ಬಾಕಿ ಪಾವತಿಗೆ ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ: ಗುತ್ತಿಗೆದಾರರ ಸವಾಲಿಗೆ ಡಿಕೆಶಿ ಹೇಳಿದ್ದೇನು?

ಬೆಂಗಳೂರು, ಆಗಸ್ಟ್‌ 08: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಮೂರು ತಿಂಗಳು ಕಳೆದಿಲ್ಲ. ಆಗಲೇ ಸರ್ಕಾರ ಹಾಗೂ ಸಚಿವರ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬಂದಿದ್ದು, ಇದೀಗ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ದ ವಿರುದ್ಧ ಕಮಿಷನ್​ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಈ ಕುರಿತು ಬಾಕಿ ಬಿಲ್ ಪಾವತಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಗುತ್ತಿಗೆದಾರರ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ ಕೆ ಶಿವಕುಮಾರ್‌, ಯಾವ ಬಿಲ್ ವಿಚಾರವೂ ಗೊತ್ತಿಲ್ಲ. ಯಾರಿಗೂ ಉತ್ತರ ಕೊಡಲ್ಲ. ನನಗೂ ಪ್ರಜ್ಞೆ ಇದೆ. ನನಗೂ ರಾಜಕಾರಣ ಗೊತ್ತಿದೆ. ಯಾವ ಗುತ್ತಿಗೆದಾರನ ಹಿಂದೆ ಯಾರಿದ್ದಾರೆಂದು ನನಗೂ ಗೊತ್ತಿದೆ ಎಂದು ಕಿಡಿಕಾರಿದರು.

DK Shivakumar: No Backmail Will Take Place In Front Of Me

ಯಾವ ಬ್ಲ್ಯಾಕ್​​ಮೇಲ್ ಕೂಡ ನನ್ನ ಮುಂದೆ ನಡೆಯುವುದಿಲ್ಲ. ನಾವು ವಿಪಕ್ಷದಲ್ಲಿದ್ದಾಗ ನಮ್ಮ ಬಳಿ ಹುಡುಕಿಕೊಂಡು ಬರುತ್ತಿರಲಿಲ್ವಾ? ಎಂದು ಪ್ರಶ್ನಿಸಿದ ಅವರು, ನಾನು ಯಾರಿಗೂ ಪ್ರಮಾಣ ಮಾಡಬೇಕಾದ ಅವಶ್ಯಕತೆ ಇಲ್ಲ. ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ. ಇಲ್ಲದಿದ್ದರೆ ಆಗುವುದಿಲ್ಲ. ಯಾರಿಗೋ ಬ್ಲ್ಯಾಕ್​ಮೇಲ್ ಮಾಡಿದಂತೆ ನನಗೆ ಮಾಡಲು ಬರಬೇಡಿ ಎಂದು ಡಿ ಕೆ ಶಿವಕುಮಾರ್‌ ಖಡಕ್​ ಆಗಿ ತಿರುಗೇಟು ನೀಡಿದ್ದಾರೆ.

ಇನ್ನೂ ಒಂದೇ ವಾರದಲ್ಲಿ ಹಣ ಬಿಡುಗಡೆ ಆಗುತ್ತಾ? ಯಾವ ಒತ್ತಡ ಇದ್ದರೂ ತಡೆದುಕೊಳ್ಳಲು ರೆಡಿ. ಯಾರಿಗೋ ಬ್ಲಾಕ್ ಮೇಲ್ ಮಾಡುವಂತೆ ನನಗೆ ಮಾಡಲು ಬರಬೇಡಿ. ನನಗೆ ಬೆದರಿಕೆ ಹಾಕಿದ್ರೆ ಕೇಳ್ತೀನಾ.? ಬಿಜೆಪಿ ವಿರುದ್ಧ ನಾವು ಆರೋಪ ಮಾಡಿದ್ದು ಸತ್ಯ. ಲೆಟರ್ ಕೊಟ್ಟಿದ್ದು ಸತ್ಯ. ಅಶ್ವಥ್ ನಾರಾಯಣ್, ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ತನಿಖೆ ಮಾಡಿ ಅಂತ ಸದನದಲ್ಲಿ ಹೇಳಿದ್ದು ಸತ್ಯ ಎಂದು ಹೇಳಿದರು.

ಶಾಸಕರ ಸಭೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಶಾಸಕರು ನಾಳೆ ಎಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲಿದ್ದಾರೆ. ಹಿಂದೆ ಆದ ತಾರತಮ್ಯ ಚರ್ಚೆ ಮಾಡುತ್ತೇವೆ, ಇನ್ನೂ ಈ ಸಭೆಯಲ್ಲಿ ಕ್ಷೇತ್ರದ ಕುರಿತು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನ ಯಾರು ಹೇಳಿಸುತ್ತಿದ್ದಾರೆ ಎಂದೂ ಗೊತ್ತಿದೆ. ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ನಾವು ಕಾನೂನು ಪ್ರಕಾರ ಕೆಲಸ ಮಾಡ್ತಿದ್ದೀವಿ. ಈ ರೀತಿಯ ಬೆದರಿಕೆ, ಬ್ಲಾಕ್‌ಮೇಲ್‌ ಗೆ ನಾನು ಜಗ್ಗುವುದಿಲ್ಲ. ರಾಜ್ಯಪಾಲರಿಗೆ ಪತ್ರ ಕೊಡೋದು, ರಾಷ್ಟ್ರಪತಿಗೆ ಪತ್ರ ಕೊಡೋದು, ಪ್ರಧಾನಿಗಳನ್ನ ಭೇಟಿ ಆಗೋದು ಏನ್‌ ಬೇಕಾದರೂ ಮಾಡಿಕೊಳ್ಳಲಿ ಎಂದರು.

ನಿಮ್ಮ ಮೇಲೆ ಒತ್ತಡ ಹಾಕಲು ಈ ರೀತಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವ ಒತ್ತಡ ಇದೆ, ಯಾರು ಒತ್ತಡ ಹಾಕುತ್ತಾರೆ, ಯಾರು ಹೆದರಿಸುತ್ತಾರೆ ನನಗೆ, ನನಗೇ ಹೆದರಿಸೋಕೆ ಆಗುತ್ತಾ? ಯಾವುದೇ ಒತ್ತಡ ಬರಲಿ, ಅದನ್ನು ತಡೆದುಕೊಳ್ಳುವ ಶಕ್ತಿ ನನಗಿದೆ. ಈ ಗುತ್ತಿಗೆದಾರರ ವಿಚಾರಕ್ಕೆಲ್ಲ ನಾನು ಪ್ರತಿಕ್ರಿಯೆ ನೀಡೋಕೆ ಹೋಗಲ್ಲ ಎಂದು ಹೇಳಿದರು.

ಗುತ್ತಿಗೆದಾರರು ಕುಮಾರಸ್ವಾಮಿ ಅವರನ್ನು ಯಾವ ಕಾರಣಕ್ಕೆ ಭೇಟಿ ಮಾಡಿದ್ದರು ಎಂಬ ಪ್ರಶ್ನೆಗೆ, ಮಾಡಲಿ ಬಿಡಿ, ನಾವು ವಿರೋಧ ಪಕ್ಷದಲ್ಲಿ ಇದ್ದಿದ್ದರೆ, ನಮ್ಮನ್ನು ಕೂಡ ಭೇಟಿ ಮಾಡುತ್ತಿರಲಿಲ್ಲವೇ? ಇದನ್ನ ತಪ್ಪು ಎಂದು ಹೇಳಲು ಆಗುತ್ತದೆಯೇ? ಇದು ಅತ್ಯಂತ ಸಾಮಾನ್ಯ ಸಂಗತಿ. ರಾಜಕಾರಣಿಗಳು, ವಿರೋಧ ಪಕ್ಷಗಳು ಇರುವುದೇ ಇಂತಹ ಕೆಲಸ ಮಾಡೋಕೆ, ಮಾಡಲಿ ಬಿಡಿ ಎಂದು ಉತ್ತರಿಸಿದರು.

ಒಂದಷ್ಟು ಜನ ಗುತ್ತಿಗೆದಾರರು ಗುಂಪು ಕಟ್ಟಿಕೊಂಡು ಸರ್ಕಾರದ ವಿರುದ್ದ ಪದೇ, ಪದೇ ಹೇಳಿಕೆ ನೀಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಏನಾದ್ರೂ ಎತ್ತಿಕಟ್ಟಲಿ, ಏನ್‌ ಬೇಕಾದ್ರೂ ಮಾಡಲಿ, ನಾನು ಯಾರಿಗೂ ಪ್ರಮಾಣ ಮಾಡಬೇಕಾಗಿಲ್ಲ. ಕಾನೂನು ಏನು ಹೇಳಿದೆಯೋ, ಅದೇ ಉತ್ತರ. ಕೆಲಸ ಮಾಡಿದ್ದರೆ ಬಿಲ್‌ ಕೊಡುತ್ತೇವೆ, ಕೆಲಸ ಮಾಡಲಿಲ್ಲ ಅಂದರೆ ಬಿಲ್‌ ಕೊಡುವುದಿಲ್ಲ. ಇವತ್ತು ಅರ್ಜಿ ಕೊಟ್ಟರು, ನಾಳೆ ಟೆಂಡರ್‌ ಆಯಿತು, ಒಂದು ತಿಂಗಳಲ್ಲಿ 1 ಸಾವಿರ ಕೋಟಿ ರೂ. ಕೆಲಸ ಮಾಡಲು ಆಗುತ್ತಾ ನೀವೇ ಹೇಳಿ. ಅಧಿಕಾರಿಗಳಿಗೆ ಹೇಳಿದ್ದೇವೆ, ಮೌಲ್ಯಮಾಪನ ಮಾಡಿ, ಕೆಲಸ ಆಗಿದ್ದರೆ ಬಿಲ್‌ ಮಾಡಿ ಎಂದು. ಅವರು ಆ ಕೆಲಸ ನೋಡಿಕೊಳ್ಳುತ್ತಾರೆ. ಸರ್ಕಾರ ಇರುವುದು ನೀತಿ ರೂಪಿಸಲು. ಹಾಗಾಗಿ ನಾವು ಬಿಲ್ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಹಿಂದೆ ನೀವು ನಲವತ್ತು ಪರ್ಸೆಂಟ್‌ ಆರೋಪ ಮಾಡಿದ್ದರಲ್ಲ ಅದರ ಬಗ್ಗೆ ಏನು ಹೇಳುವಿರಿ ಎನ್ನುವ ಪ್ರಶ್ನೆಗೆ, "ಹೌದು ನಾವು ಆರೋಪ ಮಾಡಿದ್ದು ಸತ್ಯ, ತನಿಖೆಗೆ ಪತ್ರ ಕೊಟ್ಟಿದ್ದು, ತನಿಖೆ ಮಾಡುತ್ತಿರುವುದು, ಅಶ್ವಥ್‌ ನಾರಾಯಣ್‌ ತನಿಖೆ ಮಾಡಿ ಎಂದು ಹೇಳಿದ್ದು, ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ಬೊಮ್ಮಾಯಿ ಅವರು ತನಿಖೆ ಮಾಡುತ್ತೇವೆ ಎಂದು ಹೇಳಿದ್ದು, ಲೋಕಾಯುಕ್ತ ಅವರು 130 ಕೋಟಿಯನ್ನು ಬಿಲ್‌ ಇಲ್ಲದೆ ಹಣ ಕೊಟ್ಟಿದ್ದಾರೆ ಎಂದು ವರದಿ ನೀಡಿರುವುದು, ಅಧಿಕಾರಿಗಳನ್ನು ಅಮಾನತು ಮಾಡಿರುವುದು ಎಲ್ಲವೂ ಸತ್ಯ, ಸತ್ಯ ಎಂದು ಹೇಳಿದರು.

ಗುತ್ತಿಗೆದಾರರು ಬಿಜೆಪಿ ಮೇಲೆ ಆರೋಪ ಮಾಡಿದ್ದರು, ಈಗ ನಿಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, "ಗುತ್ತಿಗೆದಾರರು ನನ್ನ ಬಳಿಯೂ ಬಂದಿದ್ದರು, ಕೆಲಸ ಮಾಡಿದ್ದರೆ ನಿಮಗೆ ಹಣ ಸಿಗುತ್ತದೆ ಎಂದು ಅವರಿಗೆ ಹೇಳಿದೆ. ಬಿಲ್‌ ಕೊಡೋದಕ್ಕೂ ಒಂದು ಪ್ರಕ್ರಿಯೆ ಇದೆ. ಎರಡು, ಮೂರು ವರ್ಷ ಕಾದಿಲ್ಲವೇ ಅವರು? ಜಲಸಂಪನ್ಮೂಲ ಇಲಾಖೆಯಲ್ಲಿ ಇರುವುದು 600 ಕೋಟಿ ರೂ. ಆದರೆ 25 ಸಾವಿರ ಕೋಟಿ ಬಿಲ್‌ ಇದೆ. ಎಲ್ಲಿಂದ ಕೊಡುವುದು? ಕೆಲಸ ಮಾಡದವರಿಗೆಲ್ಲ ದುಡ್ದು ಕೊಡಲು ಆಗುತ್ತದೆಯೇ? ಎಂದು ಮರುಪ್ರಶ್ನಿಸಿದರು.

ಇಂದು ನಡೆದ ಬೆಂಗಳೂರು ಸಚಿವರು, ಶಾಸಕರ ಜತೆಗಿನ ಸಭೆ ಬಗ್ಗೆ ಕೇಳಿದಾಗ, "ಶಾಸಕರ ಕ್ಷೇತ್ರಗಳ ಸಮಸ್ಯೆಗಳು, ಕಳೆದ ಸರ್ಕಾರ ಮಾಡಿದ್ದ ತಾರತಮ್ಯಗಳ ಬಗ್ಗೆ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಆರ್ಥಿಕ ಸ್ಥಿತಿ ಗಮನದಲ್ಲಿಟ್ಟುಕೊಂಡು ಯಾವ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+