ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ತೀನಿ ಅಂದವರಿಗೆ ಕುಮಾರಸ್ವಾಮಿ ಹೇಳಿದ ಸತ್ಯ ಬಿಚ್ಚಿಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 16: ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ತೀನಿ ಅಂದವರಿಗೆ ಕುಮಾರಸ್ವಾಮಿ, ನೀನು ದಳದಲ್ಲೇ ಇರು, ಆದರೆ ಬಿಜೆಪಿಗೆ ಕೆಲಸ ಮಾಡುವ ಬದಲು ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡು ಎಂದು ಹೇಳಿದ್ದಾರಂತೆ. ಇದು ಹೇಗೆ ಸಾಧ್ಯ? ಮೋಸ ಮಾಡಿದಂತೆ ಅಲ್ಲವೇ? ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ತೀನಿ ಅಂದವರಿಗೆ ಕುಮಾರಸ್ವಾಮಿ ಹೀಗೆ ಹೇಳಿದ್ದಾರಂತೆ ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಗೌರಿಶಂಕರ್ ಮತ್ತು ಮಂಜುನಾಥ್ ಅವರನ್ನೇ ಕೇಳಬೇಕು. ಈ ಕಾರಣಕ್ಕೆ ಇವರಿಬ್ಬರು ಕಾರ್ಯಕರ್ತರ ಅಭಿಪ್ರಾಯ ಪಡೆದುಕೊಂಡು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ನಮ್ಮ ಪಕ್ಷದ ಬಿ.ಎಲ್.ಶಂಕರ್, ನರೇಂದ್ರಸ್ವಾಮಿ, ವಿನಯ್ ಕುಲಕರ್ಣಿ ಸೇರಿದಂತೆ ಇವರಿಗೆ ಪಕ್ಷದಲ್ಲಿ ಇರುವಂತಹ ಹಿರಿತನ ಹೊಸದಾಗಿ ಪಕ್ಷ ಸೇರ್ಪಡೆ ಆದವರಿಗೂ ಇದೆ. ಎಷ್ಟೇ ಮತಗಳನ್ನು ಪಡೆದುಕೊಂಡು ಸೋತಿದ್ದರೂ ನಮ್ಮ ಪಕ್ಷದ ಕಷ್ಟಕಾಲದಲ್ಲಿ ಜೊತೆಗೆ ನಿಂತ ಕಾರ್ಯಕರ್ತರು, ನಾಯಕರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ.
ದಿವಂಗತ ಧೃವನಾರಾಯಣ ಅವರು ಕೇವಲ 1 ಮತಗಳ ಅಂತರದಲ್ಲಿ ಗೆದ್ದಿದ್ದರು, ನಂತರದ ಲೋಕಸಭಾ ಚುನಾವಣೆಯಲ್ಲಿ ಒಂದೊಂದು ಬೂತಿನಲ್ಲಿ ಒಂದೊಂದೇ ಮತಗಳು ಕಡಿಮೆಯಾಗಿ 1200 ಮತಗಳ ಅಂತರದಲ್ಲಿ ಸೋತರು, ಅವರ ಮಗ 50 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾನೆ. ಸೌಮ್ಯಾ ರೆಡ್ಡಿ, ದಿನೇಶ್ ಗುಂಡೂರಾವ್ ಅವರು ಕಡಿಮೆ ಅಂತರದಲ್ಲಿ ಸೋಲು ಗೆಲುವು ಕಂಡಿದ್ದಾರೆ. ಅಂದರೆ ನಾವು ಯಾರನ್ನೂ ಕೂಡ ಎಂತಹ ಸಂದರ್ಭದಲ್ಲಿಯೂ ದೂರ ಮಾಡುವುದಿಲ್ಲ ಎನ್ನುವುದಕ್ಕೆ ಈ ಫಲಿತಾಂಶಗಳು ಉದಾಹರಣೆ ನೀಡಿವೆ.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗಬೇಕು, ಹಳಬರು, ಹೊಸಬರು ಎಲ್ಲರಿಗೂ ಅವಕಾಶ ನೀಡುತ್ತಿದ್ದೇವೆ, ಮುಂದೆಯೂ ನೀಡುತ್ತೇವೆ. ಕುಮಾರಸ್ವಾಮಿ ಅವರೇ, ಗೌರಿಶಂಕರ್ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ನೋಟಿಸ್ ನೀಡಿ, ಮತ್ತೆ ನಿಮ್ಮ ಜತೆಯೇ ಕೆಲಸ ಮಾಡು ಎಂದರೆ ಅದು ಹೇಗೆ ಸಾಧ್ಯ. ಮನುಷ್ಯನಿಗೆ ತನ್ನದೇ ಆದ ಸ್ವಾಭಿಮಾನವಿರುತ್ತದೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ನಾನು ಮತ್ತು ಚೆನ್ನಿಗಪ್ಪ ಅವರು ಒಂದೇ ಜಿಲ್ಲೆಯವರು, ಒಟ್ಟಿಗೆ ರಾಜಕಾರಣ ಮಾಡುತ್ತಾ ಬೆಳೆದವರು. ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಅವರನ್ನು ನೋಡಲು ಹೋಗಿದ್ದೆ. ಈ ವೇಳೆ 'ಯಾವ ಕಾರಣಕ್ಕೆ ಚುಂಚನಗಿರಿ ಸ್ವಾಮೀಜಿಗಳ ಮೇಲೆ ಪ್ರಕರಣ ದಾಖಲಿಸಬೇಕಾಯಿತು' ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದರು.
ಡಿ.ಸಿ.ಗೌರಿಶಂಕರ್ ಅವರನ್ನು ಸೋಲಿಸಲು ನಾವು ಸಾಕಷ್ಟು ಕೆಲಸ ಮಾಡಿದೆವು, ನಮ್ಮ ಅಭ್ಯರ್ಥಿ 6 ಸಾವಿರ ಮತಗಳನ್ನು ಪಡೆದರೆ ಗೌರಿಶಂಕರ್ ಅವರು 2 ಸಾವಿರ ಮತಗಳ ಅಂತರದಿಂದ ಸೋತರು. ಈಗ ನಮ್ಮವರೇ ಆಗಿದ್ದಾರೆ, ಪ್ರಬಲ ಶಕ್ತಿಯೊಂದು ತುಮಕೂರಿನ ಭಾಗದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದೆ.ಮಂಜುನಾಥ್, ಗೌರಿಶಂಕರ್ ಸೇರಿದಂತೆ ಜೆಡಿಎಸ್ ಪಕ್ಷದ ಅನೇಕರ ಬಳಿ ಕೇಳಿದ್ದೇನೆ, ʼಕುಮಾರಸ್ವಾಮಿ ಅವರು ಹೇಗೆʼ ಎಂದು. ಒಂದು ನಿಮಿಷ ಇದ್ದ ನಿರ್ಧಾರ ಇನ್ನೊಂದು ನಿಮಿಷ ಇರುವುದಿಲ್ಲ, ಅದಕ್ಕೆ ನಮಗೆ ಅವರ ಬಳಿ ಕೆಲಸ ಮಾಡಲು ಆಗುವುದಿಲ್ಲ. ನಮಗೆ ಕಾಂಗ್ರೆಸ್ ಪಕ್ಷವೇ ಸರಿ ಎಂದು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದರು.












Click it and Unblock the Notifications