ವಿಶ್ವದ ಅತ್ಯಂತ ಹಳೆಯ ಚಿನ್ನದ ರಹಸ್ಯ: 6,500 ವರ್ಷಗಳ ಹಿಂದಿನ ಸಮಾಧಿಯಲ್ಲಿ ಸಿಕ್ಕಿತು ಅಪಾರ ನಿಧಿ!
ಬಲ್ಗೇರಿಯಾದ ಕಪ್ಪು ಕಡಲ ರಾಜಧಾನಿ ವರ್ಣ ನಗರದ ಸಮೀಪ 1972ರಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆ ಪುರಾತತ್ವ ಲೋಕದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಅಕ್ಟೋಬರ್ 22ರಂದು ಕಾಲುವೆ ತೋಡುವ ಕೆಲಸದಲ್ಲಿದ್ದ 22 ವರ್ಷದ ಯಂತ್ರ ಚಾಲಕ ರೈಚೋ ಮರಿನೋವ್ ಅವರಿಗೆ ಕೆಲವು ವಿಚಿತ್ರ ಮತ್ತು ಪ್ರಾಚೀನ ವಸ್ತುಗಳು ಪತ್ತೆಯಾಗಿದ್ದವು.
ಅವುಗಳಲ್ಲಿ ಚಿನ್ನದ ಬಳೆಗಳು ಮತ್ತು ಎದೆಗೆ ಧರಿಸುವ ವಿಶಿಷ್ಟ ಅಲಂಕಾರಿಕ ಆಭರಣಗಳು ಸೇರಿದ್ದವು. ಆರಂಭದಲ್ಲಿ ಈ ವಸ್ತುಗಳನ್ನು ಶೂಬಾಕ್ಸ್‌ನಲ್ಲಿಟ್ಟು ಮನೆಗೆ ಕೊಂಡೊಯ್ದಿದ್ದ ರೈಚೋ, ಕೆಲವು ದಿನಗಳ ನಂತರ ಸ್ಥಳೀಯ ಪುರಾತತ್ವ ಸಂಗ್ರಹಾಲಯಕ್ಕೆ ಅಧಿಕೃತ ಮಾಹಿತಿ ನೀಡಿದರು. ತಜ್ಞರ ಪರಿಶೀಲನೆಯ ನಂತರ, ಈ ಆವಿಷ್ಕಾರವು ಮಾನವ ನಾಗರಿಕತೆಯ ಇತಿಹಾಸದ ಹಳೆಯ ಪುಟಗಳನ್ನು ತಿರುಚಿ ಬರೆಯುವಷ್ಟು ಮಹತ್ವದ್ದಾಗಿದೆ ಎಂಬುದು ಜಗತ್ತಿಗೆ ಬೆಳಕಿಗೆ ಬಂದಿತು.

ವಿಶ್ವದ ಅತ್ಯಂತ ಹಳೆಯ ಚಿನ್ನದ ಭಂಡಾರ ಪತ್ತೆ: 294 ಸಮಾಧಿಗಳ ಹಿಂದಿರುವ ರೋಮಾಂಚನಕಾರಿ ಇತಿಹಾಸ!
ಸಂಶೋಧಕ ಮರಿನೋವ್ ಅವರು ಪತ್ತೆಹಚ್ಚಿದ ಜಾಗವನ್ನು ಇತಿಹಾಸದಲ್ಲಿ "ವರ್ಣಾ ಚಾಲ್ಕೊಲಿಥಿಕ್ ನೆಕ್ರೋಪೊಲಿಸ್" ಎಂದು ಕರೆಯಲಾಗುತ್ತದೆ. 1972 ರಿಂದ 1991 ರವರೆಗೆ ಇಲ್ಲಿ ನಡೆದ ವ್ಯವಸ್ಥಿತ ಉತ್ಖನನದಲ್ಲಿ ಒಟ್ಟು 294 ಪ್ರಾಚೀನ ಸಮಾಧಿಗಳು ಪತ್ತೆಯಾಗಿದ್ದು, ಇತಿಹಾಸ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿವೆ.
6500 ವರ್ಷಗಳ ಹಳೆಯ ಇತಿಹಾಸ: ಈ ಸಮಾಧಿಗಳು ಕ್ರಿ.ಪೂ. 4600 ರಿಂದ 4200 ರ ಕಾಲಘಟ್ಟಕ್ಕೆ ಸೇರಿದವು ಎಂದು ಇತಿಹಾಸ ತಜ್ಞರು ಅಂದಾಜಿಸಿದ್ದಾರೆ.
ಅಪಾರ ಚಿನ್ನದ ನಿಧಿ: ಇಲ್ಲಿನ ಸಮಾಧಿಗಳಿಂದ ಬರೋಬ್ಬರಿ 3,000 ಕ್ಕೂ ಹೆಚ್ಚು ಚಿನ್ನದ ವಸ್ತುಗಳು ಸಿಕ್ಕಿದ್ದು, ಅವುಗಳ ಒಟ್ಟು ತೂಕ ಸುಮಾರು 6 ಕಿಲೋಗ್ರಾಂ ಆಗಿದೆ.
ಇತಿಹಾಸ ತಜ್ಞರನ್ನು ಕಾಡುತ್ತಿರುವ ಒಂದು ರಹಸ್ಯ!
ಇಲ್ಲಿ ಪತ್ತೆಯಾದ ಒಟ್ಟು 294 ಸಮಾಧಿಗಳ ಪೈಕಿ, ಕೇವಲ 62 ಸಮಾಧಿಗಳಲ್ಲಿ ಮಾತ್ರ ಚಿನ್ನದ ಆಭರಣಗಳು ಮತ್ತು ವಸ್ತುಗಳು ಕಂಡುಬಂದಿವೆ. ಉಳಿದ ಸಮಾಧಿಗಳಲ್ಲಿ ಯಾವುದೇ ಚಿನ್ನ ಸಿಗದಿರುವುದು ಆ ಕಾಲದಲ್ಲಿದ್ದ ಸಾಮಾಜಿಕ ಅಂತರ ಅಥವಾ ಶ್ರೀಮಂತ-ಬಡವರ ನಡುವಿನ ವ್ಯತ್ಯಾಸವನ್ನು ಎದ್ದು ತೋರಿಸುತ್ತದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ.
ಒಂದೇ ಸಮಾಧಿಯಲ್ಲಿ 1.5 ಕೆಜಿ ಚಿನ್ನ
ಎಲ್ಲಾ ಸಮಾಧಿಗಳ ಉತ್ಖನನ ಸಮಯದಲ್ಲಿ "ಸಮಾಧಿ ಸಂಖ್ಯೆ 43" ಇತಿಹಾಸಕಾರರ ವಿಶೇಷ ಗಮನ ಸೆಳೆದಿದೆ. ಇಲ್ಲಿ ಪತ್ತೆಯಾದ ಸುಮಾರು 5 ಅಡಿ 7 ಇಂಚು ಎತ್ತರದ ವ್ಯಕ್ತಿಯ ಅಸ್ಥಿಪಂಜರದೊಂದಿಗೆ 990ಕ್ಕೂ ಹೆಚ್ಚು ಅತ್ಯಮೂಲ್ಯ ಚಿನ್ನದ ಕಲಾಕೃತಿಗಳು ಪತ್ತೆಯಾಗಿವೆ. ಇವುಗಳ ಒಟ್ಟು ತೂಕವೇ ಸುಮಾರು 1.5 ಕಿಲೋಗ್ರಾಂ ಆಗಿದೆ.
ಈ ಅಪರೂಪದ ಸಮಾಧಿಯಲ್ಲಿ ಕೇವಲ ಚಿನ್ನದ ನಾಣ್ಯಗಳಲ್ಲದೆ, ಚಿನ್ನದ ಬಳೆಗಳು, ಮಣಿಗಳ ಹಾರಗಳು, ಚಿನ್ನದ ಹೊದಿಕೆಯ ಹೊಂದಿರುವ ಕೊಡಲಿಯ ಹಿಡಿ, ಹಾಗೂ 16 ಇಂಚಿನ ಕಲ್ಲಿನ ಆಯುಧಗಳು ದೊರೆತಿವೆ. ಎಲ್ಲಕ್ಕಿಂತ ಆಶ್ಚರ್ಯಕರ ಸಂಗತಿ ಎಂದರೆ ಇಲ್ಲಿ ಚಿನ್ನದಿಂದ ತಯಾರಿಸಲಾದ ಅಪರೂಪದ ವಸ್ತುವೊಂದು ದೊರೆತಿದೆ. ಇಂತಹ ವಸ್ತು ಇದುವರೆಗೆ ಜಗತ್ತಿನ ಯಾವುದೇ ಪುರಾತತ್ವ ದಾಖಲೆಗಳಲ್ಲಿ ಕಂಡುಬಂದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.
ರಾಜನಾ? ಅಥವಾ ಪರಿಣಿತ ಚಿನ್ನದ ಕಾರಿಗಣ?
ವರ್ಣ ಉತ್ಖನನದ ಸಮಯದಲ್ಲಿ ಸಿಕ್ಕ ಆ ಪ್ರಮುಖ ವ್ಯಕ್ತಿ ಅಸ್ಥಿಪಂಜರ ಮಹಾನ್ ರಾಜ ಅಥವಾ ಆಡಳಿತಗಾರ ಎಂದು ಸಂಶೋಧಕರು ಭಾವಿಸಿದ್ದರು. ಆದರೆ ಇತ್ತೀಚಿನ ಅಧ್ಯಯನಗಳು ಅವರು ಚಿನ್ನದ ಕರಕುಶಲದಲ್ಲಿ ಪರಿಣತಿ ಹೊಂದಿದ್ದ ಪ್ರಮುಖ ಲೋಹಶಿಲ್ಪಿಯಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ. ಆ ಕಾಲದಲ್ಲಿ ಚಿನ್ನದ ಉತ್ಪಾದನೆ ಮತ್ತು ನಿಯಂತ್ರಣ ಹೊಂದಿದ್ದ ವ್ಯಕ್ತಿಗಳಿಗೆ ಸಮಾಜದಲ್ಲಿ ರಾಜನಿಗಿಂತಲೂ ಹೆಚ್ಚಿನ ಗೌರವ ಸಿಗುತ್ತಿತ್ತು ಎಂಬುದು ತಜ್ಞರ ಅನಿಸಿಕೆ.
ವರ್ಣ ಪುರಾತತ್ವ ಸಂಗ್ರಹಾಲಯದ ವರದಿಗಳ ಪ್ರಕಾರ, ಈ ಅಪರೂಪದ ಸಮಾಧಿ ಪ್ರದೇಶವು ಇಡಿ ಯುರೋಪಿನ ಅತ್ಯಂತ ಪ್ರಾಚೀನ ಸಾಮಾಜಿಕ ವರ್ಗ ವ್ಯವಸ್ಥೆಯ ಸಾಕ್ಷಿಯಾಗಿದೆ. ವಿಶೇಷವೆಂದರೆ, ಇದು ಪ್ರಸಿದ್ಢ ಸುಮೇರಿಯನ್ ಮತ್ತು ಈಜಿಪ್ಟ್ ನಾಗರಿಕತೆಗಳಿಗಿಂತಲೂ ಬರೋಬ್ಬರಿ 500 ವರ್ಷಗಳಷ್ಟು ಹಳೆಯದಾಗಿದೆ.
2024ರ ಅಧ್ಯಯನದಿಂದ ಹೊಸ ಮಾಹಿತಿ
2024ರಲ್ಲಿ ನಡೆದ ಅತ್ಯಾಧುನಿಕ ಐಸೋಟೋಪ್ ಅಧ್ಯಯನದಲ್ಲಿ 60 ಸಮಾಧಿಗಳ ಅವಶೇಷಗಳನ್ನು ಪರಿಶೀಲಿಸಲಾಯಿತು. ಇದರಿಂದ ಅಂದಿನ ಕಾಲದ ಶ್ರೀಮಂತರು ಮತ್ತು ಸಾಮಾನ್ಯ ಜನರ ಆಹಾರ ಪದ್ಧತಿಗಳಲ್ಲಿ ಸ್ಪಷ್ಟ ವ್ಯತ್ಯಾಸವಿದ್ದದ್ದು ತಿಳಿದುಬಂದಿದೆ.
ಉನ್ನತ ವರ್ಗದವರು ಹೆಚ್ಚು ಪ್ರಾಣಿಜನ್ಯ ಆಹಾರ ಸೇವಿಸುತ್ತಿದ್ದರೆ, ಕೆಳವರ್ಗದವರು ಮುಖ್ಯವಾಗಿ ಸಸ್ಯಾಧಾರಿತ ಆಹಾರವನ್ನು ಅವಲಂಬಿಸಿದ್ದರು. ಇದರಿಂದ ವರ್ಣಾ ಸಮಾಜದಲ್ಲಿ ನಿಜವಾದ ಸಾಮಾಜಿಕ ಅಸಮಾನತೆ ಅಸ್ತಿತ್ವದಲ್ಲಿತ್ತು ಎಂಬುದು ಮತ್ತಷ್ಟು ಸ್ಪಷ್ಟವಾಗಿದೆ.
ಇನ್ನೂ 30% ರಷ್ಟು ಪ್ರದೇಶ ಉತ್ಖನನ ಬಾಕಿ
ಜಗತ್ತನ್ನೇ ಬೆರಗುಗೊಳಿಸಿದ ವರ್ಣ ನೆಕ್ರೋಪೊಲಿಸ್‌ನ ರಹಸ್ಯಗಳು ಇನ್ನೂ ಸಂಪೂರ್ಣವಾಗಿ ಬಯಲಾಗಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ, ಈ ಐತಿಹಾಸಿಕ ತಾಣದ ಸುಮಾರು 30% ರಷ್ಟು ಪ್ರತಿಶತದಷ್ಟು ಭಾಗ ಇನ್ನೂ ಉತ್ಖನನಕ್ಕೆ ಒಳಪಡಬೇಕಿದೆ. ಕೆಲವು ಕಾರಣಗಳಿಂದ 1991 ರಲ್ಲಿ ಸ್ಥಗಿತಗೊಂಡಿದ್ದ ಈ ಸಂಶೋಧನಾ ಕಾರ್ಯವನ್ನು, ಬರೋಬ್ಬರಿ 30 ವರ್ಷಗಳ ಬಳಿಕ ಅಂದರೆ 2021 ರಲ್ಲಿ ಮತ್ತೆ ಪುನರಾರಂಭಿಸಲಾಗಿದೆ.
2026ರ ಅಂತ್ಯದೊಳಗೆ ಸಂಪೂರ್ಣ ಉತ್ಖನನ ಪೂರ್ಣಗೊಳಿಸುವ ಗುರಿಯನ್ನು ಪುರಾತತ್ವ ತಜ್ಞರು ಹೊಂದಿದ್ದಾರೆ. ಇನ್ನೂ ಮಣ್ಣಿನಡಿ ಅಡಗಿರುವ ಸಮಾಧಿಗಳಲ್ಲಿ ಸಮಾಧಿ ಸಂಖ್ಯೆ 43ಕ್ಕಿಂತಲೂ ಮಿಗಿಲಾದ, ಇನ್ನೂ ಆಘಾತಕಾರಿ ಮತ್ತು ಬೃಹತ್ ಪ್ರಮಾಣದ ಚಿನ್ನದ ಖಜಾನೆ ಮಣ್ಣಿನಡಿಯಲ್ಲಿ ಅಡಗಿರಬಹುದೇ ಎಂಬ ಕುತೂಹಲ ಇದೀಗ ಇಡೀ ವಿಶ್ವದ ಪುರಾತತ್ವ ಇಲಾಖೆಯಲ್ಲಿ ಹೆಚ್ಚಾಗಿದೆ.














Click it and Unblock the Notifications