ಸರ್ಕಾರ ಬೀಳಿಸಲು 1 ಸಾವಿರ ಕೋಟಿ ಮೀಸಲು: ಸ್ಟೋಟಕ ವಿಷಯದ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 30: ಮುಖ್ಯಮಂತ್ರಿ ಆಗಲು ಸಾವಿರ ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಸ್ಫೋಟಕ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿದೆ. ಈ ಸಂಬಂಧ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆಗೆ ಸೋಮವಾರ ಮಾತನಾಡಿ, ಇದರ ಬಗ್ಗೆ ಈಗಾಗಲೇ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಪಕ್ಷ ಹಾಗೂ ಸರ್ಕಾರ ಉರುಳಿಸಲು ಈ ಕೆಲಸ ಮಾಡಲಾಗುತ್ತಿದೆ. ನಮ್ಮ ಕಾನೂನು ಸಲಹೆಗಾರರ ಬಳಿ ಚರ್ಚೆ ನಡೆಸಲಾಗುವುದು. ಈ ಕೃತ್ಯ ಐಟಿಯವರಿಂದ ತನಿಖೆಗೆ ಒಳಗಾಗಬೇಕು ಎಂದರು.

2025 ಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು
ಮುಂದಿನ 2025 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರನ್ನು ಹರಿಸಲು ಪ್ರಯತ್ನ ಮಾಡಲಾಗುವುದು. ಈಗಾಗಲೇ ಎತ್ತಿನಹೊಳೆ ನೀರನ್ನು ಮೇಲಕ್ಕೆ ಎತ್ತಿ ಸಂಗ್ರಹ ಮಾಡಲಾಗಿದೆ. ತುಮಕೂರು ಹಾಗೂ ಹಾಸನ ಜಿಲ್ಲೆಯಲ್ಲಿ ಅರಣ್ಯ ಭೂಮಿಯನ್ನು ಗುರುತಿಸಲಾಗಿದೆ. ಇದನ್ನು ನೀರಾವರಿ ಇಲಾಖೆಗೆ ವರ್ಗಾವಣೆ ಮಾಡಬೇಕು. ಈ ವಿಚಾರವಾಗಿ ಪ್ರತ್ಯೇಕ ಸಭೆಯನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅರಣ್ಯ ಸಚಿವರ ಬಳಿಯೂ ಮಾತನಾಡಲಾಗವುದು ಎಂದರು.
ಮಳೆ ಕಡಿಮೆಯಾಗುತ್ತಿದೆ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಬಿಜೆಪಿ ಅವಧಿಯಲ್ಲಿ ಕೊರಟಗೆರೆ ಬಳಿಯ ಬೈರಗೊಂಡ್ಲು ಜಲಾಶಯದ ನಿರ್ಮಾಣ ಯೋಜನೆಯನ್ನು ಬದಲಾವಣೆ ಮಾಡಿದ್ದರು. ಈ ಕಾರಣಕ್ಕೆ ಸ್ಥಳ ವೀಕ್ಷಣೆ ಮಾಡಬೇಕು. ಇಲ್ಲಿ ದೊಡ್ಡಬಳ್ಳಾಪುರದ ಒಂದಷ್ಟು ಭಾಗವೂ ಸೇರಿಕೊಂಡಿದೆ. ಪರಿಹಾರ ವಿಚಾರದಲ್ಲಿ ವ್ಯಾಜ್ಯಗಳಿವೆ. ಈ ಭಾಗದ ರೈತರು ಒಂದೇ ರೀತಿಯ ಪರಿಹಾರ ನೀಡಿ ಎಂದು ಹೇಳುತ್ತಿದ್ದಾರೆ. ದಸರಾ ನಂತರ ಎತ್ತಿನಹೊಳೆಯಿಂದ ಬೈರಗೊಂಡ್ಲುವರೆಗೂ ಸ್ಥಳ ವೀಕ್ಷಣೆ ನಡೆಸಿ ತೊಂದರೆಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳಿಂದ ಮಾಹಿತಿ ಸೋರಿಕೆಯಾಗುತ್ತಿದೆ. ನನಗೆ ಉತ್ತಮವಾಗಿ ಗುಪ್ತಚರ ಮಾಹಿತಿ ದೊರಕುತ್ತದೆ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, ಕುಮಾರಸ್ವಾಮಿ ಅವರು ರಾಜಕಾರಣ, ಬೇರೆ ಮಾತು ಎಲ್ಲವನ್ನು ಬಿಟ್ಟು ರಾಜ್ಯದಲ್ಲಿ 50 ಸಾವಿರದಿಂದ 1 ಲಕ್ಷ ಜನರಿಗೆ ಉದ್ಯೋಗ ನೀಡುವಂತಹ ಕೆಲಸ ಮಾಡಲಿ. ಕಾಂಗ್ರೆಸ್ ಸರ್ಕಾರ ಅವರಿಗೆ ಬೇಕಾದಂತಹ ಸಹಕಾರ ನೀಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕುಮಾರಸ್ವಾಮಿಗೆ ಮೋದಿ ಅವರು ಉಕ್ಕು, ಕೈಗಾರಿಕೆ ಎನ್ನುವ ದೊಡ್ಡ ಹಾಗೂ ಉತ್ತಮ ಖಾತೆ ಕೊಟ್ಟಿದ್ದಾರೆ. ಅವರಿಗೆ ಸಿಕ್ಕಿರುವ ಒಳ್ಳೇ ಅವಕಾಶ ಬಳಸಿಕೊಳ್ಳಲಿ. ಯೋಗಕ್ಕಿಂತ ಯೋಗಕ್ಷೇಮ ಮುಖ್ಯವಾದುದು. ಹಾಸನ, ಬೆಂಗಳೂರು, ಮಂಡ್ಯ, ಬೀದರ್, ಕಲಬುರ್ಗಿ ಸೇರಿದಂತೆ ಇತರೇ ಭಾಗಗಳಿಗೆ ಉತ್ತಮ ಕೆಲಸ ಮಾಡಿ, ಏನಾದರೂ ಸಾಕ್ಷಿ ಬಿಟ್ಟು ಹೋಗಲಿ. ರಾಜಕೀಯ ಇದ್ದಿದ್ದೇ... ಏಕೆ ಇಂತಹ ಅವಕಾಶವನ್ನು ಕಳೆದುಕೊಳ್ಳುತ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದರು.












Click it and Unblock the Notifications