ಅದರ ಬಗ್ಗೆ ನಾನು ಮಾತನಾಡಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಡಿಕೆ ಶಿವಕುಮಾರ್ ವಿರೋಧ?
ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇದು ರಾಷ್ಟ್ರೀಯ ಸುದ್ದಿಯಾಗಿರುವುದಲ್ಲದೆ ಪಾಕ್ ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರವಾಗಿದೆ. ಈ ಬಗ್ಗೆ ಬಿಜೆಪಿ ನಾಯಕರು ಕೂಡ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆಯು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಸಿಎಂ ಹೇಳಿಕೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ?
ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಈಗಾಗಲೇ ಸ್ಪಷ್ಟಪಡಿಸಿದೆ. ನಾವು ಕೂಡ ಸಭೆ ನಡೆಸಿದ್ದೇವೆ. ಭಯೋತ್ಪಾದಕರ ದಾಳಿಯನ್ನು ಕಾಂಗ್ರೆಸ್ ಖಂಡಿಸಿದೆ. ದೇಶದ ಭದ್ರತೆ ಮುಖ್ಯ, ಶಾಂತಿ ಮುಖ್ಯ. ಮೊದಲು ಭಾರತವನ್ನು ರಕ್ಷಿಸಲು ನಾವೆಲ್ಲರೂ ಕೆಲಸ ಮಾಡೋಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ನಮ್ಮ ಸಿಎಂ ಏನು ಹೇಳಿದ್ದರೋ ಅದರ ಬಗ್ಗೆ ದಯವಿಟ್ಟು ಅವರ ಹತ್ತಿರವೇ ಸ್ಪಷ್ಟನೆ ಪಡೆಯಿರಿ ಎಂದಿದ್ದಾರೆ. ಈಗಾಗಲೇ ನಮ್ಮ ಪಕ್ಷ ತೀರ್ಮಾನ ಮಾಡಿದೆ. ದೇಶದ ಏಕತೆ ಮತ್ತು ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ನಮ್ಮ ಪಕ್ಷದ ನಿರ್ಣಯಕ್ಕೂ ನಾವು ಬದ್ಧ ಎಂದಿದ್ದಾರೆ.
ಮೂರು ಹಂತಗಳ ಸೆಕ್ಯೂರಿಟಿ ಇದ್ದರೂ ಪಹಲ್ಗಾಮ್ ದಾಳಿಯ ವೇಳೆ ಇಷ್ಟು ಜನರಿಗೆ ರಕ್ಷಣೆ ಕೊಡಲು ಆಗಲಿಲ್ಲ. ಏನೇ ಆದರೂ ಕೂಡ ದೇಶದ ದೃಷ್ಟಿಯಿಂದ, ದೇಶದ ಒಗ್ಗಟ್ಟಿನ ದೃಷ್ಟಿಯಿಂದ ನಾವೆಲ್ಲರೂ ಕೂಡ ಒಂದಾಗಿ ರಕ್ಷಣೆ ಮಾಡೋಣ ಎಂದು ತಿಳಿಸಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಕೇಂದ್ರ ಸರ್ಕಾರದ ನಿರ್ಣಯಕ್ಕೆ ನಾವು ಕೂಡ ಬೆಂಬಲ ಸೂಚಿಸುತ್ತೇವೆ ಎಂದಿದ್ದಾರೆ.

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅನರ್ಹರು: ಯತ್ನಾಳ್
ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಗೆ ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬೇಕಾಗಿಲ್ಲ, ಬದಲಾಗಿ ತನ್ನ ಬೇಹುಗಾರಿಕೆ ಇಲಾಖೆಯನ್ನು ಬಲಗೊಳಿಸಕೊಳ್ಳಬೇಕೆಂಬ ಸಿದ್ದರಾಮಯ್ಯ ಅವರ ಬಾಲಿಶ ಹೇಳಿಕೆ ನಿಜಕ್ಕೂ ಹೇಯ ಹಾಗೂ ಖಂಡನೀಯ ಎಂದಿದ್ದಾರೆ. ಉಗ್ರ ದಾಳಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಭಾರತ ಇದ್ದರೆ, ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವುದು ಅನವಶ್ಯಕ, ಬೇಕಾಗಿಲ್ಲ ಎಂಬ ಅಪ್ರಬುದ್ಧ, ರಾಷ್ಟ್ರವಿರೋಧಿ ಹೇಳಿಕೆ ನೀಡಿರುವ ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಮುಂದುವರೆಯಲು ಅನರ್ಹರು ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶ ಮೊದಲು ಪಕ್ಷ ಆಮೇಲೆ ಎಂಬ ನೀತಿಯನ್ನು ಪಾಲಿಸಿ ಮೇಲ್ಪಂಕ್ತಿ ಹಾಕಿಕೊಡಬೇಕಾಗಿದ್ದ ಮುಖ್ಯಮಂತ್ರಿಗಳು ಶತ್ರು ದೇಶದ ಪರವಾಗಿ ಮಾತನಾಡಿರುವುದನ್ನು ಅಲ್ಲಿನ ಮಾಧ್ಯಮಗಳು ಬಿತ್ತರಿಸಿ, ಉಗ್ರ ದಾಳಿಯಾಗಿದ್ದು ಭಾರತದ ಬೇಹುಗಾರಿಕಾ ವೈಫಲ್ಯದಿಂದಲೇ ಎಂದು ತೋರಿಸುತ್ತಿದೆ. ಪಾಕಿಸ್ತಾನದ ಪರ ಮಾತನಾಡಿದರೆ, ಅಲ್ಪಸಂಖ್ಯಾತ ಮತಗಳು ಎಲ್ಲಿ ಕೈಬಿಡುತ್ತವೋ ಎಂಬ ಭಯದಿಂದ ಶತ್ರು ದೇಶದ ಪರವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಕ್ಷಮೆಯಾಚಿಸಿ ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ತಮ್ಮ ಮಾತುಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications