40 ಶಾಸಕರ ಜೊತೆ ಬಿಜೆಪಿಗೆ ಬರಲು ಡಿ ಕೆ ಶಿವಕುಮಾರ್ ರೆಡಿಯಾಗಿದ್ದಾರೆ: ಸ್ಫೋಟಕ ಹೇಳಿಕೆ ಕೊಟ್ಟ ಬಿಜೆಪಿ ಶಾಸಕ
ಬೆಂಗಳೂರು , ಮಾರ್ಚ್ 24: ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗಿದ್ದು, ಲೋಕಸಮರದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಅಸಮಾಧಾನಿತರಿಗೆ ಗಾಳ ಹಾಕುತ್ತಿದೆ. ಈ ನಡುವೆ ಆರ್‌ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಸ್ಟೋಟಕ ಹೇಳಿಕೆ ನೀಡಿದ್ದಾರೆ.
ಹೌದು, ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಮುನಿರತ್ನ, ಡಿಕೆ ಶಿವಕುಮಾರ್ ಅವರು 40 ಶಾಸಕರ ಜೊತೆ ಬಿಜೆಪಿಗೆ ಬರಲು ಕಾಯುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದು, ಬಿಜೆಪಿಯವರನ್ನು ಮುನಿರತ್ನ ಕಾಂಗ್ರೆಸ್‌ಗೆ ಕಳುಹಿಸುತ್ತಿದ್ದಾರೆ ಎಂಬ ಆರೋಪಕ್ಕೆ ಮುನಿರತ್ನ ಅವರು ತಿರುಗೇಟು ನೀಡಿದ್ದಾರೆ.

ನಾನೇ ಬಿಜೆಪಿಯವರನ್ನು ಕಾಂಗ್ರೆಸ್‌ಗೆ ಕಳಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ಆದರೆ,ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಚರಾದ ಡಿಕೆ ಶಿವಕುಮಾರ್ ಅವರೇ 40 ಶಾಸಕರ ಜೊತೆ ಬಿಜೆಪಿಗೆ ಬರಲು ತಯಾರಾಗಿ ಕಾಯುತ್ತಿದ್ದಾರೆ. ನಾವು ಬಾಗಿಲು ತೆಗೆದರೆ ಒಳಗೆ ಬಂದುಬಿಡ್ತಾರೆ. ಆದರೆ, ನಾವು ಬಾಗಿಲು ತೆಗೆಯುತ್ತಿಲ್ಲ. ನಾವು ನಮ್ಮವರನ್ನು ಕಾಂಗ್ರೆಸ್‌ಗೆ ಕಳುಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
ಕಾಂಗ್ರೆಸ್ ಪಾಳಯದಲ್ಲಿ ಈಗಾಗಲೇ ನಾಲ್ವರು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಫೈಪೋಟಿ ನಡೆಸುತ್ತಿದ್ದಾರೆ. ಅಲ್ಲಿರುವುದರ ಬದಲು ಡಿ ಕೆ ಶಿವಕುಮಾರ್ ನಮ್ಮ ಜೊತೆ ಬರೋದು ತುಂಬಾ ಬೆಸ್ಟ್ ಎಂದು ಅವರೇ ತೀರ್ಮಾನಿಸಿದ್ದಾರೆ. ನಾವು ಬಾಗಿಲು ತೆರೆಯದೇ ಇರುವುದಕ್ಕೆ ಅವರು ಬರುತ್ತಿಲ್ಲ. ಸದ್ಯ ಅಲ್ಲಿಯೇ ಇರಲಿ ಎಂದು ಮುನಿರತ್ನ ಅವರು ಸ್ಪೋಟಕ ಹೇಳಿಕೆಯನ್ನ ನೀಡಿದ್ದಾರೆ.
ರಾಜ ರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಒಳಗಾಗಿಸುವ ಪ್ರಯತ್ನ ನಡೆಯುತ್ತಿದೆ ಎಂಬ ವಿಚಾರವಾಗಿ ಬಿಜೆಪಿ ಶಾಸಕ ಮುನಿರತ್ನ ಮಾತನಾಡಿ, ಎಲ್ಲಿ ಕೇಸ್ ಹಾಕ್ಸಿದೀನಿ ಎಂದು ಹೇಳಲಿ, ಒಂದು ವೇದಿಕೆ ಸೃಷ್ಟಿಸಿ ಬಹಿರಂಗ ಚರ್ಚೆಗೆ ಬರಲಿ, ಕನಕಪುರದಲ್ಲಿ ಕೇಸ್ ಹಾಕಿಸುವುದು ಇವರಿಗೆ ರೂಢಿ, ನಮಗಲ್ಲ. ಕೇಸ್‌ಗಳನ್ನು ಹಾಕುವುದು, ಬೆದರಿಸುವುದು, ಹಿಡಿತದಲ್ಲಿ ಇಟ್ಟುಕೊಳ್ಳುವುದು ಇವರ ಕೆಲಸ ನಮ್ಮದಲ್ಲ ಎಂದು ಡಿ ಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications