ಧಾರವಾಡ: ಸರ್ಕಾರಿ ಶಾಲಾ ಮಕ್ಕಳ ಅಪಹರಣ ಪ್ರಕರಣ, ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದ್ದೇನು
ಧಾರವಾಡ: ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಜನವರಿ 12 ರಂದು ಜರುಗಿದ ಕಮಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಅಪಹರಣ ಪ್ರಕರಣದ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿ, ಪೊಲೀಸ್ ಕ್ರಮ ಜರುಗಿಸಲಾಗಿದೆ. ಶಾಲಾ ಅವಧಿಯಲ್ಲಿ ಮಕ್ಕಳ ಅಪಹರಣ ಆಗಿರುವುದರಿಂದ ಈ ಕುರಿತು ತನಿಖೆ ಮಾಡಿ ವರದಿ ನೀಡಲು, ಜಿಲ್ಲಾ ಪಂಚಾಯತ್ ಸಿಇಓ ಅವರು ಅಧಿಕಾರಿಗಳ ಸಮಿತಿ ರಚಿಸಿದ್ದಾರೆ. ಸಮಿತಿ ನೀಡುವ ವರದಿ ಪರಿಶೀಲಿಸಿ, ಲೋಪ ಉಂಟಾಗಿದ್ದಲ್ಲಿ ಸಂಬಂಧಿಸಿದವರ ಮೇಲೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಅಪಹರಣದಿಂದ ಸುರಕ್ಷಿತವಾಗಿ ಪಾರಾಗಿ, ಜಿಲ್ಲಾ ಆಸ್ಪತ್ರೆಯ ಸಖಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದ ನಂತರ ಅವರು ಮಾತನಾಡಿದ್ದು, ಗಾಯಾಳು ಮಕ್ಕಳ ಆರೋಗ್ಯ ಸ್ಥಿತಿ ಹಾಗೂ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಉತ್ತಮ ಚಿಕಿತ್ಸೆ, ಆರೈಕೆ ಒದಗಿಸಲು ಜಿಲ್ಲಾಧಿಕಾರಿಗಳು ವೈದ್ಯರಿಗೆ ಸೂಚಿಸಿದ್ದಾರೆ. ಶಾಲೆಯ ಊಟದ ವಿರಾಮದ ನಂತರ ಈ ಘಟನೆ ನಡೆದಿದೆ. ಶಿಕ್ಷಕರಿಗೆ ಹಾಗೂ ಶಾಲಾ ಸುಧಾರಣಾ ಸಮಿತಿ ಸದಸ್ಯರಿಗೆ ಮತ್ತು ಪೋಷಕರಿಗೆ ಮಕ್ಕಳ ಸುರಕ್ಷತೆ ಪರಿಕಲ್ಪನೆಗಳ ಬಗ್ಗೆ ಈಗಾಗಲೇ ತಿಳಿಸಿದ್ದೇವೆ. ಮುಂದಿನ ದಿನಗಳಲ್ಲಿ, ಈ ರೀತಿಯ ಘಟನೆಗಳನ್ನು ತಡೆಯಲು ಶಾಲಾ ಸುರಕ್ಷತಾ ವ್ಯವಸ್ಥೆಯನ್ನು ಉತ್ತಮಗೊಳಿಸಲು ನಿರ್ದೇಶನವನ್ನು ನೀಡಿದ್ದೇವೆ ಎಂದು ದಿವ್ಯ ಪ್ರಭು ಹೇಳಿದ್ದಾರೆ.

ಶಾಲಾ ಆವರಣದಲ್ಲಿ ಸುರಕ್ಷತೆ ಹೆಚ್ಚಿಸುವುದು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸೂಕ್ತ ನಿಯಮಗಳನ್ನು ಜಾರಿ ಮಾಡುವುದು ಸೇರಿದಂತೆ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರದ ನಿಯಮಾಳಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಿಯಾಯೋಜನೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲು ಜಿಲ್ಲಾ ಪಂಚಾಯತಿ ಸಿಇಓ ಅವರಿಗೆ ನಿರ್ದೇಶಿಸಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳಾಗಿ, ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಕುಟುಂಬದವರೊಂದಿಗೆ ಹಾಗೂ ಗಾಯಾಳು ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಗಾಯಾಳು ವಿದ್ಯಾರ್ಥಿಗಳಿಂದ ಘಟನೆ ಹೇಗೆ ನಡೆಯಿತು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಹಾಗೂ ಕುಟುಂಬದವರಿಗೆ ಸಮಾಧಾನವನ್ನು ಹೇಳಿ, ಆತಂಕ ಪಡದಂತೆ ಮತ್ತು ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಕ್ರಮವಹಿಸುವ ಭರವಸೆ ನೀಡಿದರು. ಈ ಪ್ರಕರಣದಲ್ಲಿ ಅತ್ಯಂತ ಪಾರದರ್ಶಕವಾಗಿ ತನಿಖೆ ಮಾಡಿ, ನ್ಯಾಯ ಒದಗಿಸಲಾಗುವುದು ಎಂದರು.
ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರಕರಣದ ಆರೋಪಿಗೆ ಕಾನೂನು ಪ್ರಕಾರ ಕ್ರಮ ಆಗಬೇಕು. ಪ್ರಕರಣದ ಕುರಿತು ಸಮಗ್ರ ತನಿಖೆ ಮಾಡಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಜಿಲ್ಲಾಡಳಿತವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಈ ಪ್ರಕರಣದಲ್ಲಿ ವಿಶೇಷ ಅಭಿಯೋಜಕರ ಅವಶ್ಯಕತೆ ಇದ್ದಲ್ಲಿ ಪೊಲೀಸ್ ಇಲಾಖೆ ಪರಿಶೀಲಿಸಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ಪ್ರಕರಣದ ಆರೋಪಿಯು ಈ ಹಿಂದೆಯೂ ಇಂತಹ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸ್ ಮಾಹಿತಿ ಇದ್ದು, ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.












Click it and Unblock the Notifications