಸ್.ಎಂ. ಕೃಷ್ಣ ರಾಜ್ಯಸಭೆಗೆ ಆಯ್ಕೆಯಾಗುವಂತೆ ಮಾಡಿದರು.

1999ರಲ್ಲಿ ಶ್ರೀ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡಾಗ ಡಿ.ಕೆ. ಶಿವಕುಮಾರ್ ಅವರ ಹಿಂದೆ ಬೆನ್ನೆಲುಬಾಗಿ ನಿಂತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ರೀತಿಯಲ್ಲಿ ಜಯಗಳಿಸಿ ಸರ್ಕಾರ ರಚಿಸುವಲ್ಲಿ ಕಾರಣರಾದರು.

2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾಗಿ, ರಾಜ್ಯ ನಗರ ಯೋಜನಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರಾಗಿ ಯುವಕರನ್ನು ಸಂಘಟಿಸಿ ಜೀವನದಲ್ಲಿ ನೆಲೆಗೊಳಿಸುವ "ರಾಜೀವ್‍ಯುವ ಶಕ್ತಿ' ಸಂಘಟನೆಗಳು ರಾಜ್ಯದಲ್ಲಿ ತಲೆ ಎತ್ತಲು ಶ್ರಮ ವಹಿಸಿದರು. ವಿಶ್ವದಲ್ಲಿಯೇ ಮೊದಲನೆಯ ಎನಿಸಿದ ಸ್ತ್ರೀಶಕ್ತಿ ಸಂಘಟನೆಗಳನ್ನು ಆರಂಭಿಸುವಲ್ಲಿ ಡಿ.ಕೆ. ಶಿವಕುಮಾರ್ ಪಾಲು ಮಹತ್ವದ್ದು.

ಕನಕಪುರ ಕ್ಷೇತ್ರದಲ್ಲಿ ವಿಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಸ್ಥಾಪಿಸಿ ಆ ಮೂಲಕ ಕ್ಷೇತ್ರದ ಮತದಾರರೊಂದಿಗೆ ನೇರಾನೇರ ಸಂಪರ್ಕ ಸಾಧಿಸಿದ ದೇಶದ ಪ್ರಥಮ ಶಾಸಕರೆಂಬ ಕೀರ್ತಿಗೆ ಭಾಜನರಾದವರು ಡಿ.ಕೆ. ಶಿವಕುಮಾರ್. ಸಾತನೂರು ಹಾಗೂ ಕನಕಪುರ ಕಚೇರಿಗಳಲ್ಲಿ ಸ್ಥಾಪಿಸಿದ ವಿಡಿಯೋ ಸಂಪರ್ಕ ಸೌಲಭ್ಯದಿಂದಾಗಿ ಗ್ರಾಮೀಣ ಮತದಾರರು ತಮ್ಮ ಶಾಸಕರೊಂದಿಗೆ ನೇರವಾಗಿ ಮಾತುಕತೆ ನಡೆಸಿ ತಮ್ಮ ಕುಂದುಕೊರತೆಗಳನ್ನು ಹೇಳಿಕೊಂಡು ಅವುಗಳಿಂದ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಯಿತು.

ಇದರಿಂದ ಸಾರ್ವಜನಿಕರ ಅಪಾರ ಹಣ ಹಾಗೂ ವೇಳೆಯು ಅಪವ್ಯಯವಾಗುವುದು ತಪ್ಪಿತು. ಈ ಬಗ್ಗೆ ರಾಷ್ಟ್ರಮಟ್ಟದ ಇಂಡಿಯಾ ಟುಡೇಯಂತಹ ಪತ್ರಿಕೆ ಅವರ ಸಾಧನೆಯ ಬಗ್ಗೆ ತನ್ನ 2006 ಏಪ್ರಿಲ್ 17ನೇ ದಿನದ ಸಂಚಿಕೆಯಲ್ಲಿ ಭಾರತೀಯ ಶಾಸಕನೊಬ್ಬ ಕೈಗೊಂಡ ಈ ಮಹತ್ವದ ಸಾಧನೆಯನ್ನು ಗುರುತಿಸಿ ಶ್ಲಾಘಿಸಿತು.

ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ರಾಜಕೀಯ ಧ್ರುವತಾರೆಯಾಗಿರುವ ರಮ್ಯಾ ಕಾಂಗ್ರೆಸ್ ಪಕ್ಷಕ್ಕೆ ಕಾಲೂರಿದ್ದು ಡಿ.ಕೆ. ಶಿವಕುಮಾರ್ ಅವರ ಸತತ ಒತ್ತಾಸೆ ಹಾಗೂ ಪ್ರೇರಣೆಯಿಂದ.

ಒಂದು ವರ್ಷದ ಹಿಂದೆ ಬೆಂಗಳೂರು ಅರಮನೆ ಆವರಣದಲ್ಲಿ ಬೃಹತ್ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್‍ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ರಮ್ಯಾ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಕೇವಲ ಕೆಲವೇ ದಿನಗಳ ಅಂತರದಲ್ಲಿ ರಮ್ಯಾ ಮತದಾರರ ಮೇಲೆ ವಿಶ್ವಾಸ, ಪ್ರಭಾವ ಭೀರಿದ್ದರಿಂದಾಗಿ ಅವರು ಮಂಡ್ಯದ ಉಪ ಚುನಾವಣೆಯಲ್ಲಿ ಎದುರಾಳಿಯ ಗೆಲುವು ಸಾಧಿಸಿ ಸಂಸದೆಯಾದರು.

2013ರಲ್ಲಿ ಅಧಿಕಾರಕ್ಕೆ ಬಂದಾಗ ಏಳು ತಿಂಗಳ ನಂತರ ಡಿ.ಕೆ. ಶಿವಕುಮಾರ್ ಅವರು ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಂಡರು. ಇಂಧನ ಖಾತೆಯಂತಹ ಪ್ರಮುಖ ಖಾತೆಯನ್ನು ಅವರಿಗೆ ನೀಡಲಾಯಿತು.

ಇಂಧನ ಸಚಿವರಾಗಿ ಡಿ.ಕೆ. ಶಿವಕುಮಾರ್ ಜಡ್ಡುಗಟ್ಟಿದ್ದ ಇಂಧನ ಇಲಾಖೆಯನ್ನು ಅಮೂಲಾಗ್ರ ಸುಧಾರಣೆ ಮಾಡಲಾರಂಭಿಸಿದರು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸಹಿ ಮಾಡಲಾಗಿದ್ದ ಹಲವಾರು ವಿದ್ಯುತ್ ಖರೀದಿ ಒಪ್ಪಂದಗಳನ್ನು ರದ್ದುಗೊಳಿಸಿದರು. ಅಷ್ಟೇ ಅಲ್ಲ ಹಿಂದಿನ ಸರ್ಕಾರದ ಕಾಲಾವಧಿಯಲ್ಲಿ ಮಾಡಲಾದ ವಿದ್ಯುತ್ ಖರೀದಿಯಲ್ಲಿ ಅಕ್ರಮ ಕುರಿತ ಸದನ ಸಮಿತಿ ರಚನೆಗೆ ಕಾರಣರಾದರು.

ರೈತ ಸೂರ್ಯ ಯೋಜನೆಯನ್ನು ರೂಪಿಸಿ ಭೂ ಮಾಲೀಕರಾದ ರೈತರು ಸ್ವಯಂ 1 ರಿಂದ 3 ಮೆ.ವ್ಯಾ. ಸೌರವಿದ್ಯುತ್ ಉತ್ಪಾದನೆ ಮಾಡುವಂತೆ ಅವಕಾಶ ಕಲ್ಪಿಸಿದರು. ರಾಜ್ಯ ಸರ್ಕಾರದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಮುಕ್ತ ಕಂಠದಿಂದ ಪ್ರಶಂಸಿದೆಯಲ್ಲದೇ ಉಳಿದ ರಾಜ್ಯಗಳೂ ಕರ್ನಾಟಕದ ಮಾದರಿ ಅನುಸರಿಸುವಂತೆ ಕೇಂದ್ರ ಇಂಧನ ಸಚಿವರೇ ಕರೆ ನೀಡಿರುತ್ತಾರೆ.

2018ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೊದಲಿಗೆ ಜಲಸಂಪನ್ಮೂಲ ನಂತರ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಪಡೆದ ಡಿ.ಕೆ. ಶಿವಕುಮಾರ್ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಮಹದಾಯಿ ಸಮಸ್ಯೆ ಪರಿಹಾರ, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ ಅವರು ರಾಜ್ಯದಲ್ಲಿ ಅತೀ ಹೆಚ್ಚು ಪ್ರಮಾಣದ ಚೆಕ್ ಡ್ಯಾಮ್‍ಗಳ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡಿಕೆ ಮೂಲಕ ಉತ್ತೇಜಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಸಂಘಟನೆ:
ಸಮ್ಮಿಶ್ರ ಸರ್ಕಾರ ಪತನದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಖಾಲಿ ಇದ್ದ ನಾಯಕತ್ವದ ಸ್ಥಾನಕ್ಕೆ ಅಂದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ಅವರು ಮಾರ್ಚ್ 11, 2020ರಂದು ಡಿ.ಕೆ. ಶಿವಕುಮಾರ್ ಅವರನ್ನು ನೇಮಿಸಿದರು.

ನೇಮಕವಾದ ಕೆಲವೇ ದಿನಗಳಲ್ಲಿ ಕೋವಿಡ್ ಮಹಾಮಾರಿ ದೇಶದೆಲ್ಲೆಡೆ ಆವರಿಸಿತು. ಈ ಸಂದರ್ಭದಲ್ಲಿ ಮನೆಯಲ್ಲಿ ಕೂರದ ಶಿವಕುಮಾರ್, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಉತ್ತೇಜನ ನೀಡಿ ಅವರು ಕೂಡ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡಲು ಕರೆ ನೀಡಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಪಕ್ಷವನ್ನು ಸಂಘಟಿಸಿದ ರೀತಿ ಎಲ್ಲಾ ರಾಜಕೀಯ ನಾಯಕರಿಗೆ ಮಾದರಿಯಾಗಿ ಉಳಿದಿದೆ ಎಂದರೆ ತಪ್ಪಾಗುವುದಿಲ್ಲ.

ಕೋವಿಡ್ ಸಮಯದಲ್ಲಿ ಹಗಲಿರುಳು ತಾವೂ ಕೆಲಸ ಮಾಡಿ, ತಮ್ಮ ಪಕ್ಷದ ಜನರು ಜನರ ಬಳಿ ಹೋಗಿ ಕೆಲಸ ಮಾಡಿ ಅವರ ವಿಶ್ವಾಸ ಗೆಲ್ಲುವಂತೆ ಸೂಚನೆ ನೀಡಿದರು. ಲಾಕ್‌ಡೌನ್‌ನಿಂದ ಆದಾಯವಿಲ್ಲದೆ, ಮಾರುಕಟ್ಟೆ ಇಲ್ಲದೆ ಕಂಗಾಲಾಗಿದ್ದ ರೈತರು, ಕಾರ್ಮಿಕರು, ಬಡವರು, ಅಸಂಘಟಿತ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಿದರು. ಅವರ ಪರವಾಗಿ ಧ್ವನಿಯಾಗಿ ಸರ್ಕಾರದ ಗಮನ ಸೆಳೆದರು.

ಮಾರುಕಟ್ಟೆ ಇಲ್ಲದೆ ರೈತರು ಕಂಗಾಲಾದಾಗ ರೈತರ ಜಮೀನಿನಿಂದ ಕೋಟ್ಯಂತರ ರೂಪಾಯಿ ಮೊತ್ತದ ಹಣ್ಣು ತರಕಾರಿ ಖರೀದಿ ಮಾಡಿ ನಂತರ ಅವುಗಳನ್ನು ಜನರಿಗೆ ಉಚಿತವಾಗಿ ಹಂಚುವಂತೆ ಮಾಡಿದರು. ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಹಾಕಿದ ಹೋರಾಟ ಮಾಡಿದರು.

ಸರ್ಕಾರ ರಾಜ್ಯದ ಜನರನ್ನು ನಡು ನೀರಲ್ಲಿ ಕೈಬಿಟ್ಟಾಗ ಕಾಂಗ್ರೆಸ್ ಸಹಾಯ ಹಸ್ತ ಕಾರ್ಯಕ್ರಮ ಮೂಲಕ ಕೋವಿಡ್ ಸಂತ್ರಸ್ತರಿಗೆ ಸೇವೆ ಮಾಡಿದರು. ವಿರೋಧ ಪಕ್ಷವಾಗಿ ಜನರ ಸೇವೆ ಹೇಗೆ ಮಾಡಬಹುದು ಎಂದು ತೋರಿಸಿಕೊಟ್ಟು, ಸರ್ಕಾರಕ್ಕೂ ಮಾದರಿಯಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+