ಎರಡು ಮದುವೆ, ಖ್ಯಾತ ನಟಿಯ ಮಲತಂದೆ, ಡಿಜಿಪಿ ರಾಮಚಂದ್ರ ರಾವ್ ಹಿನ್ನೆಲೆ, ಹಿಂದಿನ ವಿವಾದಗಳೇನು?
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರರಾವ್ ತಮ್ಮ ಕಚೇರಿಯಲ್ಲೇ ಮಹಿಳೆಯೊಬ್ಬರ ಜೊತೆ ಸರಸವಾಡಿದ್ದಾರೆ ಎನ್ನಲಾದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಈ ರಾಸಲೀಲೆಯ ವಿಡಿಯೋ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿರುವ ಕೆ.ರಾಮಚಂದ್ರ ರಾವ್ ಅವರ ಕೌಟುಂಬಿಕ ಹಿನ್ನೆಲೆ, ಈ ಹಿಂದಿನ ವಿವಾದಗಳು ಕೂಡ ಚರ್ಚೆಗೆ ಬಂದಿವೆ. ರಾಮಚಂದ್ರ ರಾವ್ ಅವರಿಗೆ ಎರಡು ಮದುವೆಯಾಗಿರುವ ಹಾಗೂ ಈಗಾಗಲೇ ಜೈಲು ಸೇರಿರುವ ಸ್ಯಾಂಡಲ್‌ವುಡ್‌ನ ಖ್ಯಾತ ನಟಿಗೆ ಇವರು ಮಲತಂದೆ ಎಂಬ ವಿಚಾರ ಕೂಡ ಚರ್ಚೆಯಲ್ಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋಗಳು ಭಾರೀ ವಿವಾದಕ್ಕೆ ಕಾರಣವಾಗಿವೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಚೇರಿಯೊಳಗೆ ಮಹಿಳೆಯೊಬ್ಬರೊಂದಿಗೆ ಅಸಭ್ಯ ವರ್ತನೆ ನಡೆಸಿರುವಂತೆ ತೋರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೂ ಕಾರಣವಾಗಿದೆ.

ಈ ವಿಡಿಯೋಗಳು ಅಸಲಿಯೋ ಅಥವಾ ನಕಲಿಯೋ ಎನ್ನುವುದು ಇನ್ನೂ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಆದರೆ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೂ ವಿಷಯ ಬಂದಿದೆ. ಕಚೇರಿಯ ಶಿಷ್ಟಾಚಾರ, ಸೇವಾ ನಿಯಮಗಳು ಹಾಗೂ ಕಾರ್ಯಸ್ಥಳದ ನಡವಳಿಕೆ ಸಂಹಿತೆ ಉಲ್ಲಂಘನೆಯಾಗಿದೆಯೇ ಎಂಬ ಕುರಿತು ಪರಿಶೀಲನೆಯೂ ನಡೆಯುತ್ತಿದೆ.
ಡಿಜಿಪಿ ರಾಮಚಂದ್ರ ರಾವ್ ಹಿನ್ನೆಲೆ
ಕೆ.ರಾಮಚಂದ್ರ ರಾವ್ ಅವರು 1993ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಸೆಪ್ಟೆಂಬರ್ 2023ರಲ್ಲಿ ಅವರಿಗೆ ಡಿಜಿಪಿ ಹುದ್ದೆಗೆ ಪದೋನ್ನತಿ ಸಿಕ್ಕಿತ್ತು. ಆಗಸ್ಟ್ 2025ರಲ್ಲಿ ಪುನರ್ ನೇಮಕಗೊಂಡ ಬಳಿಕ ಸದ್ಯ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಬೆಂಗಳೂರು ಮೆಟ್ರೊಪಾಲಿಟನ್ ಟಾಸ್ಕ್ ಫೋರ್ಸ್‌ನ ಎಡಿಜಿಪಿ, ದಕ್ಷಿಣ ವಲಯದ ಐಜಿಪಿ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ನಗರ ಪೊಲೀಸ್ ವ್ಯವಸ್ಥೆ ಹಾಗೂ ಮೂಲಸೌಕರ್ಯ ಯೋಜನೆಗಳಲ್ಲಿ ಅನುಭವ ಹೊಂದಿರುವ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು.
ನಟಿ ರನ್ಯಾ ರಾವ್‌ಗೆ ಮಲತಂದೆ
ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರ ಪ್ರಕರಣದಿಂದಲೂ ರಾಮಚಂದ್ರ ರಾವ್ ಸುದ್ದಿಯಾಗಿದ್ದರು. ಕಳೆದ ವರ್ಷ ರನ್ಯಾ ರಾವ್ ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಆಗ ರನ್ಯಾ ರಾವ್ ರಾಮಚಂದ್ರ ರಾವ್ ಅವರ ಎರಡನೇ ಪತ್ನಿಯ ಪುತ್ರಿ ಎಂದು ಹೇಳಲಾಗಿತ್ತು. ಇದೇ ಪ್ರಕರಣದಲ್ಲಿ ಅವರು ಗಂಭೀರ ವಿವಾದಕ್ಕೆ ಒಳಗಾಗಿದ್ದರು.
ರನ್ಯಾ ರಾವ್‌ಗೆ ಪೊಲೀಸ್ ಕಾನ್ಸ್‌ಟೇಬಲ್ ಸಹಾಯ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದರಿಂದ ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆಗೆ ಕಳುಹಿಸಿತ್ತು. ನಂತರ ರಜೆ ಆದೇಶ ಹಿಂಪಡೆದು, ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದಕ್ಕೂ ಮುನ್ನ 2014ರಲ್ಲಿ ದಕ್ಷಿಣ ವಲಯ ಐಜಿಪಿಯಾಗಿದ್ದ ವೇಳೆ ಮೈಸೂರು ಬಳಿ ನಡೆದ ನಗದು ಜಪ್ತಿ ಪ್ರಕರಣದಲ್ಲಿಯೂ ಹೆಸರು ಕೇಳಿಬಂದಿತ್ತು. ಆ ಪ್ರಕರಣದಲ್ಲಿ ಜಪ್ತಿ ಮಾಡಿದ ಮೊತ್ತದ ಪ್ರಮಾಣದ ಬಗ್ಗೆ ವ್ಯಾಪಾರಿಗಳು ಗಂಭೀರ ಆರೋಪಗಳನ್ನು ಮಾಡಿದ್ದರು.
ವೈರಲ್ ವಿಡಿಯೋ ವಿವಾದ
ಈಗ ವೈರಲ್ ಆಗಿರುವ ವಿಡಿಯೋಗಳಲ್ಲಿ ಡಿಜಿಪಿ ಡಾ. ರಾಮಚಂದ್ರ ರಾವ್ ಅವರು ಪೊಲೀಸ್ ಸಮವಸ್ತ್ರದಲ್ಲೇ ಕಚೇರಿಯೊಳಗೆ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವಂತೆ ಕಂಡುಬಂದಿದೆ. ಕೆಲ ಕ್ಲಿಪ್‌ಗಳಲ್ಲಿ ಕಚೇರಿಗೆ ಅಧಿಕೃತ ಕೆಲಸಕ್ಕಾಗಿ ಬಂದ ಮಹಿಳೆಯರೊಂದಿಗೆ ಈ ರೀತಿಯ ವರ್ತನೆ ತೋರಿರುವ ಆರೋಪ ಕೇಳಿಬಂದಿದೆ. ಇದು ಒಂದು ದಿನ ನಡೆದಿರುವ ಕೃತ್ಯವಲ್ಲ, ಬದಲಿಗೆ ಹಲವು ವಿಡಿಯೋಗಳಿದ್ದು, ಕಚೇರಿಯಲ್ಲಿ ನಿರಂತರವಾಗಿ ಈ ನೀಚ ಕೆಲಸ ನಡೆದಿರುವ ಶಂಕೆ ವ್ಯಕ್ತವಾಗಿದೆ.
ರಾಮಚಂದ್ರ ರಾವ್‌ಗೆ ಎರಡು ಮದುವೆ
ವರದಿಗಳ ಪ್ರಕಾರ ರಾಮಚಂದ್ರ ರಾವ್ ಅವರು ಎರಡು ಮದುವೆಯಾಗಿದ್ದಾರೆ. ಅವರ ಮೊದಲ ಪತ್ನಿಯ ಮರಣದ ನಂತರ, ರನ್ಯಾರಾವ್ ಅವರ ತಾಯಿಯನ್ನು ಎರಡನೇ ಮದುವೆಯಾಗಿದ್ದರು. ಎರಡನೇ ಪತ್ನಿಯ ಮೊದಲ ಮದುವೆಯಿಂದ ಜನಿಸಿದ್ದ ಇಬ್ಬರು ಮಕ್ಕಳಲ್ಲಿ ರನ್ಯಾ ರಾವ್ ಕೂಡ ಒಬ್ಬರು. ಹೀಗಾಗಿ ರನ್ಯಾ ರಾವ್ ರಾಮಚಂದ್ರ ರಾವ್ ಅವರ ಸ್ವಂತ ಮಗಳಲ್ಲ ಎನ್ನಲಾಗಿದೆ. ರನ್ಯಾ ಅವರ ತಾಯಿ ಹೆಸರು ರೋಹಿಣಿ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೆ ನಟಿ ಜಯಮಾಲಾ ಅವರ ಪುತ್ರಿಯನ್ನು ರನ್ಯಾ ರಾವ್ ಸಹೋದರ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಮದುವೆಯಲ್ಲಿ ಕುಟುಂಬದ ಫೋಟೋಗಳು ಕೂಡ ವೈರಲ್ ಆಗಿತ್ತು.












Click it and Unblock the Notifications