ದಯಾ ಮರಣ ಕೇಳಿ ಬಂದ ಮಹಿಳೆಗೆ ಧೈರ್ಯ ಹೇಳಿ 500 ರೂ ಕಂತೆ ಕಂತೆ ಹಣ ಕೊಟ್ಟ ಡಿ ಕೆ ಶಿವಕುಮಾರ್: ಮಹಿಳೆ ಹೇಳಿದ್ದೇನು?
ಬೆಂಗಳೂರು, ಜನವರಿ 06: ಬಿಪಿಎಲ್ ಕಾರ್ಡಿಲ್ಲ, ಕಿಡ್ನಿ ಹಾಳಾಗಿರುವುದರಿಂದ ಜೀವನವೇ ಸಾಕಾಗಿದೆ, ದಯಾಮರಣ ಕೊಡಿ ಎಂದು ಕಣ್ಣೀರಿಟ್ಟ ರಾಧಮ್ಮ ಅವರಿಗೆ ಜೇಬಿನಲ್ಲಿದ್ದ 500 ಕಂತೆ ಕಂತೆ ಹಣ ತೆಗೆದು ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಳಬೇಡಮ್ಮ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ.
ಯಲಹಂಕ ನ್ಯೂ ಟೌನ್ ನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ "ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮಕ್ಕೆ ಮನವಿ ಸಲ್ಲಿಸಲು ಬಂದಂತಹ ಸಾರ್ವಜನಿಕರ ಅಹವಾಲುಗಳನ್ನು ಕೂಲಂಕುಷವಾಗಿ ಆಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಸಮಸ್ಯೆಗಳಿಗೆ ಪರಿಹಾರ ಹೇಳಿದರು. ನಾನು ದಯಾಮರಣ ಕೊಡಲು ಬಂದಿಲ್ಲಮ್ಮ. ನಿನ್ನ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇನೆ" ಎಂದು ದಾಸರಹಳ್ಳಿಯ ರಾಧಮ್ಮ ಅವರಿಗೆ ಭರವಸೆ ನೀಡಿದರು.

ಬಿಪಿಎಲ್ ಕಾರ್ಡ್ ಗಾಗಿ ಮನವಿ ನೀಡಿ ತಮ್ಮ ಕಷ್ಟ ಹೇಳಿಕೊಂಡ ವೃದ್ದ ಅಂಧ ದಂಪತಿ ಕಣ್ಣೊರೆಸಿದ್ದಾರೆ. ಜೇಬಿನಿಂದ 500 ರೂ. ಮುಖ ಬೆಲೆಯ ಕಂತು ಕಂತು ನೋಟುಗಳನ್ನು ಎತ್ತಿ ಅಂದ ಮಹಿಳೆ ಕೈಗಿಟ್ಟಿದ್ದಾರೆ. ಹಾಗೂ ದಂಪತಿ ಮನೆ ಬಾಗಿಲಿಗೆ ಬಿಪಿಎಲ್ ಕಾರ್ಡ್ ತಲಪಿಸುವಂತೆ ಬೆಂಗಳೂರು ಡಿಸಿಗೆ ಸೂಚನೆ ನೀಡಿದ್ದಾರೆ. ಈ ವೇಳೆ ವೃದ್ದ ಮಹಿಳೆ ನೀವು ನಮ್ಮ ಪಾಲಿನ ದೇವರು ಸಹ ಎಂದು ಸಂತಸ ವ್ಯಕ್ತಪಡಿಸಿದರು.
ದೃಷ್ಟಿದೋಷವುಳ್ಳ ಯುವತಿಗೆ ಬಿಡಿಎ ಫ್ಲಾಟ್, ಬಿಬಿಎಂಪಿ ಕೆಲಸ
"ಬಿಬಿಎಂಪಿ ಆಫೀಸ್ ಅಲ್ಲಿ ಕೆಲಸ ಮತ್ತು ಬಿಡಿಎ ಫ್ಲಾಟ್ ಕೊಡುವ ವ್ಯವಸ್ಥೆ ಮಾಡುತ್ತೇನೆ" ಎಂದು ದಾಸರಹಳ್ಳಿಯ ಹಿವ್ಯಾಂಜಲಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಯ ನೀಡಿದರು. ದೃಷ್ಟಿದೋಷವಿದ್ದರೂ ಬಿ.ಎ ಪದವಿ ಪೂರ್ಣ ಮಾಡಿದ್ದೇನೆ. ಮನೆ ಮತ್ತು ಕೆಲಸ ಬೇಕು ಎಂದು ಹಿವ್ಯಾಂಜಲಿ ಮನವಿ ಸಲ್ಲಿಸಿದಾಗ, ಬಿಡಿಎ ಆಯುಕ್ತ ಜಯರಾಮ್ ಅವ್ರಿಗೆ "ಅಂಗವಿಲರ ಕೋಟಾದ ಅಡಿಯಲ್ಲಿ ಫ್ಲಾಟ್ ವ್ಯವಸ್ಥೆ ಮಾಡಿ" ಎಂದರು. ಅದೇ ರೀತಿ ಪಾಲಿಕೆಯಲ್ಲಿ ಕೆಲಸ ಕೊಡುವಂತೆ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದಂತೆ ಪುರುಷರಿಗೂ ನೀಡಿ ಎಂದು ಯಲಹಂಕ ಹಿರಿಯ ನಾಗರಿಕರ ವೇದಿಕೆಯವರ ಮನವಿಗೆ "ಮಹಿಳೆಯರಿಗೆ ಕೊಟ್ಟಿದ್ದಕ್ಕೆ ಕಣ್ಣು ಹಾಕುತ್ತಿದ್ದಾರೆ. ಪುರುಷರಿಗೆ ಕೊಡಲು ಆಗಲ್ಲ" ಎಂದು ನಗುತ್ತಲೇ ಡಿಸಿಎಂ ಉತ್ತರಿಸಿದರು. ವಿದ್ಯಾರಣ್ಯಪುರದ ಬೀದಿ ಬದಿ ಪಡ್ಡು ವ್ಯಾಪಾರಿ ವಲ್ಲಿಮಾ ಅವರು ರಸ್ತೆ ಬದಿ ವ್ಯಾಪಾರ ಮಾಡಲು ಅವಕಾಶ ನೀಡಿ ಎಂದಾಗ "ತಳ್ಳುವ ಗಾಡಿ ಕೊಡಿಸುತ್ತೇನೆ, ಆಗಬಹುದಾ" ಎಂದರು.
"ಯಾವುದೇ ಕಾರಣಕ್ಕೂ ಜಾಗ ಬಿಡಬೇಡ, ಅಲ್ಲಿಯೇ ಇರು ನಾನಿದ್ದೇನೆ " ಎಂದು ಲೇಔಟ್ ನವರು ನನ್ನ ಜಾಗ ನುಂಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡ ಗಾಣಿಗರಹಳ್ಳಿಯ ಜಗದೀಶನಿಗೆ ಅಭಯ ನೀಡಿದರು. "ಸಾರ್ 450 ಅಡಿ ಜಾಗಕ್ಕೆ 1.90 ಲಕ್ಷ ತೆರಿಗೆ ಬಂದಿದೆ ಎಂದು ಹೆಬ್ಬಾಳ ಅಮಾನಿಕೆರೆ ನಿವಾಸಿ ರಾಮಚಂದ್ರ ಅವರ ಮನವಿ ಪಡೆದು ಅಧಿಕಾರಿಗಳ ಬಳಿ ಸಮಾಲೋಚನೆ ನಡೆಸಿ", ಇಷ್ಟೊಂದು ತೆರಿಗೆ ಹಾಕುವುದು ಅನ್ಯಾಯ. ತೆರಿಗೆಯನ್ನು ಪರಿಷ್ಕರಿಸಿ, ನಂತರದ ಬೆಳವಣಿಗೆಯನ್ನು ನನ್ನ ಗಮನಕ್ಕೆ ತನ್ನಿ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದರು.
"ಸಮಸ್ಯೆ ಬಗೆಹರಿಯಲಿಲ್ಲ ಎಂದರೆ ಡಿಸಿ ಮನೆಗೇ ಹೋಗು, ಅವರನ್ನು ಬಿಡಬೇಡ" ಎಂದು ಜಮೀನು ವಿವಾದ ಬಗೆಹರಿಸಿ ಎಂದು ಮನವಿ ಸಲ್ಲಿಸಿದ ಅರಕೆರೆಯ ಓಬಣ್ಣ ಅವರಿಗೆ ಹೇಳಿದರು. ನಿವೃತ್ತ ಸೈನಿಕರ ನಿವೇಶನ ತೊಂದರೆ, ರಾಜಕಾಲುವೆ ಒತ್ತುವರಿ, ಶಿವರಾಂ ಕಾರಂತ ಬಡಾವಣೆ ಸಮಸ್ಯೆ ಎನ್ಇಎಸ್ ಮೇಲ್ಸೇತುವೆ ಕಾಮಗಾರಿ, ಅಂಗನವಾಡಿ ಸಮಸ್ಯೆ, ಮಾಶಾಸನ, ಬಿಪಿಎಲ್ ಕಾರ್ಡ್ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಡಿಸಿಎಂ ಪರಿಹಾರ ನೀಡಿದರು.












Click it and Unblock the Notifications