Dharmasthala Case: ಷಡ್ಯಂತ್ರ ಎಂಬ ಮಾತು ನಿಜವಾಯ್ತಾ? ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂಧನ ಬಗ್ಗೆ ಡಿ ಕೆ ಶಿವಕುಮಾರ್ ರಿಯಾಕ್ಷನ್
ಬೆಂಗಳೂರು, ಆಗಸ್ಟ್ 23: ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ದೊಡ್ಡ ಹೆಜ್ಜೆ ಮುಂದಿಟ್ಟಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಪ್ರಕರಣದ ತನಿಖೆ ಕೂಡ ನಿರ್ಣಾಯಕ ಹಂತ ತಲುಪಿದ್ದು, ಮೇಜರ್ ಟ್ವಿಸ್ಟ್ ಎನ್ನುವಂತೆ ಮಾಸ್ಕ್ ಮ್ಯಾನ್ ಚಿನ್ನಯ್ಯನ ಬಂಧನ ಕೂಡ ಆಗಿದೆ. ಧರ್ಮಸ್ಥಳ ಕೇಸ್ ಬಗ್ಗೆ ಸದನದಲ್ಲಿ ನಿಂತು ಷಡ್ಯಂತ್ರ ಎಂದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈಗ ಚಿನ್ನಯ್ಯನ ಬಂಧನದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶನಿವಾರ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನ ಬಂಧನವಾಗಿದೆ, 'ಷಡ್ಯಂತ್ರ'ವಾಗಿದೆ ಎಂದು ಮೊದಲು ಗಮನ ಸೆಳೆದಿದ್ದು ನೀವು ಎನ್ನುವ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ್ದು, ಬಿಜೆಪಿಯವರು ಇದುವರೆಗೂ ಏನೂ ಮಾತನಾಡಿರಲಿಲ್ಲ. ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದರು. ನಾನು 'ಷಡ್ಯಂತ್ರ' ವಿಚಾರ ಪ್ರಸ್ತಾವನೆ ಮಾಡಿದ ನಂತರ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಧರ್ಮಸ್ಥಳದ ಕುಟುಂಬದವರೇ ಬಂದು ಮುಖ್ಯಮಂತ್ರಿಗಳ ಬಳಿ ಮಾತನಾಡಿ, ನೀವು ಎಸ್ ಐಟಿ ರಚನೆ ಮಾಡಿರುವುದು ಒಳ್ಳೆಯ ಕೆಲಸ ಎಂದು ಹೇಳಿದ್ದಾರೆ. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಇದ್ದರು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿಯವರು, ಗೃಹ ಸಚಿವರು ಸದನದಲ್ಲಿ ಹಾಗೂ ಸಿಎಲ್ ಪಿ ಸಭೆಯಲ್ಲೂ ತಿಳಿಸಿದ್ದಾರೆ ಎಂದರು. ಇನ್ನೂ ಅನನ್ಯಾ ಭಟ್ ನನ್ನ ಮಗಳೇ ಅಲ್ಲ ಎಂದು ಸುಜಾತ ಭಟ್ ಹೇಳಿಕೆ ಬಗ್ಗೆ ಗೃಹಸಚಿವರಾದ ಡಾ ಜಿ ಪರಮೇಶ್ವರ್ ಅವರು ನೋಡಿಕೊಳ್ಳುತ್ತಾರೆ ಎಂದರು.
ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆಗಿನ ಸಭೆಯ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ನಡೆಸಬೇಕಲ್ಲವೇ? ಆದ ಕಾರಣ ಸಭೆ ಕರೆದು ಜವಾಬ್ದಾರಿ ಹಂಚಿಕೆ ಮಾಡುತ್ತಿದ್ದೇವೆ. ನ್ಯಾಯಾಲಯ ಚುನಾವಣೆ ನಡೆಸಿ ಎಂದ ಮೇಲೆ ಕಡೆಗಣಿಸಬಾರದಲ್ಲವೇ? ಎಂದು ಹೇಳಿದರು.
ಬಿಹಾರಕ್ಕೆ ತೆರಳುತ್ತಿರುವ ಕುರಿತು ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಬಿಹಾರದಲ್ಲಿ ಕಾಂಗ್ರೆಸ್ ಜನಾಧಿಕಾರ ಯಾತ್ರೆ ನಡೆಯುತ್ತಿದೆ. ಅದನ್ನು ಪಕ್ಷದ ಶಾಸಕರು ನೋಡಬೇಕು ಎಂದರು, ಅದಕ್ಕಾಗಿ ತೆರಳುತ್ತಿದ್ದೇವೆ. ಮುಖ್ಯಮಂತ್ರಿಗಳನ್ನೂ ಆಹ್ವಾನ ಮಾಡಿದ್ದು ಅವರೂ ಸಹ ಇನ್ನೊಂದು ದಿನ ತೆರಳುತ್ತಿದ್ದಾರೆ. ಎಷ್ಟು ಮಂದಿ ಶಾಸಕರು ತೆರಳುತ್ತಿದ್ದೀರಾ ಎಂದು ಮರುಪ್ರಶ್ನಿಸಿದಾಗ, "ಜಾಗ ಎಷ್ಟಿದೆಯೋ ಅಷ್ಟು ಮಂದಿ" ಎಂದರು.












Click it and Unblock the Notifications