ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಲಿ: ವಿರೋಧಿಸಿದವರಿಗೆ ಬಾನು ಮುಷ್ತಾಕ್ ತಿರುಗೇಟು
ಬೆಂಗಳೂರು, ಆಗಸ್ಟ್ 26: ವಿಶ್ವವಿಖ್ಯಾತ, ನಾಡಹಬ್ಬ ಮೈಸೂರು ದಸರಾ 2025ಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿಯ ದಸರಾ ಉದ್ಘಾಟನೆಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ, ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರನ್ನ ರಾಜ್ಯ ಸರ್ಕಾರ ಆಯ್ಕೆ ಮಾಡಲಾಗಿದೆ. ಆದರೆ, ಈ ಆಯ್ಕೆಗೆ ಬಿಜೆಪಿ ಸೇರಿದಂತೆ ಕೆಲವು ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸದ್ಯ ರಾಜ್ಯದಲ್ಲಿ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಭಾರೀ ವಿವಾದ ಮತ್ತು ಚರ್ಚೆಯ ನಡುವೆ ಸಾಹಿತಿ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಕುರಿತು ಖಡಕ್ ಉತ್ತರ ನೀಡಿದ್ದಾರೆ.
ಈ ಕುರಿತು ಬಾನು ಮುಷ್ತಾಕ್ ಅವರು ಮಾತನಾಡಿ, ಕನ್ನಡ ಬಾವುಟದ ಬಗ್ಗೆ ಮಾತನಾಡಿದ ಬಾನು ಮುಷ್ತಾಕ್, ಕನ್ನಡವನ್ನು ನನ್ನಷ್ಟು ಪ್ರೀತಿಸಿ. ಕನ್ನಡವನ್ನ ನನ್ನಷ್ಟು ಬಳಕೆ ಮಾಡಿ. ಕನ್ನಡವನ್ನು ನನ್ನಷ್ಟು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ. ಅಲ್ಲಿನವರ ಬಾಯಲ್ಲಿ ಕನ್ನಡ ಎಂದು ಹೇಳಿಸುತ್ತಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಒಂದೊಂದು ಪುಟ ಓದುತ್ತಿದ್ದೇನೆ. ಅವರೂ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾರೆ. ನನ್ನಂತೆ ನೀವು ಸಾಧನೆ ಮಾಡಿದ್ರೆ ಟೀಕೆ ಮಾಡಲು ಅರ್ಹತೆ ಸಿಗುತ್ತೆ. ಇಲ್ಲದೆ ಹೋದರೆ ನಿಮ್ಮ ಯಾವುದೇ ಮಾತಿನಲ್ಲಿ ಸ್ಪಷ್ಟತೆ ಇರುವುದಿಲ್ಲ. ನಂಬಿದವರನ್ನು ಕನ್ನಡ ಯಾವತ್ತೂ ಕೈ ಬಿಡಲ್ಲ, ಇದಕ್ಕೆ ನಾನೇ ಸಾಕ್ಷಿ ಎಂದು ವಿರೋಧಿಸಿದವರಿಗೆ ಚಾಟಿ ಬೀಸಿದರು.

ಬೂಕರ್ ಬಗ್ಗೆ ಕನ್ನಡಿಗರು ಅಪಾರ ಸಂತಸಪಡುತ್ತಿದ್ದಾರೆ. ಅವರಿಗೆ ಪ್ರಶಸ್ತಿ ಬಂದಂತೆ ಸಂಭ್ರಮಿಸಿದ್ದಾರೆ. ಬೂಕರ್ ತಾನಾಗಿಯೇ ಒಲಿದು ಬಂದ ಪ್ರಶಸ್ತಿ. ಕರ್ನಾಟಕ ಸರ್ಕಾರ ಹಾಗೂ ಜನರಿಂದ ಹಲವು ಗೌರವ ಸಿಕ್ಕಿದೆ. ಅದರ ಬಗ್ಗೆ ಅತ್ಯಂತ ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ. ದಸರಾ ಉದ್ಘಾಟನೆ ಗೆ ಸರ್ಕಾರ ಪ್ರೀತಿಯಿಂದ ಗೌರವದಿಂದ ಸ್ವಾಗತ ಮಾಡಿದ್ದಾರೆ. ಅವರ ಮಮತೆಯ ಕರೆಯೋಲೆಗೆ ಧನ್ಯವಾದಗಳು. ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಹೆಸರು ಘೋಷಣೆ ಮಾಡಿದಾಗ ನಾನು ಹೊರ ದೇಶದಲ್ಲಿ ಇದ್ದೆ. ಸ್ನೇಹಿತರಿಂದ ವಿಚಾರ ತಿಳಿದು ಅಪಾರ ಸಂತೋಷವಾಗಿದೆ ಎಂದು ಬಾನು ಮುಷ್ತಾಕ್ ಹೇಳಿದರು.
ಇನ್ನೂ ನನ್ನ ಗೆಳತಿ ಲೇಖಕಿ ಮೈಸೂರಿನ ಮೀನಾ ಮೈಸೂರು ನನಗೆ ಬೂಕರ್ ಅವಾರ್ಡ್ ಬರಲಿ ಎಂದು ಚಾಮುಂಡೇಶ್ವರಿ ಗೆ ಹರಕೆ ಹೊತ್ತಿದ್ದರಂತೆ. ನನ್ನ ಕೃತಿ ಲಿಸ್ಟ್ ನಲ್ಲಿ ಬಂದಾಗ ಹರಕೆ ಹೊತ್ತಿದ್ದರಂತೆ. ಈ ವಿಚಾರ ಕೇಳಿದ ನಾನು ಸಂತೋಷ ಪಟ್ಟಿದ್ದೆ. ಬೂಕರ್ ಅವಾರ್ಡ್ ಬಳಿಕ ಲಿಡ್ ಫೆಸ್ಟಿವಲ್ ಸಂದರ್ಭದಲ್ಲಿ ಮೈಸೂರಿಗೆ ಹೋಗಿದ್ದೆ. ಆಗ ಅಲ್ಲಿ ಸಿಕ್ಕಿದ್ದ ಗೆಳತಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಹರಕೆ ತೀರುಸೋಣ ಎಂದಿದ್ದರು. ಆಗಲೂ ಸಮಯದ ಕೊರತೆಯಿಂದ ಹೋಗಲು ಆಗಿರಲಿಲ್ಲ. ಆದರೆ ಈಗ ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಕರೆಸಿಕೊಳ್ಳುತ್ತಿದ್ದಾಳೆ ಎಂದು ಬಾನು ಮುಷ್ತಾಕ್ ಹರ್ಷ ವ್ಯಕ್ತಪಡಿಸಿದರು.












Click it and Unblock the Notifications