ದಲಿತನೆಂಬ ಕಾರಣಕ್ಕಾಗಿ RSS ಕಚೇರಿಗೆ ಪ್ರವೇಶ ನಿರಾಕರಣೆ- ಬಿಎಲ್ ಸಂತೋಷ್‌ಗೆ ಪ್ರಶ್ನಿಸಿದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್
ಬೆಂಗಳೂರು,ಡಿಸೆಂಬರ್ 06: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂದು ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ನಾಗಪುರದ ಆರ್‌ಎಸ್‌ಎಸ್ ಹೆಡಗೇವಾರ್ ವಸ್ತು ಸಂಗ್ರಹಾಲಯದ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಇದಕ್ಕೆ ಕಾರಣವೇನು ಎನ್ನುವುದನ್ನು ಸ್ಪಷ್ಟಪಡಿಸುವಿರಾ ಎಂದು ಗೂಳಿಹಟ್ಟಿ ಶೇಖರ್ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನ ಪ್ರಶ್ನಿಸಿದ್ದಾರೆ.
ನಾಗಪುರದ ಆರ್‌ಎಸ್‌ಎಸ್ ಕಚೇರಿ ಭೇಟಿಯ ಸಂದರ್ಭದಲ್ಲಿ ಉಂಟಾದ ಕಹಿ ಅನುಭವನ್ನ ಆಡಿಯೋ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗೂಳಿಹಟ್ಟಿ ಶೇಖರ್ ಅವರು ಹಂಚಿಕೊಂಡಿದ್ದಾರೆ. ಚುನಾವಣೆ ಘೋಷಣೆಯಾಗುವುದಕ್ಕೂ ಮೂರು ತಿಂಗಳ ಹಿಂದೆ ಮಹಾರಾಷ್ಟ್ರದ ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಭೇಟಿ ನೀಡಿದ್ದೆ.

ಪರಿಶಿಷ್ಟ ಜಾತಿಗೆ ಸೇರಿದವನಾದರೂ ಹಿಂದುತ್ವದ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಖುಷಿಯಿಂದ ಅಲ್ಲಿಗೆ ತೆರಳಿದ್ದೆ. ಆದರೆ, ಹೆಡಗೇವಾರ್ ವಸ್ತುಸಂಗ್ರಹಾಲಯ ಪ್ರವೇಶದ ಸಂದರ್ಭದಲ್ಲಿ ಕಹಿ ಅನುಭವ ಉಂಟಾಯಿತು ಎಂದು ಬೇಸರ ಹೊರಹಾಕಿದ್ದಾರೆ.
ಹೆಡಗೇವಾರ್ ಮ್ಯೂಸಿಯಂ ವೀಕ್ಷಣೆಗೆ ಬರುವವರ ಮಾಹಿತಿಯನ್ನು ಪ್ರವೇಶದ್ವಾರದಲ್ಲಿ ಸಂಗ್ರಹಿಸಲಾಗುತ್ತಿತ್ತು. ಪುಸ್ತಕದಲ್ಲಿ ಹೆಸರು ನೋಂದಾಯಿಸಿ ಒಳಗೆ ಹೆಜ್ಜೆ ಹಾಕುವಾಗ ವ್ಯಕ್ತಿಯೊಬ್ಬರು ತಡೆದರು. ಪರಿಶಿಷ್ಟ ಜಾತಿಗೆ ಸೇರಿದವರಿಗೆ ಪ್ರವೇಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ನನ್ನೊಂದಿಗೆ ಇದ್ದ ಮೋಹನ್ ವೈದ್ಯ ಹಾಗೂ ಮಂಜು ಎಂಬುವರು ಮಾತ್ರ ಒಳಗೆ ಹೋದರು. ನಾನು ಹೊರಗೆ ಕಾಯುತ್ತ ಕುಳಿತುಕೊಳ್ಳಬೇಕಾಯಿತು ಎಂದು ಗೂಳಿಹಟ್ಟಿ ಶೇಖರ್ ಬೇಸರ ಹೊರಹಾಕಿದ್ದಾರೆ.
'ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಪರಿಶಿಷ್ಟ ಜಾತಿಗೆ ಸೇರಿದ ಎ.ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ನಾರಾಯಣಸ್ವಾಮಿ ಹಾಗೂ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಇಲ್ಲಿಗೆ ಪ್ರವೇಶ ಪಡೆದಿದ್ದಾರೆ ಎಂಬ ಅನುಮಾನ ಇದೆ. ನನ್ನನ್ನು ಒಳಗೆ ಬಿಡದಿರುವ ಬಗ್ಗೆ ಬಿ.ಎಲ್.ಸಂತೋಷ್ ಅವರು ಸ್ಪಷ್ಟನೆ ನೀಡಬಲ್ಲಿರಾ ಎಂದು ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಪ್ರಶ್ನಿಸಿದ್ದಾರೆ.
ಗೂಳಿಹಟ್ಟಿ ಆರೋಪಕ್ಕೆ ಆರ್‌ಎಸ್‌ಎಸ್ ಹೇಳಿದ್ದೇನು?
ಹೊಸದುರ್ಗದ ಮಾಜಿ ಶಾಸಕರಾದ ಗೂಳಿಹಟ್ಟಿ ಶೇಖರ್ ಅವರ ಆಡಿಯೋ ಹೇಳಿಕೆಯಲ್ಲಿ 'ತಮಗೆ ಜಾತಿ ಕಾರಣಕ್ಕೆ ನಾಗಪುರದ ಡಾ. ಹೆಡಗೇವಾರ್ ಸ್ಮಾರಕ ಕಟ್ಟಡದಲ್ಲಿ ಪ್ರವೇಶ ನಿರಾಕರಿಸಲಾಯಿತು' ಎಂದು ಆರೋಪಿಸಿದ್ದಾರೆ.
ನಾಗಪುರದಲ್ಲಿ ಸಂಘ ಕಾರ್ಯಾಲಯವನ್ನು ನೋಡಲು ಬಂದವರ ಹೆಸರನ್ನು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ. ಇದೊಂದು ನಿರಾಧಾರದ ಹಾಗೂ ಹುರುಳಿಲ್ಲದ ಆರೋಪವಾಗಿದೆ. ಆರ್ಎಸ್ಎಸ್ನ ಯಾವುದೇ ಕಚೇರಿಯಲ್ಲಾಗಲಿ, ಅಥವಾ ಈ ರೀತಿಯ ಸ್ಮಾರಕ ಕಟ್ಟಡಗಳಲ್ಲಾಗಲಿ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಎಲ್ಲಾ ಜಾತಿ, ವರ್ಗದ ಸಾವಿರಾರು ಜನ ನಿತ್ಯ ಬಂದು ಹೋಗುತ್ತಲೇ ಇದ್ದಾರೆ. ಯಾರಿಗೂ ಪ್ರವೇಶ ನಿರಾಕರಣೆಯ ಪ್ರಶ್ನೆಯೇ ಬಂದಿಲ್ಲ' ಎಂದು ಮಾಧ್ಯಮ ಪ್ರಕಟಣೆಯಲ್ಲಿ ಆರ್‌ಎಸ್‌ಎಸ್ ತಿಳಿಸಿದೆ.
ಇಷ್ಟಾಗಿ ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಮೊದಲು ಈ ಘಟನೆ ನಡೆದಿತ್ತು ಎನ್ನುವ ಗೂಳಿಹಟ್ಟಿ ಶೇಖರ್ ಅವರು ಆನಂತರ ಅನೇಕ ಸಂಘದ ಪ್ರಮುಖರನ್ನು ಭೇಟಿಯಾದರೂ ಎಲ್ಲಿಯೂ ತಮಗಾದ ಈ 'ಅವಮಾನ'ದ ಬಗ್ಗೆ ಹೇಳಿರಲಿಲ್ಲ. ಈಗ ಹತ್ತು ತಿಂಗಳ ನಂತರ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯಕರವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಲ್ಲರನ್ನೂ ಸದಾ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ' ಎಂದು ಆರ್‌ಎಸ್‌ಎಸ್ ತಿಳಿಸಿದೆ.












Click it and Unblock the Notifications