ಡೆಂಗ್ಯೂದಂತೆಯೇ ಮತ್ತೊಂದು ಹೊಸ ಜ್ವರ ಬಂದಿದೆ ಎಚ್ಚರ!
ಬೆಂಗಳೂರು, ಜುಲೈ 20 : ನಗರದಲ್ಲಿ ಡೆಂಗ್ಯೂ ಜ್ವರದ ದಾಂಗುಡಿ ಜನರನ್ನು ತತ್ತರಿಸುವಂತೆ ಮಾಡಿದ್ದರೆ, ಡೆಂಗ್ಯೂನಂತೆಯೇ ಇರುವ ಸ್ಕ್ರಬ್ ಟೈಫಸ್ ಎಂಬ ಮತ್ತೊಂದು ಬಗೆಯ ವೈರಲ್ ಜ್ವರವನ್ನು ರಾಜ್ಯದೆಲ್ಲೆಡೆ ನಿರ್ಲಕ್ಷಿಸಲಾಗುತ್ತಿದೆ. ಈ ಜ್ವರದ ಬಗ್ಗೆಯೂ ಪರೀಕ್ಷೆ ಮಾಡಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.
ನಗರದಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಡೆಂಗ್ಯೂ ಜ್ವರದ ಲಕ್ಷಣಗಳು ಕಂಡುಬಂದರೆ ಆ ರೋಗದ ಪರೀಕ್ಷೆ ಮಾತ್ರ ಮಾಡಲಾಗುತ್ತಿದೆ. ಆದರೆ, ಸ್ಕ್ರಬ್ ಟೈಫಸ್ ಎಂಬ ರೋಗದ ಪರೀಕ್ಷೆಗಳು ನಡೆಯದಿರುವುದು ವೈದ್ಯರನ್ನು ಚಿಂತೆಗೀಡು ಮಾಡಿದೆ.
ವಾಣಿ ವಿಲಾಸ ಆಸ್ಪತ್ರೆಯಲ್ಲಿ 363 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದರೆ, ಇಬ್ಬರಿಗೆ ಸ್ಕ್ರಬ್ ಟೈಫಸ್ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಈ ಸ್ಕ್ರಬ್ ಟೈಫಸ್ ರೋಗ ಸಾಂಕ್ರಾಮಿಕ ರೋರವವಾಗಿದ್ದು, ನಿರ್ಲಕ್ಷಿಸಿದರೆ ಇದು ಡೆಂಗ್ಯೂವಿನಂತೆಯೇ ಇತರರಿಗೂ ಅತ್ಯಂತ ವೇಗವಾಗಿ ಹರಡುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. [ನಗಬೇಡಿ, ಆಗಸ್ಟ್ 20 ವಿಶ್ವ ಸೊಳ್ಳೆ ದಿನಾಚರಣೆ!]

ರೋಗ ಲಕ್ಷಣಗಳು : ಸ್ಕ್ರಬ್ ಟೈಫಸ್ ಹೆಚ್ಚಾಗಿ ಮಕ್ಕಳನ್ನು ಕಾಡುತ್ತಿದ್ದು, ಡೆಂಗ್ಯೂ ಜ್ವರದ ಲಕ್ಷಣಗಳನ್ನೇ ಇದು ಕೂಡ ಹೊಂದಿದೆ. ವಾರದ ತನಕ ಜ್ವರವಿರುವುದು, ಮೈಮೇಲೆ ಕೆಂಪು ದದ್ದುಗಳು ಇರುತ್ತವೆ ಮತ್ತು ವಾಂತಿ-ಬೇಧಿಯಿಂದ ರೋಗಿ ಬಳಲುತ್ತಿರುತ್ತಾನೆ. ಇದನ್ನು ಡೆಂಗ್ಯೂ ಅಂತಲೇ ತಪ್ಪು ತಿಳಿಯುವ ಸಾಧ್ಯತೆ ಇದೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಆಶಾ ಬೆನಕಪ್ಪ ಅವರು ಹೇಳಿದ್ದಾರೆ.
ಡೆಂಗ್ಯೂ ಪರೀಕ್ಷೆ ಋಣಾತ್ಮಕ ಅಂತ ಬಂದರೆ, ಸ್ಕ್ರಬ್ ಟೈಫಸ್ ಜ್ವರದ ಪರೀಕ್ಷೆ ಕೂಡ ಕಡ್ಡಾಯವಾಗಿ ಮಾಡಲೇಬೇಕು. ಇದು ತಿಗಣೆಯಂಥ ಸಣ್ಣ ಹುಳುಗಳ ಕಡಿತದಿಂದ ಬರತ್ತದೆ. ಈ ಜ್ವರವನ್ನು ಟೈಫಾಯ್ಡ್ ಅಂತ ತಪ್ಪು ತಿಳಿಯುವ ಸಾಧ್ಯತೆ ಕೂಡ ಇದ್ದು, ಸೋಂಕು ತೀವ್ರತರವಾಗಿದ್ದರೆ ಜೀವಕ್ಕೂ ಅಪಾಯ ಒಡ್ಡಬಲ್ಲದು. ಆದರೆ, ಸೂಕ್ತ ಚಿಕಿತ್ಸೆ ಸಕಾಲದಲ್ಲಿ ನೀಡಿದರೆ ಕಡಿಮೆ ಮಾಡಬಹುದು ಎಂದು ಡಾ. ಆಶಾ ಬೆನಕಪ್ಪ ನುಡಿದಿದ್ದಾರೆ.
ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ಕೂಡ ಸ್ಕ್ರಬ್ ಟೈಫಸ್ ಸೋಂಕು ಅಂಟಿಸಿಕೊಂಡವರ ಪರೀಕ್ಷೆ ಮಾಡುತ್ತಿದೆ. ಮೊದಲಿಗೆ ಜಪಾನ್, ಚೀನಾ, ಟಿಬೇಟ್, ಪಾಕಿಸ್ತಾನದಲ್ಲಿ ಕಂಡುಬಂದಿದ್ದ ಈ ರೋಗ ಈಗ ಭಾರತದೊಳಗೂ ನುಸುಳಿದ್ದು, ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಈ ಜ್ವರ ಕಾಣಿಸಿಕೊಳ್ಳುತ್ತಿದ್ದು, ಜನರು ನಿಬಿಡ ಮತ್ತು ಸ್ವಚ್ಛವಲ್ಲದ ಪ್ರದೇಶದಿಂದ ದೂರವಿರಬೇಕಾಗಿ ವೈದ್ಯರು ಹೇಳಿದ್ದಾರೆ. [ಡೆಂಗ್ಯೂ ಮರೆತುಬಿಡಿ ಈ ಜೋಕನ್ನು ಓದಿರಿ]












Click it and Unblock the Notifications