Gruha Lakshmi Scheme: ಗೃಹಲಕ್ಷ್ಮಿ ಹಣ ಕೂಡಿಟ್ಟು ಫ್ರಿಡ್ಜ್ ಖರೀದಿಸಿದ ಮಹಿಳೆಗೆ ಡಿಕೆಶಿ ಮೆಚ್ಚುಗೆ
ಬೆಂಗಳೂರು, ಏಪ್ರಿಲ್ 10: ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಬರುವ 2,000 ರೂಪಾಯಿ ಹಣ ಕೂಡಿಟ್ಟು ಫ್ರಿಡ್ಜ್ ಖರೀದಿಸಿದ ಮಹಿಳೆಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಹಾವೇರಿಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಗ್ಯಾರಂಟಿಯ ಹಣ ಕೂಡಿಟ್ಟು ಫ್ರಿಡ್ಜ್ ಖರೀದಿಸಿದ ಸುದ್ದಿ ತಿಳಿದು ಮನಸ್ಸಿನಲ್ಲಿ ಒಂದು ಸಾರ್ಥಕತೆಯ ಭಾವ ಮೂಡಿದೆ ಎಂದಿದ್ದಾರೆ.

ರಾಜಕೀಯ ಮಾಡಲೆಂದೇ ಎಷ್ಟೋ ಜನ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ನಾವು ಬಡವರ ಮೇಲೆ ರಾಜಕೀಯ ಮಾಡಲ್ಲ, ಬಡವರ ಬದುಕು ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಅವರ ಬದುಕಿನ ಗುಣಮಟ್ಟ ಹೆಚ್ಚಿಸಿದ ಸಾರ್ಥಕತೆ ಸಾಕು ನಮಗೆ ಎಂದು ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಆರೇ ತಿಂಗಳಲ್ಲಿ ಪೂರೈಸಿತ್ತು. ಗೃಹ ಜ್ಯೋತಿ, ಗೃಹಲಕ್ಷ್ಮೀ, ಮಹಿಳೆಯರಿಗೆ ಉಚಿತ ಬಸ್, ಅನ್ನಭಾಗ್ಯ ಯೋಜನೆ ಹಾಗೂ ಯುವ ನಿಧಿ ಯೋಜನೆಯನ್ನು ಸರ್ಕಾರ ಜನರಿಗೆ ನೀಡಿದೆ. ಐದು ಗ್ಯಾರಂಟಿಗಳಲ್ಲಿ ಒಂದಾದ ಪ್ರತಿ ಮನೆ ಒಡತಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ಸಹ ಒಂದಾಗಿದ್ದು, ಈ ಯೋಜನೆಯ ಹಣ ಬಹಳಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ.
ಇದೇ ಹಣವನ್ನು ಕೂಡಿಟ್ಟುಕೊಂಡು ಹಾವೇರಿ ಜಿಲ್ಲೆಯ ಮಹಿಳೆಯೊಬ್ಬರು ಯುಗಾದಿ ಹಬ್ಬಕ್ಕೆ ಫ್ರಿಡ್ಜ್ ತೆಗೆದುಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಲತಾ ಎನ್ನುವವರು ತಮಗೆ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕೂಡಿಟ್ಟು ಯುಗಾದಿ ಹಬ್ಬಕ್ಕೆ ಹೊಸ ಫ್ರಿಡ್ಜ್ವೊಂದನ್ನು ಖರೀದಿಸಿದ್ದಾರೆ. ಈ ವಿಚಾರ ಎಲ್ಲೆಡೆ ವೈರಲ್ ಆಗಿದ್ದು, ಇದೀಗ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications