ನಮ್ಮ MLA ಅಮೆರಿಕದಲ್ಲಿದ್ದಾರೆ, ಭೇಟಿಯಾಗಲು ವೀಸಾ ಕೊಡಿಸಿ! ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ರೈತರ ಆಕ್ರೋಶ
ಮಂಡ್ಯ: ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪದೇಪದೇ ಅಮೆರಿಕಾ ಪ್ರವಾಸದ ಬಗ್ಗೆ ಕ್ಷೇತ್ರದ ಕೆಲವು ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿರುವ ಮತದಾರರು, ತಮಗೆ ಅಮೆರಿಕಾಗೆ ಉಚಿತ ವೀಸಾ ಕೊಡಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ವ್ಯಂಗ್ಯವಾಗಿ ಮನವಿ ಸಲ್ಲಿಸಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಕ್ಷೇತ್ರದ ನಿವಾಸಿಗಳ ಗುಂಪೊಂದು ಶಾಂತಿಯುತ ಪ್ರತಿಭಟನೆ ನಡೆಸಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಭೇಟಿ ಮಾಡಲು ಅಮೆರಿಕಾಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕ್ಷೇತ್ರದಲ್ಲಿ ರೈತರ ಸಮಸ್ಯೆಗಳು, ಬರ ಪರಿಸ್ಥಿತಿ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಇಂತಹ ಸಂದರ್ಭದಲ್ಲಿ ಶಾಸಕರು ಪದೇಪದೇ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ. ಶಾಸಕರು ಕ್ಷೇತ್ರದಲ್ಲೇ ಇದ್ದು ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದರ್ಶನ್ ಪುಟ್ಟಣ್ಣಯ್ಯ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಕರ್ನಾಟಕ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ನೊಂದಿಗೆ ಪಕ್ಷ ಮೈತ್ರಿ ಮಾಡಿಕೊಂಡಿತ್ತು. ಅವರು ಪಕ್ಷದ ಏಕೈಕ ಶಾಸಕರಾಗಿದ್ದಾರೆ.
18ಕ್ಕೂ ಹೆಚ್ಚು ಬಾರಿ ಅಮೆರಿಕ ಪ್ರವಾಸ
ಶಾಸಕರಾಗಿ ಆಯ್ಕೆಯಾದ ಬಳಿಕ ದರ್ಶನ್ ಪುಟ್ಟಣ್ಣಯ್ಯ ಅವರು 18ರಿಂದ 19 ಬಾರಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ಅವರ ಪ್ರವಾಸವನ್ನ ಕೈಗೊಂಡಿದ್ದಾರೆ. ಈ ಕಾರಣದಿಂದಾಗಿ ಅವರು ಕ್ಷೇತ್ರದ ಜನರಿಗೆ ಲಭ್ಯವಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಆದರೆ, ತಮ್ಮ ಅಮೆರಿಕಾ ಪ್ರವಾಸಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಕುಟುಂಬ ಅಮೆರಿಕದಲ್ಲಿ ವಾಸಿಸುತ್ತಿರುವುದು ನಿಜ. ತಂದೆ ಹಾಗೂ ಮಾಜಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರ ನಿಧನದ ಬಳಿಕ 2021ರಲ್ಲಿ ಭಾರತಕ್ಕೆ ಮರಳಿದ್ದಾಗಿ ಅವರು ಹೇಳಿದ್ದಾರೆ.
2021ರಲ್ಲಿ ತಮ್ಮ ಕಂಪನಿಯನ್ನು ಮಾರಾಟ ಮಾಡಿದರೂ, 2023ರವರೆಗೆ ಅದೇ ಕಂಪನಿಯಲ್ಲಿ ಕೆಲಸ ಮಾಡಿದ್ದಾಗಿ ಅವರು ವಿವರಿಸಿದ್ದಾರೆ. ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತಕ್ಕೆ ಬಂದಿದ್ದು, ತಮ್ಮ ಪತ್ನಿ ಮತ್ತು ಮಕ್ಕಳು ಅಮೆರಿಕದಲ್ಲೇ ಉಳಿದಿದ್ದಾರೆ ಎಂದು ತಿಳಿಸಿದ್ದಾರೆ.
ಕುಟುಂಬದೊಂದಿಗೆ ಇರಲು ಅಗತ್ಯವಿರುವ ಸಂದರ್ಭಗಳಲ್ಲಿ ಅಮೆರಿಕಕ್ಕೆ ತೆರಳುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಭಾರತಕ್ಕೆ ಕುಟುಂಬ ಸಮೇತ ಬರುವ ಕುರಿತು ಕುಟುಂಬದವರಲ್ಲಿ ಆತಂಕವಿತ್ತು. ಅವರ ಜೀವನದಲ್ಲಿ ದೊಡ್ಡ ಬದಲಾವಣೆ ಉಂಟಾಗಬಹುದು ಎಂಬ ಕಾರಣದಿಂದ ಅವರು ಭಾರತಕ್ಕೆ ಬರಲು ಹಿಂಜರಿದಿದ್ದರು ಎಂದು ಪುಟ್ಟಣ್ಣಯ್ಯ ತಿಳಿಸಿದ್ದಾರೆ.
24 ಗಂಟೆಯೂ ಜನರಿಗೆ ಲಭ್ಯ
ತಮ್ಮ ವಿದೇಶ ಪ್ರವಾಸಗಳ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವುದನ್ನು ಒಪ್ಪಿಕೊಂಡಿರುವ ದರ್ಶನ್ ಪುಟ್ಟಣ್ಣಯ್ಯ, ಶಾಸಕರಾಗಿ ಆಯ್ಕೆಯಾದ ಬಳಿಕ 18ರಿಂದ 19 ಬಾರಿ ಅಮೆರಿಕಕ್ಕೆ ಪ್ರಯಾಣಿಸಿರುವುದಾಗಿ ಹೇಳಿದ್ದಾರೆ.
ಆದರೆ, ತಾವು ವಿದೇಶದಲ್ಲಿದ್ದರೂ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಅವರು ತಿಳಿಸಿದ್ದಾರೆ. ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ದಿನದ 24 ಗಂಟೆಯೂ ಜನರಿಗೆ ಲಭ್ಯವಿರುತ್ತೇನೆ. ಭೌತಿಕವಾಗಿ ಕ್ಷೇತ್ರದಲ್ಲಿರದಿದ್ದರೂ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎಂಬುದು ಅವರ ವಾದವಾಗಿದೆ.
ಮೇಲುಕೋಟೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಎರಡು ಡಿಜಿಟಲ್ ವೇದಿಕೆಗಳನ್ನು ರೂಪಿಸಿರುವುದಾಗಿ ಅವರು ಹೇಳಿದ್ದಾರೆ. ಈ ವೇದಿಕೆಗಳ ಮೂಲಕ ನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸಲು ನೆರವಾಗುತ್ತಿದೆ ಎಂದು ತಿಳಿಸಿದ್ದಾರೆ.
ರೈತರಿಗೆ ಮಾರುಕಟ್ಟೆ, ಬೆಳೆ ಯೋಜನೆ
ರೈತರಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಸ್ಥಳೀಯ ಮಟ್ಟದಲ್ಲಿ 'ಚಕ್ರೀಯ ಆರ್ಥಿಕತೆ' (Circular Economy) ಉತ್ತೇಜಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪುಟ್ಟಣ್ಣಯ್ಯ ಹೇಳಿದ್ದಾರೆ.
ಪ್ರತಿ ಹಂಗಾಮಿನಲ್ಲಿ ಯಾವ ಬೆಳೆ ಬೆಳೆಯಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಬೆಳೆಯಬೇಕು ಎಂಬುದರ ಕುರಿತು ರೈತರಿಗೆ ಸಲಹೆ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೈತಪರ ಪಕ್ಷವಾಗಿ ರೈತರ ಹಿತಾಸಕ್ತಿಗಾಗಿ ಇಂತಹ ಕೆಲಸಗಳನ್ನು ಮಾಡುವುದು ತಮ್ಮ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
Darshan Puttannaiah: 'ಒಂದೇ ಒಂದು ಅಧಿವೇಶನವನ್ನೂ ತಪ್ಪಿಸಿಲ್ಲ'
ವಿಧಾನಸಭೆ ಕಲಾಪಗಳಿಗೆ ತಮ್ಮ ಹಾಜರಾತಿ ಬಗ್ಗೆಯೂ ದರ್ಶನ್ ಪುಟ್ಟಣ್ಣಯ್ಯ ಸ್ಪಷ್ಟನೆ ನೀಡಿದ್ದಾರೆ. ತಾವು ಒಂದೇ ಒಂದು ವಿಧಾನಸಭೆ ಅಧಿವೇಶನವನ್ನೂ ತಪ್ಪಿಸಿಲ್ಲ ಎಂದು ಹೇಳಿದ್ದಾರೆ.
ಅಮೆರಿಕ ಪ್ರವಾಸಗಳನ್ನು ಸಾಮಾನ್ಯವಾಗಿ ವಿಧಾನಸಭೆಯ ಕಲಾಪಗಳು ನಡೆಯದ ವಿರಾಮದ ಅವಧಿಯಲ್ಲೇ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಕ್ಷೇತ್ರದ ಜನರ ಬಗೆಗಿನ ತಮ್ಮ ಬದ್ಧತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕ್ಷೇತ್ರದ ಜನರು ತಮ್ಮ ಪಾಲಿಗೆ ವಿಸ್ತೃತ ಕುಟುಂಬದವರಿದ್ದಂತೆ ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.


Click it and Unblock the Notifications
