CM Vijay: ತಮಿಳುನಾಡು ಸಿಎಂ ವಿಜಯ್-ಸಂಗೀತಾ ಮನವಿಗೆ ಕೋರ್ಟ್ ನಕಾರ: ವಿಚ್ಛೇದನ ಕೇಸ್‌ಗೆ ಟ್ವಿಸ್ಟ್
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ, ನಟ ವಿಜಯ್ ಥಳಪತಿ ಮತ್ತು ಪತ್ನಿ ಸಂಗೀತಾರ ವಿಚ್ಛೇದನ ಅರ್ಜಿಯ ವಿಚಾರಣೆಯು ಇಂದು ಸೋಮವಾರ (ಜೂನ್ 15) ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯಿತು. ನ್ಯಾಯಪೀಠ ವಕೀಲರ ಮನವಿ ತಿರಸ್ಕರಿಸಿ ಅರ್ಜಿ ವಿಚಾರಣೆಯನ್ನು ಮುಂದಿನ ಆಗಸ್ಟ್ ಮೊದಲ ವಾರಕ್ಕೆ ಮುಂದೂಡಿ ಆದೇಶಿಸಿತು.
ವಿಜಯ್ ಹಾಗೂ ಅವರ ಪತ್ನಿ ಸಂಗೀತಾ ಅವರ ನಡುವಿನ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯವು ಸೋಮವಾರ ಮಹತ್ವದ ಆದೇಶ ನೀಡಿದೆ. ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ದಂಪತಿ ಸಲ್ಲಿಸಿದ್ದ ಮನವಿಯನ್ನು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಅದರೆ ಈ ಮನವಿಯನ್ನು ಕೋರ್ಟ್ ತಿರಸ್ಕರಿಸಿತು.

ವಿಚ್ಛೇದನ ಅರ್ಜಿ ಸಂಬಂಧ ದಂಪತಿಗಳಿಬ್ಬರೂ ಮುಂದಿನ ವಿಚಾರಣೆಗೆ ಖುದ್ದಾಗಿ ಕೋರ್ಟ್‌ಗೆ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿ ಕೋರ್ಟ್ ಆದೇಶಿತು. ನ್ಯಾಯಾಲಯವು, ಈ ಹಂತದಲ್ಲಿ ಇಡೀ ಪ್ರಕರಣದ ಮುಂದಿನ ವಿಚಾರಣೆಯನ್ನು 2026ರ ಆಗಸ್ಟ್ 7ಕ್ಕೆ ಮುಂದೂಡಿ ಆದೇಶ ಹೊರಡಿಸಿತು.
ಈ ಹಿಂದೆಯೂ ಆನ್‌ಲೈನ್‌ನಲ್ಲೇ ದಂಪತಿ ಹಾಜರು
ಖ್ಯಾತ ನಟ ಹಾಗೂ ತಮಿಳಗ ವೆಟ್ರಿ ಕಳಗ ಪಕ್ಷದ ಮುಖ್ಯಸ್ಥ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರಿಂದ ವಿಚ್ಛೇದನ ಕೋರಿ ಪತ್ನಿ ಸಂಗೀತಾ 2025ರ ಡಿಸೆಂಬರ್‍ನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಜಯ್ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿರುವ ಬಗ್ಗೆ ಅವರು ಆರೋಪಿಸಿ ವಿಚ್ಛೇದನೆ ನೀಡುವಂತೆ ಕೋರಿದ್ದರು. ಒಟ್ಟು 12 ಪುಟಗಳ ಸುದೀರ್ಘ ಅರ್ಜಿಯಲ್ಲಿ ಕೌಟುಂಬಿಕ ಕಲಹ ಕುರಿತು ಸಂಗೀತಾ ವಿರಿಸಿದ್ದರು ಎನ್ನಲಾಗಿದೆ.
ಕೋರ್ಟ್ ಏಪ್ರಿಲ್ 20 ರಂದು ವಿಚಾರಣೆ ನಡೆಸಿದ್ದ ವೇಳೆ ವಿಜಯ್, ಸಂಗೀತಾ ದಂಪತಿ ಖುದ್ದು ಕೋರ್ಟ್‌ಗೆ ಹಾಜರಾಗಬೇಕಿತ್ತು. ಆದರೆ ಆ ಸಮಯದಲ್ಲಿ ವಿಜಯ್ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ತೊಡಗಿದ್ದರು. ಅಂದು ಖುದ್ದಾಗಿ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಮನವಿ ಮಾಡಿದ್ದರು. ಅದೇ ರೀತಿ ಸಂಗೀತಾ ಕೂಡ ಇಂಟರ್ ನೆಟ್ ಸಂಪರ್ಕದ ಸಹಾಯದಿಂದ ಆನ್‌ಲೈನ್ ಮೂಲಕವೇ ವಿಚಾರಣೆಗೆ ಹಾಜರಾಗಿದ್ದರು.
ಆಗಸ್ಟ್ 7ಕ್ಕೆ ದಂಪತಿ ಖುದ್ದು ಹಾಜರಿಗೆ ಸೂಚನೆ
ಅಂದು ಕೋರ್ಟ್ ಎರಡು ಕಡೆಗಿನ ವಾದವನ್ನು ಆಲಿಸಿತ್ತು, ಮುಂದಿನ ಕೋರ್ಟ್ ಪ್ರಕ್ರಿಯೆಯನ್ನು ಜೂನ್ 15ಕ್ಕೆ ನಿಗದಿಪಡಿಸಿತು. ಇಂದು ಖುದ್ದು ಇಬ್ಬರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ವಿಡಿಯೋ ಕಾನ್ಫ್‌ರೆನ್ಸ್ ಮೂಲಕ (ಆನ್‌ಲೈನ್) ಹಾಜರಾಗಲು ಮನವಿ ಮಾಡಿದ್ದರಿಂದ ಕೋಪಗೊಂಡ ನ್ಯಾಯಲಯ ದಂಪತಿ ಮನವಿಯನ್ನು ತಿರಸ್ಕರಿಸಿ, ಅರ್ಜಿ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿತು. ಮುಂದಿನ ವಿಚಾರಣೆಯಲ್ಲಿ ದಂಪತಿ ಇಬ್ಬರು ಖಡ್ಡಾಯವಾಗಿ ಖುದ್ದು ಹಾಜರಾಗುವಂತೆ ಆದೇಶಿಸಿದೆ. ವಿಜಯ್ ಸಿನಿಮಾ ನಟ, ತಮಿಳುನಾಡಿನ ಸಿಎಂ ಆಗಿದ್ದರಿಂದ ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ಹೆಚ್ಚು ಕುತೂಹಲ ಸೃಷ್ಟಿಸಿದೆ.
ಪತ್ನಿ ಸಂಗೀತಾಗಾಗಿ ವಿಜಯ್ ಕೊಲ್ಲೂರಿಗೆ ಭೇಟಿ!
ಇತ್ತೀಚೆಗೆ ಸಿಎಂ ವಿಜಯ್ ಅವರು ಕರ್ನಾಟಕದ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಇತರ ಸೆಲೆಬ್ರೆಟಿಗಳಂತೆ ಪ್ರಖ್ಯಾತ ಕೊಲ್ಲೂರು ದೇವರಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ ಅಂತಲೇ ತಿಳಿದಿದ್ದೇವೆ. ಆದರೆ ಈ ಭೇಟಿಯು ಪತ್ನಿ ಸಂಗೀತಾಗಾಗಿ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು, ನಟಿ ತ್ರಿಶಾ ಜೊತೆಗೆ ತಮ್ಮ ಪತಿಗೆ ಸಂಬಂಧ ಇದೆ ಎಂದು ದೂರಿರುವ ಪತ್ನಿ ಸಂಗೀತಾ ಪತಿ ವಿಜಯ್ ತೊರೆಯಲು ನಿರ್ಧರಿಸಿದ್ದಾರೆ. ಇತ್ತ ವಿಜಯ್ ತಾಯಿಗೆ ಸೊಸೆ ಮೇಲೆ ಇನ್ನಿಲ್ಲದ ಪ್ರೀತಿ, ವಾತ್ಸಲ್ಯವಿದೆ ಎನ್ನಲಾಗಿದೆ. ಹೀಗಾಗಿಯೇ ಅವರು ತಮ್ಮ ಸೊಸೆಯನ್ನು ಮನೆಗೆ ಕರೆದುಕೊಂಡು ಬರುವಂತೆ ಮಗ ವಿಜಯ್‌ಗೆ ಬುದ್ಧಿ ಹೇಳಿದ್ದಾರೆ. ಕೌಟುಂಬಿಕ ಕಲಹದಿಂದ ಚಿಂತೆಗೀಡಾಗಿರುವ ನಟ ವಿಜಯ್ ಸಿಎಂ ಆಗುತ್ತಿದ್ದಂತೆ ಅವರ ಮೇಲೆ ಹೆಚ್ಚಿನ ಜವಾಬ್ದಾರಿಗಳು ಇವೆ. ಈ ಕಾರಣದಿಂದ ಪತ್ನಿ ಮನೆಗೆ ಬರುವಂತೆ, ಎಲ್ಲ ಸಮಸ್ಯೆಗಳು ಸರಿ ಹೋಗುವಂತೆ ಹಾಗೂ ಮುಂದಿನ ರಾಜಕೀಯ ಜೀವನ ಸರಾಗವಾಗಿ ಸಾಗುವಂತಾಗಲು ಅವರು ದೇವರ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.













Click it and Unblock the Notifications