DK Shivakumar: ಡಿ ಕೆ ಶಿವಕುಮಾರ್ ಬಿಜೆಪಿ ಸೇರ್ಪಡೆ: ಕನಕಪುರ ಬಂಡೆ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 03: ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಿಂದ ಒಂದು ಕಾಲು ಹೊರಗಿಟ್ಟಿದ್ದು, ಬಿಜೆಪಿ ಸಹಕಾರದೊಂದಿಗೆ ಸರ್ಕಾರ ರಚಿಸಲು ಮುಂದಾಗಿದ್ದರು ಎಂಬುದಾಗಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರ ಪುತ್ರ ರಾಜೇಶ್ ರಾಜಣ್ಣ ಅವರು ಡಿ ಕೆ ಶಿವಕುಮಾರ್ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಹೇಳಿದ್ದು, ಈ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಯಾರೂ ಏನಾದರೂ ಹೇಳಿಕೆ ನೀಡಲಿ, ನಾನು ರಾಜಕೀಯ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಖಾತಾ, ಆಸ್ತಿ ತೆರಿಗೆ ಎಲ್ಲವೂ ಬಿಬಿಎಂಪಿ ಮಾನದಂಡಗಳೇ ಮುಂದುವರಿಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್, ಖಂಡಿತಾ ಅದೇ ಮುಂದುವರಿಯಲಿದ್ದು, ಹೊಸ ಪಾಲಿಕೆಗಳ ಮೂಲಕ ಮುಂದುವರಿಯಲಿದೆ. ಇಂದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದು, ಅಧಿಕಾರಿಗಳು ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ನಾಳೆಯಿಂದ ಖಾತೆ ತೆರೆದು ತಮ್ಮ ಪಾಲಿಕೆಗಳ ನವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಿಸಲಿದ್ದಾರೆ. ಒಂದೆರಡು ದಿನಗಳು ಹೆಚ್ಚು ಕಮ್ಮಿಯಾಗಬಹುದು ಎಂದು ತಿಳಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲೆ ಯಾವಾಗ ಸೇರ್ಪಡೆಯಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಅದು ಸಧ್ಯಕ್ಕೆ ಸೇರುವುದಿಲ್ಲ. ಯಲಹಂಕ, ತುಮಕೂರು ರಸ್ತೆಯ ಕೆಲವು ಪ್ರದೇಶಗಳು ಇನ್ನೂ ಪಂಚಾಯ್ತಿ ವ್ಯಾಪ್ತಿಯಲ್ಲಿವೆ. ಅವೆಲ್ಲವೂ ಈಗ ನಗರವಾಗಿವೆ ಎಂದು ತಿಳಿಸಿದರು. ವಿಮಾನ ನಿಲ್ದಾಣದವರೆಗೂ ಸಧ್ಯಕ್ಕೆ ಇರುವ ಪ್ರಸ್ತುತ ವ್ಯಾಪ್ತಿಯನ್ನು ಮಾತ್ರ ಮಾಡಿದ್ದೇವೆ. ಉಳಿದಂತೆ ನಿಮ್ಮಂತಹವರ ಸಲಹೆ ಪಡೆದ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಸಾಂಪ್ರದಾಯಿಕವಾಗಿ ಗಣ್ಯರು ರಾಜ್ಯಕ್ಕೆ ಬಂದಾಗ ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಮೇಯರ್ ಹೋಗುತ್ತಿದ್ದರು. ಈಗ ಐವರು ಮೇಯರ್ ಇರುವುದರಿಂದ ಯಾರು ಹೋಗುತ್ತಾರೆ ಎಂದು ಕೇಳಿದಾಗ, ಸಧ್ಯಕ್ಕೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಹೋಗುತ್ತಾರೆ. ಹೆಚ್ಎಎಲ್ ಗೆ ಬಂದರೆ ಅವರು ಹೋಗುತ್ತಾರೆ. ನೀವು ಮಾಧ್ಯಮದವರು ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ವರದಿಗಾರರನ್ನು ಕಳುಹಿಸುತ್ತೀರಲ್ಲ ಎಂದು ತಿಳಿಸಿದರು.
ಜಿಬಿಎ ಜಾರಿಯಿಂದ ನಿಮಗೆ ರಾಜಕೀಯವಾಗಿ ಲಾಭ ಇದೆಯೇ ಹಾಗೂ ಮುಂದಿನ ಚುನಾವಣೆಯಲ್ಲಿ ಐದೂ ಪಾಲಿಕೆ ಕಾಂಗ್ರೆಸ್ ವಶವಾಗುತ್ತಾ ಎಂಬ ಬಗ್ಗೆ ಮಾತನಾಡಿ, ಇದು ನನ್ನ ಆತ್ಮತೃಪ್ತಿ. ನಾನು ಜನರ ಬಳಿಗೆ ಹೋಗಿ, ಅವರ ಸೇವೆ ಮಾಡುತ್ತಿದ್ದು, ಈ ಮೂಲಕ ಇತಿಹಾಸ ಪುಟಕ್ಕೆ ಸೇರುತ್ತಿದ್ದೇನೆ. ನಾನು ರಾಜಕಾರಣ ದೃಷ್ಟಿಯಿಂದ ಇದನ್ನು ಮಾಡಿಲ್ಲ. ಹೊಸ ನಾಯಕರನ್ನು ಬೆಳೆಸುವ ಅವಕಾಶವಿದೆ. ಇದೇ ರಾಜೀವ್ ಗಾಂಧಿ ಅವರ ಚಿಂತನೆ. ಪಂಚಾಯತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರು ತಯಾರಾಗಬೇಕು ಎಂದು ಹೇಳಿದ್ದರು. ಬೆಂಗಳೂರಿನಲ್ಲೇ ಪಾಲಿಕೆ ಸದಸ್ಯರಿಂದ ಶಾಸಕರಾಗಿರುವವರು ಸುಮಾರು 10 ಜನರಿಲ್ಲವೇ ಎಂದು ತಿಳಿಸಿದರು.
ವಿಧಾನಸಭಾ ಕ್ಷೇತ್ರಗಳನ್ನು ವಿಭಜಿಸಲಾಗಿದೆ ಎಂದು ಸದನದಲ್ಲಿ ವಿರೋಧ ಪಕ್ಷಗಳ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಕೇಳಿದಾಗ, ಪಕ್ಷಾತೀತವಾಗಿ, ಮಾಧ್ಯಮಗಳು ಸೇರಿದಂತೆ ಎಲ್ಲರೂ ತಮ್ಮ ಮೆಚ್ಚುಗೆಯನ್ನು ಯಾವ ರೀತಿ ವ್ಯಕ್ತಪಡಿಸಿದ್ದಾರೆ ಎಂಬುದು ನನಗೆ ಮಾತ್ರ ಗೊತ್ತಿದೆ. ಹೊರಗಡೆ ಮಾತನಾಡಬೇಕು ಹೀಗಾಗಿ ಮಾತನಾಡುತ್ತಾರೆ. ಆದರೆ ಎಲ್ಲರೂ ಸಂತೋಷವಾಗಿದ್ದಾರೆ ಎಂದು ತಿಳಿಸಿದರು.
ಪ್ರಾಧಿಕಾರದ ಸದಸ್ಯರಾಗಿ ಯತೀಂದ್ರ ಸಿದ್ದರಾಮಯ್ಯ ಹಾಗೂ ನಸೀರ್ ಅಹ್ಮದ್ ಅವರ ನೇಮಕ ಯಾವ ಮಾನದಂಡದ ಮೇಲೆ ಆಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಬೆಂಗಳೂರು ನಗರದಲ್ಲಿ ಮತದಾರರಾಗಿರುವವರು, ಇಲ್ಲಿನ ಸಂಸ್ಥೆಗಳಿಂದ ಆರಿಸಿರುವವರು ಆಯ್ಕೆಯಾಗಿದ್ದಾರೆ. ಯತೀಂದ್ರ ಅವರ ಮತ ಬೆಂಗಳೂರಿನಲ್ಲಿ ಇರಬಹುದು, ನನಗೆ ಗೊತ್ತಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ವಾಸಿಸುವ, ರಾಜ್ಯಸಭೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವವರು ಇಲ್ಲಿ ಸದಸ್ಯರಾಗಿರುತ್ತಾರೆ ಎಂದು ತಿಳಿಸಿದರು.












Click it and Unblock the Notifications