ಸಿದ್ದರಾಮಯ್ಯ ಧರಿಸಿದ ವಾಚ್ ಬೆಲೆ ಬರೋಬ್ಬರಿ 43 ಲಕ್ಷ : ವಾಚ್‌ನ ನಿಖರ ಬೆಲೆ ತಿಳಿಸಿದ ಡಿ ಕೆ ಶಿವಕುಮಾರ್
ಬೆಂಗಳೂರು, ಡಿಸೆಂಬರ್ 04: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಯ ನಡುವೆ ಐಷಾರಾಮಿ ವಾಚ್ ವಿವಾದಗಳು ಮತ್ತೆ ಮುನ್ನೆಲೆಗೆ ಬಂದಿದೆ. ಸದಾ ಸಮಾಜವಾದಿ ವರ್ಚಸ್ಸನ್ನು ಬಿಂಬಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ದುಬಾರಿ ವಾಚ್ ಧರಿಸಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ.
ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಕೈಗಡಿಯಾರದ ವಿಚಾರವಾಗಿ ಬಿಜೆಪಿ ವಾಗ್ದಾಳಿ ನಡೆಸಿದೆ. ಅಂದು ₹70 ಲಕ್ಷ, ಇಂದು ₹43 ಲಕ್ಷ, ಕೈ ಗಡಿಯಾರ ಬದಲಾಗಿದೆ ಹೊರತು, ಮಜಾವಾದಿಯ ಮನಸ್ಥಿತಿ ಬದಲಾಗಿಲ್ಲ. ಸಮಾಜವಾದದ ಮುಖವಾಡ ಧರಿಸಿ ಮಜಾವಾದದ ಜೀವನ ನಡೆಸುತ್ತಿರುವ ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಎಂದು ಕರ್ನಾಟಕ ಬಿಜೆಪಿ ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದೆ.

ಇನ್ನೂ ವಾಚ್ ವಿವಾದದ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಸಿದ್ದರಾಮಯ್ಯ ಅವರು ತೊಟ್ಟಿದ್ದ ವಾಚ್ ನ ಬೆಲೆ 43 ಲಕ್ಷ ಎಂದು ಬಿಜೆಪಿ ಟೀಕೆ ಮಾಡಿದೆ. ಯಾರು ಹೇಳಿದ್ದು ಆ ವಾಚಿನ ಬೆಲೆ 43 ಲಕ್ಷ ಎಂದು. ನಾನು 7-8 ವರ್ಷದ ಹಿಂದೆ ತೆಗೆದುಕೊಂಡಾಗ 24 ಲಕ್ಷದಷ್ಟಿತ್ತು. ಅದು ಹೇಗೆ 43 ಲಕ್ಷವಾಗುತ್ತದೆ. ಉಪಹಾರ ಸಭೆಯ ದಿನ ನಾವಿಬ್ಬರು ಕಾಕತಾಳೀಯವಾಗಿ ಒಂದೇ ಕಂಪೆನಿಯ ವಾಚ್ ಧರಿಸಿದ್ದೇವೆ ಎಂದು ಆನಂತರ ತಿಳಿಯಿತು ಎಂದರು.
ಡಿಸೆಂಬರ್ 8 ರಂದು ದೆಹಲಿಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದೆ. ವಿರೋಧ ಪಕ್ಷದ ನಾಯಕರು, ಕೇಂದ್ರ ಸಚಿವರು, ರಾಜ್ಯದ ಸಂಸದರ ಬಳಿ ಮಾತನಾಡಿ ಸೂಕ್ತ ದಿನಾಂಕವನ್ನು ಮುಂದೆ ತಿಳಿಸಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸೋಮಣ್ಣ ಅವರಿಗೆ ಪರಿಶೀಲನಾ ಸಭೆ ಇರುವ ಕಾರಣಕ್ಕೆ ಭಾಗವಹಿಸಲು ಆಗುತ್ತಿಲ್ಲ. ನಿರ್ಮಲಾ ಸೀತರಾಮನ್ ಅವರಿಗೆ ಸಂಸತ್ ನಲ್ಲಿ ಬಿಲ್ ಮಂಡನೆ ಮಾಡಬೇಕಾದ ಕಾರಣಕ್ಕೆ ಭಾಗವಹಿಸಲು ಆಗುತ್ತಿಲ್ಲ. ನಾನು ಪ್ರಹ್ಲಾದ್ ಜೋಶಿ ಅವರ ಬಳಿ ಮಾತನಾಡಿದೆ. ಆಗ ಅವರು ಪ್ರಧಾನಿಯವರು ಭಾಗವಹಿಸುವ ಕಾರಣಕ್ಕೆ ಆಗುವುದಿಲ್ಲ ಎಂದಿದ್ದಾರೆ" ಎಂದರು.
ವಿರೋಧ ಪಕ್ಷದ ನಾಯಕರು, ಸಂಸದರು, ಕೇಂದ್ರ ಸಚಿವರುಗಳ ಸಭೆಯನ್ನು ಒಟ್ಟಿಗೆ ಮಾಡಬೇಕು. ಏಕೆಂದರೆ ರಾಜ್ಯದ ಹಿತಕ್ಕೆ ಒಂದು ದನಿಯಾಗಿ ಹೋರಾಟ ಮಾಡಬೇಕು, ಅದಕ್ಕಾಗಿ ಈ ತಯಾರಿ ಎಂದು ಹೇಳಿದರು. ಮುಂದಿನ ಸಭೆಯಲ್ಲಿ ನಮ್ಮ ಸಂಸದರು ಕೈಗೆತ್ತಿಕೊಳ್ಳಬೇಕಾದ ವಿಚಾರಗಳ ಬಗ್ಗೆ ತಿಳಿಸಲಾಗುವುದು. ಯಾರು ನೇತೃತ್ವ ವಹಿಸಬೇಕು ಎಂಬುದು ಮುಖ್ಯ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಬ್ರೇಕ್ ಫಾಸ್ಟ್ ಮೀಟಿಂಗ್ ಅನ್ನು ಬೀಗತನ ಎಂದು ಕೆ.ಎನ್.ರಾಜಣ್ಣ ಅವರು ಕರೆದಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಎನ್.ರಾಜಣ್ಣ ಅವರ ಮನೆಗೆ ಊಟಕ್ಕೆ ಹೋಗಿದ್ದರು. ನಾನು ಅವರ ಹುಟ್ಟುಹಬ್ಬದ ದಿನ ಹೋಗಿದ್ದೆ. ಹಾಗಾದರೆ ನಮ್ಮದೂ ಬೀಗತನ ತಾನೇ? ಎಂದು ಹೇಳಿದರು.
ಮಂಗಳೂರಿನಲ್ಲಿ ಅಭಿಮಾನಿಗಳು ಕೂಗು ಹಾಕಿರುವ ಬಗ್ಗೆ ಮಾತನಾಡಿ, ಇದು ಕಳೆದ 10 ವರ್ಷಗಳಿಂದ ನಡೆಯುತ್ತಿದ್ದು, ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಜೈಲಿಂದ ಆಚೆ ಬಂದಾಗಲೂ ಜನ ನನ್ನ ಬಗ್ಗೆ ಕಾಳಜಿ ತೋರಿದ್ದರು. ಜನರ ಮಾತನ್ನು ನಿಯಂತ್ರಿಸಲು ಆಗುವುದಿಲ್ಲ. ಆದರೆ ನಮ್ಮೆಲ್ಲರಿಗೂ ಶಿಸ್ತು ಬಹಳ ಮುಖ್ಯ. ಶಿಸ್ತು ಇಲ್ಲದೆ ಯಾವುದೇ ಪಕ್ಷದಲ್ಲಿ ಉಳಿಯುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು.












Click it and Unblock the Notifications