ಕಳಂಕಿತರ ಕೈ ತಪ್ಪಲಿದೆ ಚುನಾವಣೆ ಟಿಕೆಟ್!
ಬೆಂಗಳೂರು, ಡಿ.9 : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಳಂಕಿತರಿಗೆ, ಹಗರಣದಲ್ಲಿ ಭಾಗಿಯಾದವರಿಗೆ, ಕ್ರಿಮಿನಲ್ ಹಿನ್ನೆಲೆಯುಳ್ಳ ನಾಯಕರಿಗೆ ಟಿಕೆಟ್ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಳಂಕಿತರಿಗೆ, ಹಗರಣದಲ್ಲಿ ಭಾಗಿಯಾದವರಿಗೆ, ಕ್ರಿಮಿನಲ್ ಹಿನ್ನೆಲೆಯುಳ್ಳ ನಾಯಕರಿಗೆ ಟಿಕೆಟ್ ನೀಡುವುದಿಲ್ಲ ಎಂದು ಘೋಷಿಸಿದರು. ಅಲ್ಲದೇ ಹಾಲಿ ಸಂಸದರು ಸೋಲುವ ವರದಿ ಬಂದರೆ ಅವರಿಗೂ ಟಿಕೆಟ್ ನಿರಾಕರಿಸಲಾಗುವುದು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಯುವಕರನ್ನು ಬಿಟ್ಟು ರಾಜಕಾರಣ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಲೋಕಸಭೆ ಟಿಕೆಟ್ ಹಂಚಿಕೆಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು ಎಂದು ಪರಮೇಶ್ವರ್ ಭರವಸೆ ನೀಡಿದರು. ಪಕ್ಷ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ್ದು, ಬಗ್ಗೆ ಡಿ.14ರಂದು ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರ ನೇತೃತ್ವದಲ್ಲಿ ಚುನಾವಣಾ ಸಮಿತಿ ಹಾಗೂ ಸಮನ್ವಯ ಸಮಿತಿ ಸಭೆ ನಡೆಯಲಿದೆ ಎಂದರು. (ಕಾಂಗ್ರೆಸ್ ನಲ್ಲಿ ಬಿರುಸಿನ ಚಟುವಟಿಕೆಗಳು)
ರಾಜ್ಯಪಾಲರು ಸರ್ಕಾರದ ಕೆಲವು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಸ್ವಾಗತಿಸಿದ ಪರಮೇಶ್ವರ್, ರಾಜ್ಯಪಾಲರು ಸರ್ಕಾರಕ್ಕೆ ಸಲಹೆ ನೀಡುವುದು ಸಹಜ, ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿಯೂ ರಾಜ್ಯಪಾಲರು ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಿದ್ದರು ಅದರಲ್ಲಿ ತಪ್ಪಿಲ್ಲ. ರಾಜ್ಯಪಾಲರನ್ನು ಬದಲಾವಣೆ ಮಾಡಲು ಯಾವ ಸಚಿವರು ಒತ್ತಡ ಹೇರಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಕಳಂಕಿತರಿಗೆ `ಕೈ`ಟಿಕೆಟ್ ಇಲ್ಲ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಳಂಕಿತರಿಗೆ, ಹಗರಣದಲ್ಲಿ ಭಾಗಿಯಾದವರಿಗೆ, ಕ್ರಿಮಿನಲ್ ಹಿನ್ನೆಲೆಯುಳ್ಳ ನಾಯಕರಿಗೆ ಟಿಕೆಟ್ ನೀಡುವುದಿಲ್ಲ. ಟಿಕೆಟ್ ಹಂಚಿಕೆಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಲ್ಲದೇ ಹಾಲಿ ಸಂಸದರು ಸೋಲುವ ವರದಿ ಬಂದರೆ ಅವರಿಗೂ ಟಿಕೆಟ್ ನಿರಾಕರಿಸಲಾಗುವುದು ಎಂದರು.

ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ವಶ
ಮಂಗಳೂರು ವಿಮಾನ ನಿಲ್ದಾಣದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿ.ಆರ್.ಐ) ದ ಅಧಿಕಾರಿಗಳು ಭಾನುವಾರ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 2 ಕೆ.ಜಿ. ಅಕ್ರಮ ಚಿನ್ನ, 8900 ಅಮೆರಿಕನ್ ಡಾಲರ್ ಮತ್ತು 1,50,000 ರೂ. ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕೇರಳದ ಕಾಸರಗೋಡಿನ ತೆಕ್ಕಿಲ್ ನಿವಾಸಿಗಳಾದ ಉಮ್ಮರ್ ಫಾರೂಕ್ (29) ಮತ್ತು ಸೈಯ್ಯದ್ ಪಾಕಯಾರ ಮಾಡಂ (30), ಚಟ್ಟಂಚಾಲ್‌ನ ಅಬ್ದುಲ್ ನಿಸಾರ್ (31) ಮತ್ತು ಕೆ . ಮಹಮದ್ (55) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಇವರು ಪ್ರಯಾಣಿಕರ ಸೋಗಿನಲ್ಲಿ ಆಗಮಿಸಿದ್ದರು.

ನರಭಕ್ಷಕ ಹುಲಿ ಚೇತರಿಕೆ
ನಾಲ್ಕು ಮಂದಿಯನ್ನು ತಿಂದು ತೇಗಿ ಅರಣ್ಯ ಇಲಾಖೆಯವರ ಕೈಗೆ ಸಿಕ್ಕಿಬಿದ್ದಿದ್ದ ನರಭಕ್ಷಕ ಹುಲಿ ಶಿವ ಮೈಸೂರಿನ ಮೃಗಾಲಯದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ. ಎಚ್.ಡಿ.ಕೋಟೆ ಬಳಿ ಸೆರೆ ಸಿಕ್ಕ ಹುಲಿಯ ಬಾಯಿಯಲ್ಲಿ ಮುಳ್ಳು ಹಂದಿಯ ಮುಳ್ಳುಗಳು ಚುಚ್ಚಿಕೊಂಡಿದ್ದವು. ಶಸ್ತ್ರ ಚಿಕಿತ್ಸೆ ಮೂಲಕ ಮುಳ್ಳುಗಳನ್ನು ತೆಗೆದಿದ್ದು ಈಗ ಚೇತರಿಸಿಕೊಳ್ಳುತ್ತಿದೆ. ಹುಲಿ ಗುಣಮುಖವಾದ ನಂತರ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈತರಿಗೆ ಬೆಂಬಲ ಬೆಲೆ ನೀಡಿ
ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಬರುವ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ಎಪಿಎಂಸಿ ಅಧಿಕಾರಿಗಳು ಮತ್ತು ಹಮಾಲರಿಗೆ ಸೂಚನೆ ನೀಡಿದ್ದಾರೆ. ಹೂವಿನ ಹಡಗಲಿ ಎಪಿಎಂಸಿ ಆವರಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟಕ್ಕೆ ತರುವ ರೈತರಿಗೆ ತೂಕದಲ್ಲಿ ಯಾವುದೆ ಮೋಸವಾಗದಂತೆ ನೋಡಿಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ನಿಡಬೇಕು, ಪ್ರತಿ ರೈತರಿಂದ 25 ಕ್ವಿಂಟಲ್ ಮೆಕ್ಕೆಜೋಳ ಮಾತ್ರ ಖರೀದಿಸುವ ನಿರ್ಬಂಧ ಸಡಿಲಿಸಲಾಗಿದೆ ಎಂದರು.

ನಾಗಮಂಗಲದಲ್ಲಿ ಬಾನಾಮತಿ ಭಯ
ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಬಾನಾಮತಿ ಭಯದಿಂದ ಆತಂಕಗೊಂಡಿದ್ದಾರೆ. ಮುಂಜಾನೆ ಹಾಗೂ ರಾತ್ರಿ ಸಮಯದಲ್ಲಿ ಪಟ್ಟಣದ ಮನೆ ಮೇಲೆ ಕಲ್ಲುಗಳು ಬೀಳುತ್ತಿದ್ದರೆ, ಕೆಲವರ ಮನೆ ಬಾಗಿಲು ಮುಂದೆ ರಕ್ತವರ್ಣದ ನಿಂಬೆಹಣ್ಣು ಪತ್ತೆಯಾಗಿ ಆತಂಕ ಮೂಡಿಸಿವೆ. ಕಳೆದ ಇಪ್ಪತ್ತು ದಿನಗಳಿಂದ ಕತ್ತಲೆಯಾಗುತ್ತಿದ್ದಂತೆ ಕೆಲವು ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿವೆ. ಎರಡು ದಿನಗಳಿಂದ ಮನೆಯ ಬಾಗಿಲಲ್ಲಿ ಅರಿಶಿನ ಕುಂಕುಮಯುಕ್ತ ನಿಂಬೆಹಣ್ಣು ಕಂಡು ಬರಲಾರಂಭಿಸಿದ್ದು ಜನರನ್ನು ಭಯಭೀತರಾಗುವಂತೆ ಮಾಡಿವೆ. ಸದ್ಯ ಈ ಬಗ್ಗೆ ನಾಗಮಂಗಳ ಠಾಣೆಗೆ ಜನರು ದೂರು ನೀಡಿದ್ದಾರೆ.












Click it and Unblock the Notifications