IPL Final Match: ಆರ್ ಸಿಬಿ ಫ್ಯಾನ್ಸ್‌ಗೆ ಮಹತ್ವದ ಮಾಹಿತಿ; ಬೆಂಗಳೂರಿನ 2 ಪ್ರಮುಖ ಮೇಲ್ಸೇತುವೆ ಮೇಲೆ ಸಂಚಾರ ನಿಷೇಧ
ಬೆಂಗಳೂರು: ಬಹುನಿರೀಕ್ಷೆಯ ಐಪಿಎಲ್ 2026 (IPL 2026 Match) ಫೈನಲ್ ಪಂದ್ಯಾವಳಿ ಇಂದು ಮೇ 31ರಂದು ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. RCB ಮತ್ತು GT ತಂಡಗಳು ಫೈನಲ್‌ನಲ್ಲಿ ಮುಖಾಮುಖಿ ಆಗಲಿವೆ. ಈ ಸಂಬಂಧ ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದ್ದು, ನಗರದ ಎರಡು ಪ್ರಮುಖ ಮೇಲ್ಸೇತುವೆಗಳ ಮೇಲೆ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ವರ್ಷ ಆರ್ ಸಿಬಿ ಕಪ್ ಗೆದ್ದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿತ್ತು. ಆ ಕಹಿ ಘಟನೆಗೆ ಒಂದು ವರ್ಷ ಆಗಿದ್ದು, ಇದೀಗ ಬೆಂಗಳೂರಿನಲ್ಲಿ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡದಂತೆ ಸೂಚಿಸಲಾಗಿದೆ. ಇದರೊಂದಿಗೆ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಹಚ್ಚು ವಾಹನಗಳು ಓಡಾಡುವ ಸಂಚಾರ ದಕ್ಷಿಣ ವಿಭಾಗ ವ್ಯಾಪ್ತಿಯ ಎಲೆವೆಟೆಡ್ ಫ್ಲೈಓವರ್ ಮತ್ತು ಡಬಲ್ ಡೆಕ್ಕರ್ ಮೇಲ್ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ.

ಇಂದಿನಿಂದ ನಾಳೆ ಬೆಳಗ್ಗೆವರೆಗೆ ಮೇಲ್ಸೇತುವೆ ಬಂದ್
ಈ ನಿರ್ಬಂಧವು ಇಂದು ಮೇ 31ರ ಭಾನುವಾ ರಾತ್ರಿ 11 ಗಂಟೆಯಿಂದ ಜೂನ್ 1ರ ಬೆಳಗ್ಗೆ 05 ಗಂಟೆವರೆಗೆ ಅನ್ವಯವಾಗುವಂತೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಸಂಚಾರ ದಕ್ಷಿಣ ವಿಭಾಗ ಪೊಲೀಸರು ತಿಳಿಸಿದ್ದಾರೆ.
ಎಲೆವೆಟೆಡ್ ಫ್ಲೈಓವರ್ ಮಾರ್ಗದಲ್ಲಿ ರೂಪೇನ ಅಗ್ರಹಾರದಿಂದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ ರೂಪೇನಾ ಅಗ್ರಹಾರ ಕಡೆಗೆ ಹೋಗುವ ವಾಹನಗಳು ಪರ್ಯಾಯ ಮಾರ್ಗವನ್ನು ಬಳಸಬೇಕಾಗಿದೆ. ಅವರಿಗೆ ಎಲೆವೇಟೆಡ್ ಕಾರಿಡಾರ್ ಬಳಕೆಗೆ ನಿರ್ಬಂಧಿಸಲಾಗಿದೆ. ಮತ್ತೊಂದೆಡೆ ರಾಗಿಗುಡ್ಡ ಕಡೆಯಿಂದ 5ಮೇ ಮುಖ್ಯ ಹೊರವರ್ತುಲ ರಸ್ತೆಗೆ, ಹೊಸೂರು ರಸ್ತೆಗೆ ತೆರಳವು, ಹಾಗೂ ಹೊರ ವರ್ತುಲ ರಸ್ತೆ, ಹೊಸೂರು ಕಡೆಯಿಂದ ರಾಗಿಗುಡ್ಡ ಕಡೆಗೆ ಬರುವ ವಾಹನಗಳು ಈ ಡಬಲ್ ಡೆಕ್ಕರ್ ಬಳಸುವಂತಿಲ್ಲ. ಸದರಿ ಎರಡು ಮೇಲ್ಸೇತುವೆಗಳ ಕೆಳಗಿನ ರಸ್ತೆಗಳು ಎಂದಿನಂತೆ ಬಳಸಬಹುದೆಂದು ಅಧಿಕಾರಿಗಳು ಸಂಚಾರ ಸಲಹೆ ನೀಡಿದ್ದಾರೆ.
ಇನ್ನೂ ಐಪಿಎಲ್ ಫೈನಲ್ ಪಂದ್ಯಾವಳಿ ಬಳಿಕ ವಿಜಯೋತ್ಸವದ ನೆಪದಲ್ಲಿ ರಸ್ತೆ, ಜಂಕ್ಷನ್‌ಗಳಲ್ಲಿ ಯಾವುದೇ ರೀತಿಯ ಆಚರಣೆ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ. ಕಾನೂನು ಪಾಲಿಸುವ ಜೊತೆಗೆ ಶಾಂತಿ ಕಾಪಾಡಬೇಕು. ಸೂಚಿಸಿರುವ ನಿಯಮಗಳನ್ನು ಪಾಲಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಆರ್ ಸಿಬಿ ಅಭಿಮಾನಿಗಳಿಗೆ ಮೆಟ್ರೋ ಉಚಿತ ಸೇವೆ ಸುಳ್ಳು!
ಆರ್ ಸಿಬಿ ಫೈನಲ್ ಪಂದ್ಯಾವಳಿ ಮೇ 31ರಂದು ನಡೆಯುವ ಪ್ರಯುಕ್ತ ಬೆಂಗಳೂರು ಮೆಟ್ರೋ ರೈಲಿನಲ್ಲಿ ಆರ್ ಸಿಬಿ ಅಭಿಮಾನಿಗಳಿಗೆ ಉಚಿತ ಮೆಟ್ರೋ ಸೇವೆ ನೀಡಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಲಾಗಿದೆ. ಇದು ಶುದ್ಧ ಸುಳ್ಳಾಗಿದ್ದು, ಯಾರು ಇದನ್ನು ನಂಬದಂತೆ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ತಿಳಿಸಿದ್ದಾರೆ.
ಆರ್ ಸಿಬಿ ಅಭಿಮಾನಿಗಳಿಗೆ ಉಚಿತ ಮೆಟ್ರೋ ಸೇವೆ ಕುರಿತು ನಾವು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಈ ಬಗ್ಗೆ ಪ್ರಸಾರ ಮಾಡುವಂತೆ ಯಾವುದೇ ಸಂಸ್ಥೆ, ವ್ಯಕ್ತಿಗಳಿಗೆ ತಿಳಿಸಿಲ್ಲ ಎಂದು ಮೆಟ್ರೋ ಅಧಿಕಾರಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.













Click it and Unblock the Notifications