ಡಿಕೆಶಿ ‘ಕುಂಭಸ್ನಾನ’ ನಂತರ ವಿರೋಧಿಗಳು ಸಿಡಿದೆದ್ರಾ? ಗರ್ವಭಂಗಕ್ಕೆ ವೇದಿಕೆ ಸಿದ್ಧವಾಯಿತಾ?
ಬೆಂಗಳೂರು, ಫೆಬ್ರವರಿ 14: ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ದೊಡ್ಡಮಟ್ಟದಲ್ಲಿ ಮಸಲತ್ತುಗಳು ಆರಂಭವಾಗಿವೆ ಎನ್ನುವುದು ಗೋಚರಿಸುತ್ತಿದೆ. ಅಷ್ಟೇ ಅಲ್ಲದೆ ಅವರ ಗರ್ವಭಂಗಕ್ಕೆ ವೇದಿಕೆಗಳು ಕೂಡ ಸದ್ದಿಲ್ಲದೆ ಸಿದ್ಧವಾಗುತ್ತಿರುವಂತೆ ಕಾಣಿಸುತ್ತಿದೆ. ಇಷ್ಟಕ್ಕೂ ಈ ಪರಿ ತಂತ್ರೋಪಾಯಗಳು ನಡೆಯಲು ಕಾರಣ ಏನಿರಬಹುದು? ಎಂಬ ಪ್ರಶ್ನೆಗೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಉತ್ತರ ಡಿಕೆಶಿ 'ಕುಂಭಸ್ನಾನ'.
ಕಾಂಗ್ರೆಸ್ ಪಕ್ಷದ ನಾಯಕರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ವಿರೋಧಿಸುತ್ತಲೇ ಬಂದಿದ್ದರು. ತಮಗೆ ಸಮಯ ಸಿಕ್ಕಾಗಲೆಲ್ಲ ಟೀಕಿಸುತ್ತಿದ್ದರು. ಅದರಲ್ಲೂ ನಮ್ಮ ಕರ್ನಾಟಕದವರೇ ಆದ ಹಿರಿಯ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುಂಭಮೇಳಕ್ಕೆ ಹೋದರೆ ಬಡತನ ನಿರ್ಮೂಲನೆ ಆಗುತ್ತಾ? ಎಂಬ ಪ್ರಶ್ನೆ ಮಾಡಿದ್ದರು. ಆ ಮೂಲಕ ಕುಂಭಮೇಳಕ್ಕೆ ಯಾರೂ ಹೋಗ ಬೇಡಿ ಎಂಬ ಸಂದೇಶವನ್ನು ದೇಶದ ಜನಕ್ಕೆ ರವಾನಿಸಿದ್ದರು.

ಇವರ ಮಾತಿನ ಬಳಿಕೆ ಕೆಲವು ಕಾಂಗ್ರೆಸ್ ನಾಯಕರು ಕುಂಭಮೇಳದ ಕಡೆಗೆ ಹೋಗುವ ಧೈರ್ಯವನ್ನೇ ಮಾಡಿರಲಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪತ್ನಿ ಸಹಿತ ಪ್ರಯಾಗ್ ರಾಜ್ ಗೆ ತೆರಳಿ ಕುಂಭಸ್ನಾನ ಮಾಡಿ ಬಂದರು. ಅಷ್ಟೇ ಅಲ್ಲದೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೊಗಳಿದ್ದರು. ಆದರೆ ಅದಾಗಲೇ ಕುಂಭಮೇಳದ ಬಗ್ಗೆ ಕಾಂಗ್ರೆಸ್ ನ ಬಹಳಷ್ಟು ನಾಯಕರು ಕೆಟ್ಟದಾಗಿ ಮಾತನಾಡಿದ್ದರು. ಅವರಿಗೆ ಡಿ.ಕೆ.ಶಿವಕುಮಾರ್ ಅವರ ನಡೆ ಮುಖಕ್ಕೆ ಶಾಲುಸುತ್ತಿ ಹೊಡೆದಂತಾಗಿದ್ದು, ಅಷ್ಟೇ ಅಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮಾತಿಗೂ ಮನ್ನಣೆ ನೀಡಿಲ್ಲವಲ್ಲ ಎಂಬ ಅಸಮಾಧಾನ ಕೆಲವು ಕೈನಾಯಕರಲ್ಲಿ ಹೊತ್ತಿ ಉರಿದಿತ್ತು.
ಕೈನಾಯಕರಿಗೆ ಬಿಸಿತುಪ್ಪವಾದ 'ಡಿಕೆಶಿ ಕುಂಭಸ್ನಾನ'
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕುಂಭಸ್ನಾನ ಇಡೀ ದೇಶದಲ್ಲಿ ಚರ್ಚೆಗೆ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ತರಾವರಿಯ ಚರ್ಚೆಗಳಾದವು. ಡಿಕೆಶಿ ಅವರ ಕುಂಭಸ್ನಾನದ ವೀಡಿಯೋಗಳನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟ್ಯಾಗ್ ಮಾಡಿ ಕಾಮೆಂಟ್ ಗಳ ಮಳೆಸುರಿಸಲಾರಂಭಿಸಿದರು. ಕುಂಭಮೇಳವನ್ನು ವಿರೋಧಿಸುತ್ತಾ ಬಂದಿದ್ದ ಕೈನಾಯಕರಿಗೆ 'ಡಿಕೆಶಿ ಕುಂಭಸ್ನಾನ' ನುಂಗಲೂ ಆಗದ, ಉಗಿಯಲೂ ಆಗದ ಬಿಸಿ ತುಪ್ಪದಂತೆ ಭಾಸವಾಗಲಾರಂಭಿಸಿತು. ಆದರೆ ಯಾರಿಗೂ ಬಹಿರಂಗವಾಗಿ ಟೀಕಿಸುವ ಧೈರ್ಯವಿಲ್ಲದೆ ಒಳಗೊಳಗೆ ಉರಿದು ಹೋದರು. ಅದರ ಪರಿಣಾಮಗಳೇ ಇವತ್ತಿನ ಬೆಳವಣಿಗೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಇಲ್ಲಿ ಈ ವಿಚಾರದಲ್ಲಿ ವಿಶ್ಲೇಷಣೆಗಳು ಏನೇ ಇರಲಿ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಅದು ನಿಜ ಎನಿಸುವುದು ಸಹಜವೇ.. ಇಲ್ಲಿ ತನಕ ಮೌನವಾಗಿದ್ದ ಸಿದ್ದರಾಮಯ್ಯ ಅವರ ಬಣದ ಸಚಿವರು ಮತ್ತು ಶಾಸಕರು ತುಂಬಾ ಚಟುವಟಿಕೆಯಿಂದ ಓಡಾಡಲಾರಂಭಿಸಿದ್ದಾರೆ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ತರುತ್ತಿದ್ದಾರೆ. ಇಷ್ಟೇ ಅಲ್ಲದೆ, ರಾಜಕೀಯದಿಂದ ದೂರ ಉಳಿಯುತ್ತೇನೆ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಸಕ್ರೀಯ ರಾಜಕಾರಣದಲ್ಲಿ ಮುಂದುವರೆಯುವ ಇಂಗಿತ ಹೊರ ಹಾಕಿದ್ದಾರೆ.
ಡಿಕೆಶಿ ವರ್ಚಸ್ಸು ಕುಗ್ಗಿಸಲು ತಂತ್ರೋಪಾಯ
ಇನ್ನೊಂದೆಡೆ ಬೆಂಬಲಿತ ಸಚಿವರು ಅದರಲ್ಲೂ ಗೃಹಸಚಿವ ಡಾ.ಜಿ.ಪರಮೇಶ್ವರ್, ಸಚಿವ ಹೆಚ್.ಸಿ.ಮಹದೇವಪ್ಪ ಸೇರಿದಂತೆ ಹಲವರು ಸಿದ್ದರಾಮಯ್ಯ ಅವರೇ ಪೂರ್ಣಾವಧಿಯ ಸಿಎಂ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆ ಮೂಲಕ ಮುಂದಿನ ಸಿಎಂ ಎಂದು ಹೋದಲ್ಲಿ ಬಂದಲ್ಲಿ ಜೈಕಾರ ಕೂಗುತ್ತಿದ್ದ ಡಿ.ಕೆ.ಶಿವಕುಮಾರ್ ಬೆಂಬಲಿಗರಿಗೆ ತಿರುಗೇಟು ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನದ ವಿಚಾರವಾಗಲೀ, ಕೆಪಿಸಿಸಿ ಅಧ್ಯಕ್ಷ ವಿಚಾರದಲ್ಲಿ ಆಗಲೀ ಯಾವುದೇ ರೀತಿಯ ಹೇಳಿಕೆಗಳನ್ನು ನೀಡದೆ ತುಂಬಾ ಎಚ್ಚರಿಕೆಯ ಮಾತುಗಳನ್ನಾಡುತ್ತಿದ್ದಾರೆ. ಬಹುತೇಕ ವಿಚಾರಗಳಲ್ಲಿ ಮೌನತಾಳುತ್ತಿದ್ದಾರೆ. ಎಲ್ಲವನ್ನು ಹೈಕಮಾಂಡ್ ಕಡೆಗೆ ತೋರಿಸಿ ತಮ್ಮ ಪಾಡಿಗೆ ತಾವಿದ್ದಾರೆ.

ಕಾಂಗ್ರೆಸ್ ನಲ್ಲಿ ಪ್ರಮುಖ ನಾಯಕರಾದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಎರಡು ಬಣ ಪ್ರಬಲವಾಗಿದೆ. ಕಾಂಗ್ರೆಸ್ ನಾಯಕರು ನಮ್ಮಲ್ಲಿ ಯಾವುದೇ ಬಣ ಇಲ್ಲ ಎಂದರೂ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಬಣಗಳು ಸಕ್ರಿಯವಾಗಿವೆ ಎನ್ನುವುದನ್ನು ತೋರಿಸುತ್ತಿದೆ. ಡಿ.ಕೆ.ಶಿವಕುಮಾರ್ ರಾಜ್ಯ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿಯೂ ನಾಯಕನಾಗಿ ಮಿಂಚುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಅದರಲ್ಲೂ ಕುಂಭಸ್ನಾನದ ಬಳಿಕ ಇನ್ನಷ್ಟು ಖ್ಯಾತಿಯನ್ನು ಇಮ್ಮಡಿಸಿದ್ದಾರೆ. ಹೀಗಾಗಿ ಅವರ ವರ್ಚಸ್ಸನ್ನು ಕುಗ್ಗಿಸಲು ಅವರ ಪಕ್ಷದಲ್ಲಿಯೇ ಚಿತಾವಣೆಗಳು ನಡೆಯುತ್ತಿವೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಸೋನಿಯಾಗಾಂಧಿಯನ್ನು ನಂಬಿರುವ ಡಿಕೆಶಿ
ಈಗಾಗಲೇ ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವಂತೆ ಮುಖ್ಯಮಂತ್ರಿ ಸ್ಥಾನದ ಹಸ್ತಾಂತರದ ಒಪ್ಪಂದವೇನಾದರೂ ಆಗಿದೆ ಎನ್ನುವುದಾದರೆ, ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರ ಮಾಡಲೇ ಬೇಕಾಗುತ್ತದೆ. ಆದರೆ ಅದಕ್ಕೆ ಇನ್ನು ಕೆಲವು ತಿಂಗಳು ಬಾಕಿಯಿದೆ. ನವೆಂಬರ್ ತನಕವೂ ಡಿ.ಕೆ.ಶಿವಕುಮಾರ್ ಕಾಯುವುದು ಅನಿವಾರ್ಯವಾಗಿದೆ. ಹೀಗಾಗಿ ಈ ವಿಚಾರದಲ್ಲಿ ಹೇಳಿಕೆ ನೀಡದೆ ಮೌನವಹಿಸಿದ್ದಾರೆ. ಇನ್ನು ಆರಂಭದಿಂದಲೂ ಡಿ.ಕೆ.ಶಿವಕುಮಾರ್ ಅವರಿಗೆ ಸೋನಿಯಾ ಗಾಂಧಿ ಅವರ ಮೇಲೆ ಅಪಾರವಾದ ವಿಶ್ವಾಸ, ನಂಬಿಕೆಯಿದೆ. ಇವತ್ತಿಗೂ ತಮ್ಮ ಕಷ್ಟಕಾಲದಲ್ಲಿ ಧೈರ್ಯ, ಸ್ಥೈರ್ಯ ತುಂಬಿದ್ದೇ ಸೋನಿಯಾಗಾಂಧಿ ಎಂಬುದನ್ನು ಹಲವು ಬಾರಿ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ವಿರೋಧಿ ಬಣಗಳು ಏನೇ ಸರ್ಕಸ್ ಮಾಡಿದರೂ ಅಂತಿಮವಾಗಿ ನಿರ್ಧಾರ ಕೈಗೊಳ್ಳಬೇಕಾದವರು ಸೋನಿಯಾಗಾಂಧಿ ಹೀಗಾಗಿ ಎಲ್ಲವನ್ನು ನೋಡುತ್ತಲೇ ಅವರು ತಾವೇನು ಮಾಡಬೇಕೋ? ಅದನ್ನು ಮಾಡುತ್ತಾ ಹೋಗುತ್ತಿದ್ದಾರೆ. ಇಲ್ಲಿ ತನಕ ರಾಜ್ಯದಿಂದ ದೆಹಲಿ ಹೈಕಮಾಂಡ್ ಭೇಟಿಗೆ ತೆರಳಿದ ಸತೀಶ್ ಜಾರಕಿಹೊಳಿಯಾಗಲೀ, ಕೆ.ಎನ್.ರಾಜಣ್ಣ ಆಗಲೀ ಕೇವಲ ಮಲ್ಲಿಕಾರ್ಜುನ ಖರ್ಗೆಯನ್ನಷ್ಟೇ ಭೇಟಿ ಮಾಡಿ ಬಂದಿದ್ದಾರೆ. ಅದರಾಚೆಗೆ ಅವರು ಯಾರೂ ಕೂಡ ರಾಹುಲ್ ಗಾಂಧಿ, ಸೋನಿಯಾಗಾಂಧಿಯನ್ನು ಭೇಟಿ ಮಾಡಿಲ್ಲ. ಆದ್ದರಿಂದ ಎಲ್ಲವನ್ನು ಗಮನಿಸುತ್ತಿರುವ ಡಿಕೆಶಿ ಮುಂದೇನು ಮಾಡ್ತಾರೆ? ಎನ್ನುವುದನ್ನು ಕಾದು ನೋಡೋಣ.












Click it and Unblock the Notifications