ಸುರ್ಜೆವಾಲ ಮುಂದೆ ಸಿಎಂ ಬದಲಾವಣೆ ಬಗ್ಗೆ ಧ್ವನಿ ಎತ್ತಿದ ಶಾಸಕರು: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಜುಲೈ 01: ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಎಲ್ಲವೂ ಸರಿ ಇಲ್ಲ ಎಂಬಂತಾಗಿದೆ. ಸ್ವಪಕ್ಷದ ವಿರುದ್ಧವೇ ಬಹಿರಂಗವಾಗಿ ಶಾಸಕರು ಅಸಮಾಧಾನ ಹೊರ ಹಾಕುತ್ತಿದ್ದು, ಇದೀಗ ಶಾಸಕರ ಅಹವಾಲು ಕೇಳಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲಾ ಅವರ ಮುಂದೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಡಿಕೆ ಶಿವಕುಮಾರ್ ಸಿಎಂ ಆಗುವ ಕುರಿತು ಚರ್ಚಿಸಿರುವುದು ರಾಜ್ಯ ಕೈ ಪಾಳಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಪಕ್ಷ ಸಂಘಟನೆ ವಿಚಾರ ಹಾಗೂ ಶಾಸಕರ ಅಹವಾಲು ಸ್ವೀಕರಿಸಲು ಸಭೆ ಮಾಡುತ್ತಿದ್ದಾರೆಯೇ ಹೊರತು, ಸಿಎಂ ಬದಲಾವಣೆ ಅಥವಾ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ರಣದೀಪ್ ಸಿಂಗ್ ಸುರ್ಜೆವಾಲ ಅವರು ಕಾಂಗ್ರೆಸ್ ಶಾಸಕರ ಜೊತೆ ಸಭೆ ಕುರಿತು ಮಾತನಾಡಿ, ಈ ಸಭೆ ಬಗ್ಗೆ ಯಾರಿಗೂ ಆತಂಕ ಬೇಡ. ರಾಷ್ಟ್ರಾದ್ಯಂತ ನಾವು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡುತ್ತಿದ್ದು, ಸಂಘಟನೆ ಹಿನ್ನೆಲೆಯಲ್ಲಿ ಈ ಸಭೆ ಮಾಡಲಾಗುತ್ತಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ವರ್ಷವನ್ನು ಸಂಘಟನೆ ವರ್ಷ ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಶಕ್ತಿ ತುಂಬಲು ಹೇಳಿದ್ದಾರೆ. ಖರ್ಗೆ ಅವರು, ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕರೆಸಿ ನವದೆಹಲಿಯಲ್ಲಿ ಸಭೆ ಮಾಡಲಾಗಿದೆ. ಆಮೂಲಕ ಕಾಂಗ್ರೆಸ್ ಕಚೇರಿ ನಿರ್ಮಾಣದಿಂದ, ಪಕ್ಷ ಸಂಘಟನೆವರೆಗೂ ಎಲ್ಲಾ ಜವಾಬ್ದಾರಿಯನ್ನು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶಾಸಕರು ಇಲ್ಲದಿರುವ ಕ್ಷೇತ್ರಗಳ ಜವಾಬ್ದಾರಿಯನ್ನು ಒಬ್ಬೊಬ್ಬ ಶಾಸಕರಿಗೆ ನೀಡಲಾಗಿದೆ ಎಂದು ವಿವರಿಸಿದರು.
ಸಂಘಟನೆ ಕುರಿತು ಮಾರ್ಗದರ್ಶನ ನೀಡಲು ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗಮಿಸಿದ್ದು, ಅವರ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದೆ. ಕೆಲವು ಶಾಸಕರ ಹೇಳಿಕೆಗಳ ಮಧ್ಯೆ ಪಕ್ಷದಲ್ಲಿ ಶಿಸ್ತು ತರಲು ಪ್ರಯತ್ನಿಸುತ್ತಿದ್ದಾರೆ. ಇದರ ಹೊರತಾಗಿ ನಾಯಕತ್ವ ಬದಲಾವಣೆ, ಸಚಿವಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ಇಲ್ಲ. ನಾವುಗಳು ಯಾರೂ ಈಗ ಆತುರದಲ್ಲಿ ಇಲ್ಲ. ನಮಗೆ 2028 ಬಹಳ ಮುಖ್ಯ. ಅದೇ ಮುಖ್ಯ ಎಂದು ಸ್ಪಷ್ಟಪಡಿಸಿದರು.
ಇಕ್ಬಾಲ್ ಹುಸೇನ್ ನೀವು ಸಿಎಂ ಆಗುವುದಾಗಿ ಹೇಳಿದ್ದಾರೆ ಕುರಿತು ಮಾತನಾಡಿ, ಅವರಿಗೆ ನಾನೇ ನೋಟೀಸ್ ನೀಡುತ್ತೇನೆ. ನಾನು ಸಿಎಂ ಆಗುತ್ತೇನೆ ಎಂದು ಯಾರೂ ಹೇಳುವ ಅಗತ್ಯವಿಲ್ಲ. ಯಾರೊಬ್ಬರೂ ಮಾಧ್ಯಮಗಳ ಮುಂದೆ ಮಾತನಾಡುವಂತಿಲ್ಲ. ಇಕ್ಬಾಲ್ ಹುಸೇನ್, ಬಿ.ಆರ್ ಪಾಟೀಲ್, ಬಾಲಕೃಷ್ಣ ಯಾರೇ ಆಗಲಿ, ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಯಾರೂ ಮಾತನಾಡಬಾರದು. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರಿದ್ದು, ನಾವೆಲ್ಲರೂ ಅವರ ಕೈ ಬಲಪಡಿಸಬೇಕು ಎಂದು ತಿಳಿಸಿದರು.
ಬಿ.ಆರ್ ಪಾಟೀಲ್ ಅವರು ಅನುದಾನ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಬಗ್ಗೆ ಮಾತನಾಡಿ, ರಾಜ್ಯ ಸರ್ಕಾರ ಬಜೆಟ್ ನಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿಯೇ 1 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದೆ. 54 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ, 19 ಸಾವಿರ ಕೋಟಿ ರೈತರಿಗೆ ವಿದ್ಯುತ್ ನೀಡಲು ವ್ಯಯಿಸಲಾಗುತ್ತಿದೆ. ಸಾಮಾಜಿಕ ಕಲ್ಯಾಣ ಯೋಜನೆ ಸೇರಿದಂತೆ ಇತರೆ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಇದು ಜನರು ಹಾಗೂ ಕ್ಶೇತ್ರದ ಅಭಿವೃದ್ಧಿಗಳಿಗೆ ಅಲ್ಲವೇ? ನಮ್ಮ ರಾಜ್ಯದಲ್ಲಿ ಆಗುತ್ತಿರುವ ಕಲ್ಯಾಣ ಯೋಜನೆಗಳು ಬೇರೆ ಯಾವುದೇ ರಾಜ್ಯದಲ್ಲಿ ಆಗುತ್ತಿಲ್ಲ ಎಂದು ತಿಳಿಸಿದರು.












Click it and Unblock the Notifications