Cabinet Expansion: ಈ ಇಬ್ಬರಿಗೆ ಮಾತ್ರ ಸಚಿವ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ಪಟ್ಟು!
ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಚಾರದಲ್ಲಿ ಇದ್ದ ಗೊಂದಲ ಪರಿಹಾರಗೊಂಡ ನಂತರ ಈಗ, ಸಚಿವ ಸಂಪುಟ ವಿಸ್ತರಣೆಯ ಸರದಿ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೊತೆಗೆ ಎಂಟು ಸಚಿವರು ಮಾತ್ರ ಸ್ಥಾನ ಪಡೆದಿದ್ದರು. ಇದು, ಕಾಂಗ್ರೆಸ್ಸಿನ ಕೆಲವು ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.
ಸಿಎಂ ಮತ್ತು ಡಿಸಿಎಂ ದೆಹಲಿಯಲ್ಲಿ ಪಕ್ಷದ ವರಿಷ್ಠರ ಜೊತೆಗೆ ಮಾತುಕತೆಯನ್ನು ನಡೆಸುತ್ತಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ, ಶನಿವಾರ (ಮೇ 27) ಬೆಳಗ್ಗೆ 11.45ಕ್ಕೆ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿದೆ. ಈ ಸಂಬಂಧ, ರಾಜ್ಯಪಾಲರಿಗೆ ಪತ್ರವನ್ನು ಬರೆದು ಅನುಮತಿಯನ್ನು ಪಡೆದುಕೊಳ್ಳಲಾಗಿದೆ.

ಕೆಲವೊಂದು ಹಿರಿಯ ನಾಯಕರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಒಮ್ಮತ ಮೂಡುತ್ತಿಲ್ಲ ಎಂದು ವರದಿಯಾಗುತ್ತಿದೆ. ಇದರ ಜೊತೆಗೆ, ಒಬ್ಬರೇ ಉಪ ಮುಖ್ಯಮಂತ್ರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹೇಳಿದ್ದರೂ, ಮತ್ತೆ ಇನ್ನೊಂದು ಡಿಸಿಎಂ ಎನ್ನುವ ಪಟ್ಟು ಆರಂಭವಾಗಿದೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಇಬ್ಬರು ಶಾಸಕರಿಗೆ ಮಂತ್ರಿಗಿರಿ ನೀಡುವ ವಿಚಾರದಲ್ಲಿ ಪಟ್ಟು ಹಿಡಿದಿದ್ದಾರೆ ಎಂದು ಕನ್ನಡ ಮಾಧ್ಯಮವೊಂದು ವರದಿ ಮಾಡಿದೆ. ಯಾರಿಗೆಲ್ಲಾ ಮಂತ್ರಿಗಿರಿ ಭಾಗ್ಯ ಒಲಿದಿದೆ ಎನ್ನುವುದು ಬಹುತೇಕ ಈಗಾಗಲೇ ಅಂತಿಮವಾಗಿದೆ, ಕೆಲವೊಂದು ಕೊನೆಯ ಕ್ಷಣದ ಬದಲಾವಣೆ ಮಾತ್ರ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ದೆಹಲಿಗೆ
ಬುಧವಾರದಂದೇ (ಮೇ 24) ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣಿಸಿದ್ದರು. ಸಿದ್ದರಾಮಯ್ಯ ದೆಹಲಿಗೆ ಬರುವ ಮುನ್ನವೇ, ಡಿಕೆಶಿಯವರು ಹೈಕಮಾಂಡ್ ಬಳಿ ಸುಮಾರು ಒಂದು ತಾಸು ಚರ್ಚೆ ನಡೆಸಿದ್ದರು. ಬಾಕಿಯಿರುವ ಎಲ್ಲಾ 24ಸ್ಥಾನಗಳನ್ನು ಭರ್ತಿ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಹಾಗಾಗಿ, ಸುಮಾರು ಅರವತ್ತಕ್ಕೂ ಹೆಚ್ಚು ಶಾಸಕರ ಲಾಬಿ ದೆಹಲಿಯಲ್ಲಿ ಜೋರಾಗಿದೆ.

ಸಚಿವ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ಇಬ್ಬರಿಗಷ್ಟೇ ಪಟ್ಟು
ಸಚಿವ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ಇಬ್ಬರಿಗಷ್ಟೇ ಪಟ್ಟು ಹಿಡಿದಿದ್ದಾರೆ. ಅದು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಹಿರಿಯೂರು ಶಾಸಕ ಡಿ. ಸುಧಾಕರ್ ಅವರಿಗೆ ಮಾತ್ರ ಎಂದು ವಿಜಯವಾಣಿ ಪತ್ರಿಕೆ ವರದಿ ಮಾಡಿದೆ. ಚುನಾವಣೆಯಲ್ಲಿ ಸುಧಾಕರ್ ಅವರು ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್ ಅವರನ್ನು 30,322 ಮತಗಳ ಅಂತರದ ಭಾರೀ ಗೆಲುವನ್ನು ಸಾಧಿಸಿದ್ದರು. ಜೊತೆಗೆ, ಸುಧಾಕರ್ ಅವರ ಮಂತ್ರಿಗಿರಿಗಾಗಿನ ಲಾಬಿ ಜೋರಾಗಿಯೇ ನಡೆದಿದೆ.
ಡಿಕೆಶಿ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್
ಇನ್ನೊಂದು ಕಡೆ, ಸತತವಾಗಿ ಗೆದ್ದು ಬರುತ್ತಿರುವ ಮತ್ತು ಡಿಕೆಶಿ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಕೂಡಾ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಈಗಾಗಲೇ ದೆಹಲಿಯಲ್ಲಿರುವ ಹೆಬ್ಬಾಳ್ಕರ್ ಅವರು ಪಟ್ಟಿಯಲ್ಲಿ ನನ್ನ ಹೆಸರಿದೆ, 24ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆ ಎನ್ನುವ ಖಚಿತ ವಿಶ್ವಾಸದ ಮಾತನ್ನಾಡಿದ್ದಾರೆ. ಮೂಲಗಳ ಪ್ರಕಾರ, ಡಿಕೆಶಿ ಪಟ್ಟು ಹಿಡಿದಿರುವ ಇಬ್ಬರಿಗೂ ಸಚಿವ ಸ್ಥಾನ ಒಲಿಯಲಿದೆ.
ಸಂಪುಟದಲ್ಲಿ ಒಟ್ಟು 34 ಸಚಿವರ ಸೇರ್ಪಡೆಗೆ ಅವಕಾಶ
ಸಂಪುಟದಲ್ಲಿ ಒಟ್ಟು 34 ಸಚಿವರ ಸೇರ್ಪಡೆಗೆ ಅವಕಾಶವಿದೆ, ಅದರಲ್ಲಿ ಹತ್ತು ಸ್ಥಾನಗಳು ಭರ್ತಿಯಾಗಿವೆ. ಸದ್ಯಕ್ಕೆ ಇಪ್ಪತ್ತು ಸ್ಥಾನವನ್ನು ತುಂಬಿಸಿ, ನಾಲ್ಕು ಸ್ಥಾನವನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಿತ್ತು. ಈಗ ಎಲ್ಲಾ ಸ್ಥಾನಗಳನ್ನು ತುಂಬಿಸಿ ಸಂಪುಟ ವಿಸ್ತರಣೆ ಮಾಡಲು ವರಿಷ್ಠರು ನಿರ್ಧರಿಸಿದ್ದಾರೆ.












Click it and Unblock the Notifications