ಡಿಕೆಶಿ ವಿರುದ್ಧ ಸಿಬಿಐ ತನಿಖೆ ಅನುಮತಿ; ಜನವರಿ 5ಕ್ಕೆ ಅರ್ಜಿ ವಿಚಾರಣೆ
ಬೆಂಗಳೂರು, ಡಿಸೆಂಬರ್ 16: ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಬಿಜೆಪಿ ನೇತೃತ್ವದ ಈ ಹಿಂದಿನ ರಾಜ್ಯ ಸರ್ಕಾರವು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜನವರಿ 5ಕ್ಕೆ ನಿಗದಿಪಡಿಸಿದೆ.
ಮೊದಲು ಅರ್ಜಿಯ ಮಾನ್ಯತೆ ಬಗ್ಗೆ ವಿಚಾರಣೆ ನಡೆಸಿ ನಂತರ ಸರ್ಕಾರದ ಆದೇಶದ ಸಿಂಧುತ್ವ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಅರ್ಜಿ ಸಂಬಂಧಿಸಿದಂತೆ ವಾದ ಮಂಡಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ವೆಂಕಟೇಶ್ ದಳವಾಯಿ ಅವರು ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ, ಹಿಂದಿನ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಾಲಿ ಸರ್ಕಾರ ವಾಪಸ್ ಪಡೆದಿರುವುದು ಅಕ್ಷಮ್ಯ ಅಪರಾಧ, ಸಂವಿಧಾನಬಾಹಿರ. ಹಾಗಾಗಿ ಸರ್ಕಾರದ ಆದೇಶ ರದ್ದುಗೊಳಿಸಬೇಕು ಎಂದರು.
ಸುಪ್ರೀಂಕೋರ್ಟ್ ಒಮ್ಮೆ ಒಪ್ಪಿಗೆ ನೀಡಿದ ಬಳಿಕೆ ಮತ್ತೆ ಆ ಒಪ್ಪಿಗೆ ವಾಪಸ್ ಪಡೆಯಲಾಗದು ಎಂದು ಆದೇಶಿಸಿದೆ. ಹಾಗಾಗಿ ವೈಯಕ್ತಿಕವಾಗಿ ಬಾದಿತರಾಗದಿದ್ದರೂ ಯಾರು ಬೇಕಾದರೂ ಕ್ರಿಮಿನಲ್ ಕಾನೂನಿಗೆ ಚಾಲನೆ ನೀಡಬಹುದು ಎಂದರು. ಅದಕ್ಕೆ ನ್ಯಾಯಪೀಠವೂ ಸಹ ಸಮ್ಮತಿ ಸೂಚಿಸಿತು.
ಈ ಎಲ್ಲಾ ತೀರ್ಪುಗಳನ್ನು ಅಧ್ಯಯನ ಮಾಡಿ ಉತ್ತರಿಸಲು ಅಡ್ವೊಕೇಟ್ ಜನರಲ್ ಅವರು ಸಮಯ ಕೋರಿದ್ದಾರೆ. ಹೀಗಾಗಿ, 2024ರ ಜನವರಿ 5ರಂದು ಎಜಿ ವಿಸ್ತೃತವಾಗಿ ಉತ್ತರಿಸಬೇಕು ಎಂದು ಹೇಳಿ ನ್ಯಾಯಾಲಯವು ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: 2019ರಲ್ಲಿ ಬಿಜೆಪಿ ಸರ್ಕಾರವು ಡಿ. ಕೆ. ಶಿವಕುಮಾರ್ ವಿರುದ್ಧ ಅಕ್ರಮ ಹಣ ಗಳಿಕೆ ಪ್ರಕರಣದ ತನಿಖೆ ಸಿಬಿಐಗೆ ಅನುಮತಿಸಿತ್ತು. ಇದನ್ನು ಪ್ರಶ್ನಿಸಿ ಡಿ. ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾ ಮಾಡಿತ್ತು. ಆನಂತರ ಇದನ್ನು ಪ್ರಶ್ನಿಸಿ ಡಿ. ಕೆ. ಶಿವಕುಮಾರ್ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಈ ಮಧ್ಯೆ, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು, ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ನವೆಂಬರ್ 28ರಂದು ಹಿಂಪಡೆದಿತ್ತು.
ಈ ಹಿನ್ನೆಲೆಯಲ್ಲಿ ಡಿ. ಕೆ. ಶಿವಕುಮಾರ್ ಮೇಲ್ಮನವಿ ಹಿಂಪಡೆದಿದ್ದರು. ಹೀಗಾಗಿ, ವಿಭಾಗೀಯ ಪೀಠವು ಅರ್ಜಿ ಇತ್ಯರ್ಥಪಡಿಸಿತ್ತು. ಇದಕ್ಕೆ ಆಕ್ಷೇಪಿಸಿ ಬಿಜೆಪಿ ಶಾಸಕ ಯತ್ನಾಳ್ ಅವರು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.












Click it and Unblock the Notifications