ಕಾಂಗ್ರೆಸ್ಸಿನಲ್ಲಿ ರಾಜರಂತಿದ್ದ 'ಅನರ್ಹ ಶಾಸಕರು' ಈಗ ಭಿಕ್ಷೆ ಬೇಡುತ್ತಿದ್ದಾರೆ!
ಬೆಂಗಳೂರು, ಸೆ 17: " ಪಕ್ಷ ಬಿಟ್ಟು ಹೋಗಬೇಡಿ ಎಂದು ನಾನು ಖುದ್ದಾಗಿ ಅವರಿಗೆಲ್ಲಾ ಬುದ್ದಿ ಹೇಳಿದ್ದೆ. ಸಲಹೆಯನ್ನೂ ನೀಡಿದ್ದೆ. ಆದರೆ, ಯಾರ ಮಾತನ್ನೂ ಅವರುಗಳು ಕೇಳಲಿಲ್ಲ" ಎಂದು ಅನರ್ಹಗೊಂಡ ಕಾಂಗ್ರೆಸ್ ಶಾಸಕರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಮತ್ತೆ ಮುಂದಕ್ಕೆ ಹೋದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, " ಕಾಂಗ್ರೆಸ್ಸಿನಲ್ಲಿ ಇದ್ದಾಗ, ರಾಜರಂತಿದ್ದರು. ಈಗ ನೋಡಿ, ಬಿಜೆಪಿ ಮುಂದೆ ಭಿಕ್ಷೆ ಬೇಡುವಂತಾಗಿದೆ" ಎಂದು ದಿನೇಶ್ ಲೇವಡಿ ಮಾಡಿದರು.
" ಕಾಂಗ್ರೆಸ್ ನಲ್ಲಿದ್ದರೆ ಅವರೆಲ್ಲಾ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಬಹುದಿತ್ತು. ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳಬಹುದಿತ್ತು. ಆದರೂ ಪಕ್ಷ ಬಿಟ್ಟು ಹೋಗಿದ್ದಾರೆ" ಎಂದು ದಿನೇಶ್ ನುಡಿದರು.

" ರಮೇಶ್ ಕುಮಾರ್ ಅವರು ಶಾಸಕರ ರಾಜೀನಾಮೆಯ ಬಗ್ಗೆ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ವಿಚಾರ, ಎಲ್ಲರಿಗೂ ಒಂದು ಪಾಠವಾಗಬೇಕು" ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತ ಪಡಿಸಿದರು.
" ಅನರ್ಹ ಶಾಸಕರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬಾಗಿಲು ತಟ್ಟಿದರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಮೇಯವೇ ಇಲ್ಲ" ಎಂದು ದಿನೇಶ್ ಸ್ಪಷ್ಟ ಪಡಿಸಿದರು.
ನ್ಯಾ. ಮೋಹನ್ ಶಾಂತನಗೌಡ ಅನರ್ಹ ಶಾಸಕರ ವಿಚಾರಣೆಯಿಂದ ಹಿಂದೆ ಸರಿದ ಹಿನ್ನೆಲೆಯ ವಿಚಾರಣೆಯನ್ನು ಸೋಮವಾರ ಅಂದರೆ ಸೆ.23ಕ್ಕೆ ಮುಂದೂಡಲಾಗಿತ್ತು.












Click it and Unblock the Notifications