Stock Market: ಷೇರುಪೇಟೆಯಲ್ಲಿ ಭಾರಿ ಏರಿಕೆ, ಅಮೆರಿಕ-ಇರಾನ್ ಒಪ್ಪಂದದ ಎಫೆಕ್ಟ್, ಒಂದೇ ದಿನ ಸೆನ್ಸೆಕ್ಸ್ 1,100 ಅಂಕ ಜಿಗಿತ

ಬೆಂಗಳೂರು: ಭಾರತೀಯ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರಿದಿದ್ದು, ವಾರದ ಮೊದಲ ದಿನವೇ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಅಮೆರಿಕ ಹಾಗೂ ಇರಾನ್ ನಡುವಿನ ಸಂಭಾವ್ಯ ಶಾಂತಿ ಒಪ್ಪಂದದ ವರದಿಗಳು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿನ ಭಾರಿ ಇಳಿಕೆ ಹಾಗೂ ಕರೆನ್ಸಿ ಮೌಲ್ಯದಲ್ಲಿನ ಸುಧಾರಣೆ ಭಾರತೀಯ ಷೇರುಪೇಟೆಗೆ ಆನೆಬಲ ತಂದುಕೊಟ್ಟಿದೆ. ಇದರ ಪರಿಣಾಮವಾಗಿ ಸೆನ್ಸೆಕ್ಸ್ 1,100ಕ್ಕೂ ಹೆಚ್ಚು ಅಂಕಗಳ ಭಾರಿ ಜಿಗಿತ ಕಂಡಿದ್ದು, ನಿಫ್ಟಿ ಮತ್ತೆ 24,000 ಅಂಕಗಳ ಗಡಿಯನ್ನು ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.

ಮಾರುಕಟ್ಟೆಯ ಈ ದಿಢೀರ್ ಏರಿಕೆಯಿಂದಾಗಿ ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ಬರೋಬ್ಬರಿ 8 ಲಕ್ಷ ಕೋಟಿ ರೂಪಾಯಿಗಳಷ್ಟು ಭಾರಿ ಏರಿಕೆಯಾಗಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (ಬಿಎಸ್‌ಇ) ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು ಇದೀಗ ಸರಿಸುಮಾರು 470 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಂಡುಬಂದಿರುವ ಈ ಚೇತರಿಕೆಯು ಭಾರತೀಯ ಆರ್ಥಿಕತೆಯ ದೃಷ್ಟಿಯಿಂದ ಅತ್ಯಂತ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

Indian Stock Market

ಷೇರುಪೇಟೆಯ ಈ ದಿಢೀರ್ ಏರಿಕೆಗೆ ಪ್ರಮುಖವಾಗಿ ನಾಲ್ಕು ಕಾರಣಗಳನ್ನು ಗುರುತಿಸಲಾಗಿದೆ. ಮೊದಲನೆಯದಾಗಿ, ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಡುವ ಸಾಧ್ಯತೆಗಳು ದಟ್ಟವಾಗಿವೆ. ಈ ಒಪ್ಪಂದದಲ್ಲಿ ಕದನ ವಿರಾಮ ಘೋಷಣೆ ಹಾಗೂ ಮುಂದಿನ 30 ದಿನಗಳೊಳಗೆ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮರುತೆರೆಯುವ ಮಹತ್ವದ ನಿರ್ಧಾರಗಳು ಸೇರಿವೆ ಎನ್ನಲಾಗಿದೆ. ಜಾಗತಿಕ ತೈಲ ಪೂರೈಕೆಯಲ್ಲಿ ಹಾರ್ಮುಜ್ ಜಲಸಂಧಿ ಪ್ರಮುಖ ಪಾತ್ರ ವಹಿಸುವುದರಿಂದ, ಇದು ಸುಗಮ ಸಾರಿಗೆಗೆ ಅನುವು ಮಾಡಿಕೊಡಲಿದೆ.

ಎರಡನೆಯದಾಗಿ, ಈ ಭೌಗೋಳಿಕ-ರಾಜಕೀಯ ಸಕಾರಾತ್ಮಕ ಬೆಳವಣಿಗೆಗಳಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಭಾರತವು ತನ್ನ ಅಗತ್ಯದ ಶೇಕಡಾ 80ಕ್ಕೂ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ತೈಲ ಬೆಲೆ ಇಳಿಕೆಯು ದೇಶದ ಆಮದು ವೆಚ್ಚವನ್ನು ತಗ್ಗಿಸುವುದರ ಜೊತೆಗೆ, ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಉತ್ಪಾದನಾ ವಲಯ ಹಾಗೂ ಇತರ ಕಂಪನಿಗಳ ಲಾಭದ ಪ್ರಮಾಣ ಹೆಚ್ಚಾಗುವ ನಿರೀಕ್ಷೆಗಳಿವೆ.

ಮೂರನೆಯ ಕಾರಣವೆಂದರೆ, ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದಿರುವ ಭಾರಿ ಚೇತರಿಕೆ. ಅಮೆರಿಕ-ಇರಾನ್ ಬೆಳವಣಿಗೆಗಳು ಜಾಗತಿಕ ಹೂಡಿಕೆದಾರರಲ್ಲೂ ವಿಶ್ವಾಸ ಮೂಡಿಸಿದ್ದು, ಜಗತ್ತಿನಾದ್ಯಂತ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ.

ನಾಲ್ಕನೆಯ ಹಾಗೂ ಮತ್ತೊಂದು ಪ್ರಮುಖ ಕಾರಣವೆಂದರೆ, ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದಲ್ಲಿನ ಬಲವರ್ಧನೆ. ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 53 ಪೈಸೆಗಳಷ್ಟು ಏರಿಕೆ ಕಂಡು, ಡಾಲರ್ ಎದುರು 93.65 ರೂಪಾಯಿಗಳಿಗೆ ವಹಿವಾಟು ನಡೆಸಿದೆ. ಇದು ಕೂಡ ಹೂಡಿಕೆದಾರರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಆದರೆ, ಮಾರುಕಟ್ಟೆ ತಜ್ಞರು ಈ ಏರಿಕೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಬದಲಾಗುತ್ತಿರುವ ಈ ಆರ್ಥಿಕ ಹಿನ್ನೆಲೆಯು ಷೇರುಪೇಟೆಯಲ್ಲಿ ನಿರಂತರ ಏರಿಕೆಗೆ ಕಾರಣವಾಗಲಿದೆಯೇ ಅಥವಾ ಇದು ಕೇವಲ ಅಲ್ಪಾವಧಿಯ ರಿಲೀಫ್ ಬೌನ್ಸ್ ಆಗಿದೆಯೇ ಎಂಬ ಬಗ್ಗೆ ತಜ್ಞರಲ್ಲಿ ಒಮ್ಮತವಿಲ್ಲ. ಕಚ್ಚಾ ತೈಲ ಬೆಲೆ ಇಳಿಕೆ ಹಾಗೂ ಡಾಲರ್ ಎದುರು ರೂಪಾಯಿ ಬಲವರ್ಧನೆ ಮಾರುಕಟ್ಟೆಗೆ ಸಕಾರಾತ್ಮಕ ಅಂಶಗಳಾಗಿದ್ದರೂ, ಜಾಗತಿಕ ವಿದ್ಯಮಾನಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ದಿಕ್ಕು ನಿರ್ಧಾರವಾಗಲಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಸಂಚಲನವು ಮಾರುಕಟ್ಟೆಗೆ ಹೊಸ ಹುರುಪು ತಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+