ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ
ಕಾಂಗ್ರೆಸ್ ಪಕ್ಷವೇ ನಮಗೆ ಮುಖ್ಯ. ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕು. ದೇಶಕ್ಕೆ ದೊಡ್ಡ ಸಂದೇಶ ಹೋಗಬೇಕು ಎನ್ನುವ ಕಾರಣಕ್ಕೆ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ದಾವಣಗೆರೆ ಉಪಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿದ್ದ ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸಬೇಕು ಎಂದು ಯುವ ಶಾಸಕರಾದ ರಿಜ್ವಾನ್ ಹರ್ಷದ್ ಹಾಗೂ ಸಲೀಂ ಅಹಮದ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಅವರು ಯಶಸ್ವಿಯಾಗಿ ಮನವೊಲಿಸಿದ್ದಾರೆ ಎಂದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ, ನಮಗೆ ನಮ್ಮ ಪಕ್ಷ, ಕಾರ್ಯಕರ್ತರು, ಸಿದ್ದಾಂತದ ಮೇಲೆ ದೊಡ್ಡ ನಂಬಿಕೆಯಿದೆ. ನಾಮಪತ್ರ ವಾಪಸ್ ಪಡೆಯಲು ಕಡಿಮೆ ಸಮಯ ಇದ್ದ ಕಾರಣಕ್ಕೆ ಹಿಂಪಡೆಯಲು ಆಗಲಿಲ್ಲ. ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಸಾದಿಕ್ ಪೈಲ್ವಾನ್ ಅವರು ಮಾತನಾಡಿ, 'ನಾನು ಹುಟ್ಟಿದಾಗಿನಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ. ಪಕ್ಷ ಬೆಳೆಸಿದ್ದೇನೆ. ನನ್ನ ಮಗ ಯೂತ್ ಕಾಂಗ್ರೆಸ್ ಅಧ್ಯಕ್ಷ, ತಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂದು ಹೇಳಿದರು ಎಂದರು.

ಅವಕಾಶ ನೀಡಿ ಎಂದು ಕೇಳುವುದರಲ್ಲಿ ತಪ್ಪಿಲ್ಲ. ಏಕೆಂದರೆ ಕಳೆದ 40 ವರ್ಷದಿಂದ ಪಕ್ಷದ ಕೆಲಸ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಹಾಗೂ ಸಾದಿಕ್ ಅವರು ರಾಮ ಲಕ್ಷ್ಮಣರಂತೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ನನ್ನ ಪಕ್ಷಕ್ಕೆ ನಾನು ದ್ರೋಹ ಮಾಡುವುದಿಲ್ಲ. ಕಾಂಗ್ರೆಸ್ಸಿಗನಾಗಿ ನಾನು ಇರುತ್ತೇನೆ ಎಂದು ಸಾದಿಕ್ ಅವರು ಹೇಳಿದ್ದಾರೆ. ಎಲ್ಲ ನಾಯಕರ ಪರವಾಗಿ ಸಾದಿಕ್ ಅವರಿಗೆ ಅಭಿನಂದಿಸುತ್ತೇನೆ. ಪಕ್ಷ ಯಾವಾಗಲೂ ಅವರ ನಿಯತ್ತು, ಶಿಸ್ತು, ತ್ಯಾಗಕ್ಕೆ ಗೌರವ ಸಲ್ಲಿಸುತ್ತದೆ ಎಂದರು.
ಶಿವಶಂಕರಪ್ಪ ಅವರಿಗಿಂತ ಹೆಚ್ಚು ಮತಗಳಿಂದ ಸಮರ್ಥ್ ಗೆಲುವು
ಅಲ್ಪಸಂಖ್ಯಾತರ ಮತಗಳು ಯಾವ ಕಾರಣಕ್ಕೂ ವಿಭಜನೆ ಆಗುವುದಿಲ್ಲ. ಬೇರೆ ಸಮುದಾಯಗಳೂ ಆಗುವುದಿಲ್ಲ. ಶಿವಶಂಕರಪ್ಪ ಅವರಿಗಿಂತ ಹೆಚ್ಚು ಮತಗಳ ಅಂತರದಿಂದ ಅವರ ಮೊಮ್ಮಗ ಸಮರ್ಥ್ ಗೆಲ್ಲುತ್ತಾರೆ. ಅವರು ಸಾಕಿದಂತಹ ಮಗ ಗೆಲ್ಲುತ್ತಾನೆ ಎನ್ನುವ ವಿಶ್ವಾಸವಿದೆ. ದಾವಣಗೆರೆಗೆ ಕೊಡುಗೆಯನ್ನು ಇಡೀ ರಾಜ್ಯ ನೋಡುವಂತೆ ಆ ಕುಟುಂಬ ಕೊಟ್ಟಿದೆ. ಜನ ಅವರನ್ನ ಸ್ಮರಿಸುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮಾನತಿಗೆ ನಾನು ಸಹಿ ಹಾಕಿಲ್ಲ. ಸ್ಥಳೀಯವಾಗಿ ಇದು ಆಗಿದೆ. ನಾನು ಹಾಗೂ ಮುಖ್ಯಮಂತ್ರಿಯವರು ಇದರ ಬಗ್ಗೆ ಮಾತನಾಡಿದ್ದೇವೆ. ಈ ವಿಚಾರವನ್ನ ಬಹಿರಂಗಗೊಳಿಸುವುದಿಲ್ಲ. ಜಮೀರ್, ಜಬ್ಬಾರ್, ನಜೀರ್ ಅವರು ಎಲ್ಲಾ ಕಾಂಗ್ರೆಸ್ ನಾಯಕರು ಪಕ್ಷದ ಏನು ಹೇಳುತ್ತದೆಯೋ ಅದನ್ನು ಕೇಳುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಪೈಲ್ವಾನ್, ಉಸ್ತಾದ್ ಇರಬಹುದು ಎಲ್ಲರೂ ನಮ್ಮವರೇ. ಚುನಾವಣೆ ಸಮಯದಲ್ಲಿ ಒಂದಷ್ಟು ಭಿನ್ನಾಭಿಪ್ರಾಯ ಬಂದೇ ಬರುತ್ತದೆ. ನಾವು ಅದನ್ನು ನಿಭಾಯಿಸುತ್ತೇವೆ ಎಂದರು.

ಜಮೀರ್ ಮುನಿಸಿಕೊಂಡಿಲ್ಲ
ಜಮೀರ್ ಅಹಮದ್ ಅವರ ಬೆಂಬಲದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದರು ಎನ್ನುವ ಬಗ್ಗೆ ಕೇಳಿದಾಗ, "ನಾನು ಅದನ್ನೆಲ್ಲ ಹೇಳುವುದಿಲ್ಲ. ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾಮಪತ್ರ ಸಲ್ಲಿಕೆ ಮಾಡಿದ್ದರು. ಸಮಯ ಆಗಿರುವ ಕಾರಣಕ್ಕೆ ನಾಮಪತ್ರ ಹಿಂಪಡೆಯಲು ಆಗಿಲ್ಲ. ಆದರೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ" ಎಂದರು. ಜಮೀರ್ ಮುನಿಸಿಕೊಂಡಿದ್ದಾರೆಯೇ ಎಂದು ಪ್ರಶ್ನೆಗೆ "ಯಾರು ಇದನ್ನೆಲ್ಲ ಹೇಳಿದ್ದು. ಕೇರಳ ಚುನಾವಣೆ ಜವಾಬ್ದಾರಿ ಇರುವ ಕಾರಣಕ್ಕೆ ಆ ಕೆಲಸದಲ್ಲಿದ್ದಾರೆ. ಅವರು ನನ್ನ ಸಂಪರ್ಕದಲ್ಲಿದ್ದಾರೆ" ಎಂದರು.












Click it and Unblock the Notifications