KSTDC ವೀಕೆಂಡ್ ಟೂರ್ ಪ್ಯಾಕೇಜ್ ಎಫೆಕ್ಟ್: ಕುಕ್ಕೆ ಸುಬ್ರಹ್ಮಣ್ಯ, ಮಂತ್ರಾಲಯದಲ್ಲಿ ಭಕ್ತ ಸಾಗರ
ಬೆಂಗಳೂರು: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕಟೀಲು ಹಾಗೂ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ವಾರಾಂತ್ಯದ ರಜೆಯ ಕಾರಣ ಭಕ್ತರ ಸಾಗರವೇ ಹರಿದುಬಂದಿದೆ. ವಿಶೇಷವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇತ್ತೀಚೆಗಷ್ಟೇ ಪರಿಚಯಿಸಿರುವ ಹೊಸ ವಾರಾಂತ್ಯದ ಟೂರ್ ಪ್ಯಾಕೇಜ್ ಕೂಡ ಈ ಭಾರಿ ಜನಸಂದಣಿಗೆ ಪ್ರಮುಖ ಕಾರಣವಾಗಿದೆ. ಜೂನ್ 13 ರಂದು ಆರಂಭಗೊಂಡ ಈ ನೂತನ ಸಾರಿಗೆ ಸೇವೆಗೆ ಭಕ್ತರಿಂದ ಹಾಗೂ ಪ್ರವಾಸಿಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
ಮಿಥುನ ಮಾಸದ ಆರಂಭ ಹಾಗೂ ಪ್ರಸ್ತುತ ವರ್ಷ ಮಳೆಯ ಪ್ರಮಾಣ ತುಸು ಕಡಿಮೆಯಿರುವ ಕಾರಣ, ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದ ಬರೋಬ್ಬರಿ 50 ಸಾವಿರಕ್ಕೂ ಅಧಿಕ ಭಕ್ತರು ಶನಿವಾರ ರಾತ್ರಿಯೇ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ್ದರು. ಇದರಿಂದಾಗಿ ದೇವಸ್ಥಾನದ ರಥಬೀದಿ ಹಾಗೂ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಜನವೋ ಜನ.

ದೇವರ ದರ್ಶನ ಪಡೆಯಲು ಭಕ್ತರು ರಥಬೀದಿಯವರೆಗೂ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಾಹನಗಳ ದಟ್ಟಣೆ ವಿಪರೀತವಾಗಿದ್ದರಿಂದ ಪಾರ್ಕಿಂಗ್ ಮಾಡಲು ಜಾಗವಿಲ್ಲದೆ ಪ್ರವಾಸಿಗರು ತೀವ್ರ ಪರದಾಡಿದರು. ನೋ ಪಾರ್ಕಿಂಗ್ ಜಾಗದಲ್ಲಿಯೂ ವಾಹನಗಳನ್ನು ಮನಬಂದಂತೆ ನಿಲುಗಡೆ ಮಾಡಿದ್ದರಿಂದ ವಾಹನ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಭಾರಿ ಅಡಚಣೆಯಾಯಿತು.
ಈ ಜನಸಂದಣಿಯನ್ನು ಸುಗಮವಾಗಿ ನಿಭಾಯಿಸಲು ದೇವಸ್ಥಾನದ ಆಡಳಿತ ಮಂಡಳಿ, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಹರಸಾಹಸ ಪಟ್ಟರು. ಆದಿ ಸುಬ್ರಹ್ಮಣ್ಯದಲ್ಲಿರುವ ಭೋಜನ ಶಾಲೆಯಲ್ಲಿ ಭಕ್ತರಿಗೆ ಬಫೆ ವ್ಯವಸ್ಥೆಯ ಮೂಲಕ ಅಚ್ಚುಕಟ್ಟಾಗಿ ಅನ್ನಪ್ರಸಾದ ವಿತರಣೆ ಮಾಡಲಾಯಿತು.
ಇದರ ಜೊತೆಗೆ, ದಕ್ಷಿಣ ಕನ್ನಡದ ಮತ್ತೊಂದು ಪ್ರಸಿದ್ಧ ದೇಗುಲ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಭಕ್ತರ ದಂಡು ನೆರೆದಿತ್ತು. ಸಾಮಾನ್ಯವಾಗಿ ಪ್ರತಿದಿನ 2 ರಿಂದ 3 ಸಾವಿರ ಭಕ್ತರು ಭೇಟಿ ನೀಡುವ ಈ ಕ್ಷೇತ್ರಕ್ಕೆ ಭಾನುವಾರ ಒಂದೇ ದಿನ ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ.
ಇನ್ನೊಂದೆಡೆ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲೂ ವಾರಾಂತ್ಯದ ಕಾರಣ ಸಾವಿರಾರು ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿದ್ದರು. ವಸತಿ ಗೃಹಗಳು ಭರ್ತಿಯಾಗಿದ್ದರಿಂದ, ಅನೇಕರು ಮಠದ ಕಾರಿಡಾರ್‌ನಲ್ಲಿ ಮಲಗಿದ್ದರು. ಆದರೆ ಶನಿವಾರ ರಾತ್ರಿ ದಿಢೀರ್ ಭಾರಿ ಮಳೆಯಾದ ಕಾರಣ, ಕಾರಿಡಾರ್‌ನಲ್ಲಿದ್ದ ಭಕ್ತರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಚಳಿ ಹಾಗೂ ಮಳೆಯಿಂದಾಗಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ನಡುಗುವಂತಾಯಿತು.
ತಕ್ಷಣವೇ ಕಾರ್ಯಪ್ರವೃತ್ತರಾದ ಶ್ರೀಮಠದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ, ಮಳೆಯಲ್ಲಿ ಸಿಲುಕಿದ್ದ ಭಕ್ತರನ್ನು ಎಚ್‌ಆರ್‌ಬಿ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಿ, ಅಲ್ಲಿಯೇ ಸುರಕ್ಷಿತವಾಗಿ ಮಲಗಲು ಸೂಕ್ತ ವ್ಯವಸ್ಥೆ ಕಲ್ಪಿಸಿದರು. ಈ ತುರ್ತು ವ್ಯವಸ್ಥೆಯಿಂದಾಗಿ ಅನೇಕ ಭಕ್ತರು ನಿರಾಳರಾದರು. ಒಟ್ಟಾರೆಯಾಗಿ, ವಾರಾಂತ್ಯದ ಸಾಲು ರಜೆ ಹಾಗೂ ಕೆಎಸ್‌ಟಿಡಿಸಿ ನೂತನ ಪ್ಯಾಕೇಜ್‌ನಿಂದಾಗಿ ಪುಣ್ಯಕ್ಷೇತ್ರಗಳಲ್ಲಿ ಪ್ರವಾಸಿಗರ ಭಾರಿ ಹರಿವು ಕಂಡುಬಂದಿದೆ.
ಏನಿದು KSTDC ವೀಕೆಂಡ್ ಟೂರ್ ಪ್ಯಾಕೇಜ್?
ಬೆಂಗಳೂರಿನಿಂದ ಕರಾವಳಿಯ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಕೆಎಸ್‌ಟಿಡಿಸಿ ಈ ಭರ್ಜರಿ ಸಿಹಿಸುದ್ದಿ ನೀಡಿತ್ತು. ಡಿಲಕ್ಸ್ ಬಸ್‌ಗಳ ಮೂಲಕ ಆರಂಭವಾಗಿರುವ ಈ ವೀಕೆಂಡ್ ಟೂರ್ ಪ್ಯಾಕೇಜ್‌ನಲ್ಲಿ ದೇವಸ್ಥಾನಗಳಲ್ಲಿ ಶೀಘ್ರ ಹಾಗೂ ವಿಶೇಷ ದರ್ಶನದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಇದರಿಂದಾಗಿ ಪ್ರಯಾಣದ ಆಯಾಸವಿಲ್ಲದೆ, ಸುಲಭವಾಗಿ ದೇವರ ದರ್ಶನ ಪಡೆಯಬಹುದು ಎಂಬ ಕಾರಣಕ್ಕೆ ಮಧ್ಯಮ ವರ್ಗದ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.ಸದ್ಯ ವಾರಾಂತ್ಯದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿರುವ ಈ ಬಸ್ ಸೇವೆಯನ್ನು, ಪ್ರಯಾಣಿಕರ ಅದ್ಭುತ ಪ್ರತಿಕ್ರಿಯೆ ನೋಡಿಕೊಂಡು ಮುಂಬರುವ ದಿನಗಳಲ್ಲಿ ಪ್ರತಿದಿನ ಕಾರ್ಯಾಚರಣೆ ಮಾಡುವ ಬಗ್ಗೆಯೂ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿದ್ದಾರೆ.













Click it and Unblock the Notifications