ಮೇಕೆದಾಟು ಯೋಜನೆಗೆ ಕೇಂದ್ರದ ಒಪ್ಪಿಗೆ ರಾಜ್ಯದ ಹೋರಾಟಕ್ಕೆ ಸಿಕ್ಕ ಜಯ: ಡಿಕೆಶಿ
ಬೆಂಗಳೂರು, ನವೆಂಬರ್ 27: ಮೇಕೆದಾಟು ಯೋಜನೆಗೆ ಕೇಂದ್ರದ ಒಪ್ಪಿಗೆ ಸಿಕ್ಕಿರುವುದು ರಾಜ್ಯದ ಹೋರಾಟಕ್ಕೆ ದೊರೆತ ಜಯ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದು. ಇದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು, ತಮಿಳುನಾಡಿಗೆ ತೊಂದರೆ ಆಗದ ರೀತಿಯಲ್ಲಿ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಅವರು ಹೇಳಿದರು.
ಗಡಿ ಭಾಗದ ಯೋಜನೆ ಇದಾಗಿರುವ ಕಾರಣ ಮೇಕೆದಾಟು ನೀರನ್ನು ಕೃಷಿಗೆ ಬಳಸದೆ ಕೇವಲ ವಿದ್ಯುತ್ ಮತ್ತು ಕುಡಿಯುವ ನೀರಿಗಾಗಿ ಬಳಸುತ್ತೇವೆ ಅಲ್ಲದೆ ತಮಿಳುನಾಡಿಗೆ ಬಿಡಬೇಕಾದ ನೀರಿನಲ್ಲಿ ಯಾವುದೇ ವ್ಯತ್ಯಾಸ ಮಾಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ಮಿಸಿ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ರಾಜ್ಯ ಸರ್ಕಾರ ತಯಾರಿಸಿ ಕೇಂದ್ರದ ಜಲ ಆಯೋಗದ ಒಪ್ಪಿಗೆ ಕೇಳಿತ್ತು. ಆದರೆ ಆಗ ತಮಿಳುನಾಡಿನ ಜಯಲಲಿತಾ ಸರ್ಕಾರ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಈಗ ಕೇಂದ್ರ ಜಲ ಆಯೋಗವು ಯೋಜನೆಗೆ ಒಪ್ಪಿಗೆ ನೀಡಿದೆ.
ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಯಡಿಯೂರಪ್ಪ ಸಹ ಸಂತಸ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರಕ್ಕೆ ಟ್ವಿಟ್ಟರ್ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.












Click it and Unblock the Notifications