ಕೊಪ್ಪಳದಲ್ಲಿ ದೇವದಾಸಿ ಪದ್ಧತಿ ಆಚರಣೆ, ಮೂವರ ಬಂಧನ
ಕೊಪ್ಪಳ, ಡಿಸೆಂಬರ್ 29: ರಾಜ್ಯದಲ್ಲಿ ದೇವದಾಸಿ ಪದ್ಧತಿ ಜೀವಂತವಿದ್ದು, ಕೊಪ್ಪಳದಲ್ಲಿ 22 ವರ್ಷದ ಯುವತಿಯನ್ನು ಆಕೆಯ ಪೋಷಕರು ದೇವರಿಗೆ ಅರ್ಪಿಸಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ದೇವದಾಸಿ ಪದ್ಧತಿಯನ್ನು ನಿಷೇಧಿಸಿ 40 ವರ್ಷಗಳೇ ಕಳೆದರೂ ಈ ಅನಿಷ್ಟ ಪದ್ಧತಿ ಇನ್ನೂ ಜಾರಿಯಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮೇ ತಿಂಗಳಿನಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಬಗ್ಗೆ ಕೊಪ್ಪಳ ಜಿಲ್ಲೆಯ ಗ್ರಾಮದ ನಿವಾಸಿಗಳು ಜಿಲ್ಲಾಡಳಿತದ ಗಮನಕ್ಕೆ ತಂದ ನಂತರ ಕಳೆದ ವಾರವಷ್ಟೇ ಘಟನೆ ಬೆಳಕಿಗೆ ಬಂದಿದೆ.
ದೇವದಾಸಿ ಸಂರಕ್ಷಣಾ ಯೋಜನಾಧಿಕಾರಿ ಪೂರ್ಣಿಮಾ ವೈ ನೀಡಿದ ದೂರಿನ ಮೇರೆಗೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು 22 ವರ್ಷದ ಯುವತಿಯ ಪೋಷಕರು ಹಾಗೂ ಯುವತಿಯ ಅಕ್ಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ನಾಲ್ಕನೇ ಶಂಕಿತ ಆಕೆಯ ಸೋದರ ಮಾವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ದೇವರಿಗೆ ಅರ್ಪಿಸಿದರೆ ಮಹಿಳೆ ತನ್ನ ದೀರ್ಘಕಾಲದ ಅನಾರೋಗ್ಯದಿಂದ ಗುಣಮುಖಳಾಗುತ್ತಾಳೆ ಎಂದು ಆಕೆಯ ಪೋಷಕರು ನಂಬಿದ್ದರು. ಅವಿವಾಹಿತ ಈ ಹುಡುಗಿ ಮಂಗಳಸೂತ್ರ ಮತ್ತು ದೇವದಾಸಿಯರ ಸಾಂಪ್ರದಾಯಿಕ ಉಡುಪನ್ನು ಧರಿಸಲು ಪ್ರಾರಂಭಿಸಿದ ನಂತರ ನೆರೆಹೊರೆಯವರು ಅನುಮಾನ ವ್ಯಕ್ತಪಡಿಸಿದರು ಎಂದು ಡಿಎಚ್ ವರದಿ ಮಾಡಿದೆ.
ಬಳಿಕ ಎಚ್ಚೆತ್ತ ಪ್ರಜ್ಞಾವಂತ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಅಧಿಕಾರಿಗಳು ಮನೆಗೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ. ಬಳಿಕ ಕುಟುಂಬದವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆಯೇ ಎಂಬುದನ್ನು ಪರೀಕ್ಷಿಸಲು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ ಜಿ ತಿಳಿಸಿದ್ದಾರೆ.
22 ವರ್ಷದ ಆ ಯುವತಿ ಕಡಿಮೆ ಹಿಮೋಗ್ಲೋಬಿನ್‌ನಿಂದ ಬಳಲುತ್ತಿದ್ದು, ಕಡಿಮೆ ತೂಕವನ್ನು ಹೊಂದಿದ್ದಾರೆ. ಆಕೆಯ ಜಡೆ ಕೂದಲು ಬೆಳೆಯಲು ಪ್ರಾರಂಭಿಸಿದೆ. ಇದನ್ನು ದೇವದಾಸಿಯ ಸಂಕೇತವೆಂದು ಶಂಕಿಸಿದ ಪೋಷಕರು ತಮ್ಮ ಮಗಳನ್ನು ವೈದ್ಯಕೀಯ ಚಿಕಿತ್ಸೆ ಪಡೆಯುವ ಬದಲು ದೇವದಾಸಿ ಪದ್ಧತಿಗೆ ಅರ್ಪಿಸಿದರು. ಜಡೆಯ ಕೂದಲಿನ ತೂಕದಿಂದಾಗಿ ಮಹಿಳೆಯು ಆಹಾರ ಸೇವಿಸಿದಾಗಲೆಲ್ಲ ತಲೆಸುತ್ತು ಮತ್ತು ವಾಂತಿಯಾಗುತ್ತಿತ್ತು ಎಂದು ಪದ್ಮಾವತಿ ಹೇಳಿದರು.

22 ವರ್ಷದ ಆ ಯುವತಿಯನ್ನು ದೇವದಾಸಿ ಪದ್ಧತಿ ಆಚರಣೆಗೆ ಕೊಟ್ಟ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೊಪ್ಪಳ ಎಸ್ಪಿ ಅರುಣಾಂಗಶು ಗಿರಿ ತಿಳಿಸಿದ್ದಾರೆ.












Click it and Unblock the Notifications