ಉಚಿತ ಬಸ್‌ಪಾಸ್ ಸಿಕ್ತೆಂದು ಖುಷಿಯಾಗಿದ್ದ ವಿದ್ಯಾರ್ಥಿಗಳಿಗೆ ತಾಂತ್ರಿಕ ದೋಷದ ಕುತ್ತು; ದುಡ್ಡು ಕೊಟ್ಟು ಟಿಕೆಟ್ ಖರೀದಿ ತಪ್ಲಿಲ್ಲ
ಬೆಂಗಳೂರು: ರಾಜ್ಯ ಸರ್ಕಾರ ಈ ವರ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಘೋಷಿಸಿದ್ದಂತೆ ವಿತರಣೆಯಲ್ಲಿ ಭಾರೀ ವೇಗ ಕಂಡು ಬಂತು. ಇದೀಗ ಕಳೆದ ಎರಡು ಮೂರು ದಿನಗಳಿಂದ 4 ಸಾರಿಗೆ ನಿಗಮಗಳಿಂದ ಉಚಿತ ಬಸ್ ಪಾಸ್ ವಿತರಣೆಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ. ಏಕೆಂದರೆ ವಿದ್ಯಾರ್ಥಿಗಳು ಬಸ್ ಪಾಸ್ ಗಾಗಿ ಅರ್ಜಿ ಸಲ್ಲಿಸುವ ವೇಳೆ ತೀವ್ರ ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ.
ಹೌದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 2026-27ರ ಶೈಕ್ಷಣಿಕ ವರ್ಷದಲ್ಲಿ ಸರ್ಕಾರದಿಂದ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ತಮ್ಮ ಮನೆಯಿಂದ ವಿದ್ಯಾಸಂಸ್ಥೆಗಳಿಗೆ ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಬಹುದಾಗಿದೆ. ಇದಕ್ಕಾಗಿ ಬಸ್ ಪಾಸ್ ಪಡೆಯಲು ಅವರು ಅರ್ಜಿ ಸಲ್ಲಿಸಬೇಕಿದ್ದು, ಈ ಅರ್ಜಿ ಸಲ್ಲಿಕೆ ವೇಳೆ ಸರ್ವರ್ ಸಮಸ್ಯೆ ಎದುರಾಗಿದೆ. ಒಂದಷ್ಟು ತಾಂತ್ರಿಕ ಸಮಸ್ಯೆಗಳಿಂದ ಅರ್ಜಿ ಸ್ವೀಕಾರ ಅಸಾಧ್ಯವಾಗಿದೆ. ಇದರಿಂದ ನಾಲ್ಕು ಸಾರಿಗೆ ನಿಗಮಗಳಿಂದ ಉಚಿತ ಬಸ್ ಪಾಸ್ ವಿತರಣೆಯಲ್ಲಿ ವಿಳಂಬ, ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.

ತಾಂತ್ರಿಕ ಸಮಸ್ಯೆಗಳು ಒಂದೆರಡಲ್ಲ!
ವಿದ್ಯಾರ್ಥಿಗಳು ಹಾಗೂ ಪೋಷಕರು ಅರ್ಜಿ ಸಲ್ಲಿಕೆಗೆ ಬೆಂಗಳೂರು ಒನ್, ಗ್ರಾಮ ಒನ್ ಸೇವಾ ಕೇಂದ್ರಗಳಿ ಭೇಟಿ ನೀಡುತ್ತಿದ್ದಾರೆ. ಎಲ್ಲ ಕಡೆಗಳಲ್ಲೂ ಸರ್ವರ್ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ವಿದ್ಯಾರ್ಥಿಗಳು ಹತ್ತುವ ಇಳಿಯುವ ಸ್ಥಳ ತೋರಿಸುತ್ತಿಲ್ಲ. ಮತ್ತೊಂದೆಡೆ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತಿಲ್ಲ. ಒಂದೊಂದು ಅರ್ಜಿ ಸಲ್ಲಿಸಲು ಸೇವಾ ಕೇಂದ್ರದ ಸಿಬ್ಬಂದಿ ಗಂಟೆಗಟ್ಟಲೇ ಸಮಯ ವ್ಯಯಿಸಿದರೂ ಸರ್ವರ್ ಸಮಸ್ಯೆ ಕಾಣಿಸುತ್ತಿದೆ. ಇದರಿಂದ ಸೇವಾ ಕೇಂದ್ರಗಳ ಮುಂದೆ ವಿದ್ಯಾರ್ಥಿಗಳು, ಪೋಷಕರು ಕಾಯುವಂತಾಗಿದೆ. ಒಂದು ಅರ್ಜಿ ಸಲ್ಲಿಕೆಗೆ ಇಷ್ಟು ಪರದಾಟವಾದರೇ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಪಾಸ್ ಸಿಗದೇ ಬಸ್ ದರ ಪಾವತಿಸಿ ಸಂಚಾರ
ಸರ್ವರ್ ಸಮಸ್ಯೆಯಿಂದಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಇತ್ತ ಕಾಲೇಜು ಚಟುವಟಿಕೆಗಳು ಶುರುವಾಗಿದ್ದು, ವಿದ್ಯಾರ್ಥಿಗಳು ನಿತ್ಯ ಶಾಲಾ-ಕಾಲೇಜಿಗೆ ತೆರಳಬೇಕಿದೆ. ಪಾಸ್ ಸಿಗದ ಕಾರಣ ನಿತ್ಯ ಹತ್ತಾರು ರೂಪಾಯಿ ಹಣ ಖರ್ಚು ಮಾಡಿ ಸಂಚರಿಸುತ್ತಿದ್ದಾರೆ. ದೂರದ ಗ್ರಾಮೀಣ ಪ್ರದೇಶಗಳಿಂದ ತಾಲೂಕು, ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ಶಾಲಾ-ಕಾಲೇಜುಗಳಿಗೆ ತೆರಳಲು ಟಿಕೆಟ್ ದರ ಪಾವತಿಸಿಯೇ ಓಡಾಡುತ್ತಿದ್ದಾರೆ. ಇದು ಅನೇಕ ಕುಟುಂಬಗಳ ಆರ್ಥಿಕ ಹೊರೆಗೆ ಕಾರಣವಾಗಿದೆ. ಶೀಘ್ರವೇ ಈ ಸರ್ವರ್ ಸಮಸ್ಯೆ ಬಗೆಹರಿಸುವಂತೆ ಪೋಷಕರು ವಿದ್ಯಾರ್ಥಿಗಳು ಸರ್ಕಾರಕ್ಕೆ, ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಆಗ್ರಹಿಸುತ್ತಿದ್ದಾರೆ.
ಜೂನ್ 12ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KKRTC) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಗಳು ಉಚಿತ ಬಸ್ ವಿತರಣೆ ಆರಂಭಿಸಿವೆ. ಎರಡೇ ದಿನದಲ್ಲಿ (ಜೂನ್ 12, 13) ನಾಲ್ಕು ಸಂಸ್ಥೆಗಳಿಂದ 2764 ವಿದ್ಯಾರ್ಥಿಗಳಿಗೆ ಪಾಸ್‌ಗಳನ್ನು ವಿತರಿಸಲಾಗಿತ್ತು. ಬಳಿಕವು ವಿತರಣೆ ಮುಂದುವರೆಸಿದ್ದವು.
ಫ್ರೀ ಬಸ್ ಪಾಸ್ ಯೋಜನೆಗೆ ಇನ್ನಷ್ಟು ವೇಗ ಸಿಗಲಿದೆ ಎನ್ನಲಾಗಿತ್ತು. ಅಷ್ಟರಲ್ಲೇ ಅರ್ಜಿ ಸಲ್ಲಿಕೆಗೆ ಸರ್ವರ್ ಸಮಸ್ಯೆ ಎದುರಾಗಿದೆ. ಶೀಘ್ರವೇ ಈ ಸಮಸ್ಯೆ ಬಗೆಹರಿಸಿ, ಪಾಸ್ ವಿತರಣೆ ಮುಂದುವರಿಸುವುದಾಗಿ ಸರ್ಕಾರಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.













Click it and Unblock the Notifications