ಮತ್ತೆ ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ಎಂಟ್ರಿ: ಡಿ ಕೆ ಶಿವಕುಮಾರ್ ಏನಂದ್ರು ಗೊತ್ತಾ?
ಬೆಂಗಳೂರು: 2024 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿತ್ತು. ಇದೀಗ ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಧರ್ಮ ಪಾಲನೆಗೆ ಕಮಲ-ದಳ ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕರಣಕ್ಕೆ ಎಂಟ್ರಿಯಾಗಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಈಗಾಗಲೇ ಸ್ಥಳೀಯ ಮಟ್ಟದಿಂದಲೂ ಪಕ್ಷವನ್ನ ಒಗ್ಗೂಡಿಸುವ ನಿಟ್ಟಿನಲ್ಲಿ ಜೆಡಿಎಸ್ ರಾಜ್ಯಾದ್ಯಂತ ಪ್ರವಾಸಕ್ಕೆ ಯೋಜನೆ ರೂಪಿಸಿದ್ದು, ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬರೋಬ್ಬರಿ 150 ಕ್ಕೂ ಹೆಚ್ಚಿನ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ, ಕುಮಾರಸ್ವಾಮಿ ಸಿಎಂ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಇನ್ನೂ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರವನ್ನ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಚನ್ನಪಟ್ಟಣ ಕ್ಷೇತ್ರವನ್ನ ಬಿಟ್ಟು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ನಡೆಸಿ ಗೆಲುವು ಕಂಡ ಕುಮಾರಸ್ವಾಮಿ, ಇದೀಗ ಮೋದಿ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನವನ್ನ ಪಡೆದುಕೊಂಡಿದ್ದಾರೆ. ಇತ್ತ ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿಎಂ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಹೆಚ್ ಡಿ ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಲಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ರಾಜ್ಯ ರಾಜಕಾರಣ ಮಾತ್ರ ಯಾಕೆ ಹಳ್ಳಿಯಿಂದಲೇ ರಾಜಕಾರಣ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಕುಮಾರಸ್ವಾಮಿ ಅವರು ಚರ್ಚೆಗೆ ಬರುತ್ತಾರಂತೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ,ನಾನು ಅವರನ್ನು ಸ್ವಾಗತಿಸುತ್ತೇನೆ. ಮೊದಲು ಅವರು ಬಂದರೆ ಬಹಳ ಒಳ್ಳೆಯದು. ಬಿಜೆಪಿ ರಾಜ್ಯ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಕುಮಾರಸ್ವಾಮಿ ಯಾರು ಬೇಕಾದರೂ ಬರಲಿ. ಅವರ ಪಂಥಾಹ್ವಾನ ಸ್ವೀಕಾರ ಮಾಡಿದ್ದೇನೆ. ಸಾರ್ವಜನಿಕ ವೇದಿಕೆ, ಅಧಿವೇಶನ ಅಥವಾ ಮಾಧ್ಯಮ ವೇದಿಕೆಯಾದರೂ ಸರಿ. ಚರ್ಚೆಗೆ ನಾನು ಸಿದ್ಧ ಎಂದರು.
ಸಿದ್ದರಾಮಯ್ಯ ಅವರನ್ನು ಲೀಸ್ಡ್ ಸಿಎಂ ಎಂಬ ಕುಮಾರಸ್ವಾಮಿ ಟೀಕೆ ಕುರಿತು ಮಾತನಾಡಿ, ಅವರ ಮಾತನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ. ಮೊದಲಿನಿಂದ ಮಾಧ್ಯಮಗಳ ಮುಂದೆ ಡೈಲಾಗ್ ಹೊಡೆದು ಹೋಗುವುದನ್ನು ನೋಡಿದ್ದೇವೆ. ಅವರ ಟೀಕೆಗೆ ಸಿದ್ದರಾಮಯ್ಯ ಅವರು ತಿರುಗೇಟು ನೀಡುತ್ತಾರೆ. ಆ ಸಾಮರ್ಥ್ಯ ಅವರಿಗಿದೆ. ಬಹಿರಂಗ ಚರ್ಚೆಗೆ ಯಾವಾಗ ಸಮಯ ನಿಗದಿ ಮಾಡುತ್ತೀರಾ ಹೇಳಿ. ಇವತ್ತು ಸಂಜೆಯಿಂದಲೇ ಚರ್ಚೆಗೆ ಸಿದ್ಧ. ನರೇಗಾ ವಿಚಾರದಲ್ಲಿ ನನಗೆ ಚರ್ಚೆ ಮಾಡಲು ಯಾವ ತಯಾರಿಯೂ ಬೇಕಾಗಿಲ್ಲ.
ಎಲ್ಲಾ ಮಾಹಿತಿಗಳು ನನ್ನ ಬೆರಳ ತುದಿಯಲ್ಲಿವೆ. ಬೇರೆ ಎಲ್ಲೂ ಹೋಗಬೇಕಿಲ್ಲ. ನರೇಗಾ ಯೋಜನೆಯಲ್ಲಿ ನಮ್ಮ ಕನಕಪುರ ತಾಲ್ಲೂಕಿನಲ್ಲಿ ಎಷ್ಟು ಕೆಲಸ ಆಗಿದೆ ಎಂದು ನಮಗೆ ಗೊತ್ತಿದೆ. ನರೇಗಾ ಯೋಜನೆ ಜಾರಿಯಲ್ಲಿ ಕನಕಪುರ ನಂಬರ್ 1 ಎಂದು ಬಿಜೆಪಿಯ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಈ ವಿಚಾರ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿಜಯೇಂದ್ರ ಅವರಿಗೆ ಗೊತ್ತಿದೆಯೋ ಇಲ್ಲವೋ. ನಮ್ಮ ತಾಲ್ಲೂಕಿನಲ್ಲಿ ಅವ್ಯವಹಾರ ಆಗಿದೆಯೇ ಇಲ್ಲವೇ ಎಂದು ಕೇಂದ್ರ ಸರ್ಕಾರ ಹತ್ತು ತಂಡ ಕಳುಹಿಸಿ ತನಿಖೆ ಮಾಡಿಸಿದೆ ಎಂದು ತಿಳಿಸಿದರು.
ಮನರೇಗಾ ವಿಚಾರವಾಗಿ ಪ್ರತಿಭಟನೆ ಕುರಿತು ಮಾತನಾಡಿ, ಮನರೇಗಾ ವಿಚಾರವಾಗಿ ಬಹಿರಂಗ ಚರ್ಚೆ ಮಾಡುವ ವಿರೋಧ ಪಕ್ಷಗಳ ಪಂಥಾಹ್ವಾನವನ್ನು ನಾನು ಸ್ವೀಕರಿಸುವೆ. ಅವರು ಯಾವಾಗ ಬೇಕಾದರೂ ಯಾವುದೇ ವೇದಿಕೆಯಲ್ಲಾದರೂ ಚರ್ಚೆ ಬರಲಿ, ನಾನು ಸಿದ್ಧ. ನಾವು ಅದನ್ನು ತೀರ್ಮಾನ ಮಾಡುತ್ತೇವೆ. ವಿರೋಧ ಪಕ್ಷದವರು ಚರ್ಚೆಗೆ ಸಿದ್ಧ ಎಂದಿದ್ದಾರೆ. ಅವರು ಯಾವುದೇ ಮಾಧ್ಯಮ ವೇದಿಕೆಯಲ್ಲಾದರೂ, ಯಾವಾಗ ಕರೆದರೂ ನಾನು ಚರ್ಚೆಗೆ ಬರುತ್ತೇನೆ ಎಂದರು.











Click it and Unblock the Notifications