ಚನ್ನಪಟ್ಟಣದ ಮೇಲೆ ಡಿಕೆ ಕಣ್ಣು: ಸಹೋದರನನ್ನು ಕಣಕ್ಕಿಳಿಸಲು ಸಿದ್ದತೆ
ರಾಮನಗರ, ಜೂನ್ 18: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಕಮಲ-ಸಳ ಸಜ್ಜಾಗಿದ್ರೆ, ಇತ್ತ ಹೀನಾಯ ಸೋಲು ಕಂಡ ಡಿಕೆ ಬ್ರದರ್ಸ್ ಚನ್ನಪಟ್ಟಣ ವಶಪಡಿಸಿಕೊಳ್ಳಲು ಮಹಾ ತಂತ್ರಗಾರಿಕೆಯನ್ನ ನಡೆಸುತ್ತಿದ್ದಾರೆ.
ಹೌದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಡಿ ಕೆ ಬ್ರದರ್ಸ್ ಗೆ ಪ್ರತಿಷ್ಠೆಯಾಗಿತ್ತು. ಸತತ ಗೆಲುವು ಕಂಡ ಡಿ ಕೆ ಸುರೇಶ್ ಈ ಬಾರಿ ತಮ್ಮದೇ ಸರ್ಕಾರವಿದ್ದರೂ ಹೀನಾಯವಾಗಿ ಸೋಲು ಅನುಭವಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಅವರು ಕಣಕ್ಕಿಳಿದಿದ್ದು, ಡಿಕೆ ಬ್ರದರ್ಸ್ ಕೋಟೆಯಲ್ಲಿ ಬಿಜೆಪಿ ಭಾವುಟವನ್ನ ಹಾರಿಸುವಲ್ಲಿ ಡಾ. ಮಂಜುನಾಥ್ ಅವರು ಯಶಸ್ವಿಯಾಗಿದ್ದು, ಇದೀಗ ಚನ್ನಪಟ್ಟಣ ಗೆಲ್ಲಲು ಡಿಕೆ ಶಿವಕುಮಾರ್ ಪ್ಲಾನ್ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿರುವ ಡಿ. ಕೆ. ಶಿವಕುಮಾರ್ ಅವರು ಚನ್ನಪಟ್ಟಣ ಕ್ಷೇತ್ರವನ್ನ ಈ ಬಾರಿ ವಶಪಡಿಸಿಕೊಳ್ಳುವ ಮೂಲಕ ಮೈತ್ರಿ ನಾಯಕರಿಗೆ ತಿರುಗೇಟು ನೀಡಲು ಕನಕಪುರ ಬಂಡೆ ಮಾಸ್ಟರ್ ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ. ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸಹೋದರ ಡಿ ಕೆ ಸುರೇಶ್ ಅವರನ್ನ ಕಣಕ್ಕಿಳಿಸಲು ಡಿ ಕೆ ಶಿವಕುಮಾರ್ ಭರ್ಜರಿ ಪ್ಲಾನ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತ ಲೋಕಸಭಾ ಚುನಾವಣೆಗೂ ಮುನ್ನವೇ ರಾಜಕೀಯದ ಕುರಿತು ಬೇಸರ ಹೊರ ಹಾಕಿದ್ದ ಡಿ ಕೆ ಸುರೇಶ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದು, ಮೂರು ಬಾರಿ ದೊರೆತ ಅವಕಾಶ ಬಳಸಿಕೊಂಡು ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ನಾನು ಮಾಡಿದ ಕೆಲಸಕ್ಕೆ ಕೂಲಿ ಕೇಳಿದೆ. ಜನ ನನಗೆ ಕೂಲಿ ಕೊಡಲು ಆಗುವುದಿಲ್ಲ ಎಂದು ವಿಶ್ರಾಂತಿ ನೀಡಿದ್ದಾರೆ ಎಂದು ಡಿ ಕೆ ಸುರೇಶ್ ಸೋಲನ್ನ ಒಪ್ಪಿಕೊಂಡಿದ್ರು.
ಇನ್ನೂ ಸೋಲಿನ ಹೊಣೆ ನಾನೇ ಹೊರುತ್ತೇನೆ. ಯಾರನ್ನು ಹೊಣೆ ಮಾಡುವುದಿಲ್ಲ. ಅಲ್ಲದೆ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ. ಜನ ವಿರಾಮ ನೀಡಿರುವುದು ನನಗಲ್ಲಅಭಿವೃದ್ಧಿಗೆ. ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮ ಪರ ಇರುತ್ತೇನೆ ಎಂದು ಹೇಳಿದ್ದು, ಅಚ್ಚರಿ ಅಭ್ಯರ್ಥಿ ಯಾರು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದು, ಇದೀಗ ಮೈತ್ರಿ ನಾಯಕರ ವಿರುದ್ಧ ತೊಡೆ ತಟ್ಟಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ತಮ್ಮ ಸಹೋದರನನ್ನು ಕಣಕ್ಕಿಳಿಸುವ ಮೂಲಕ ತಿರುಗೇಟು ನೀಡಲು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications