CP Yogeshwara: ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಸಿಪಿ ಯೋಗೇಶ್ವರ್: ಚನ್ನಪಟ್ಟಣಕ್ಕೆ ಇವರೇ ಅಭ್ಯರ್ಥಿ
ಬೆಂಗಳೂರು, ಅಕ್ಟೋಬರ್ 23: ಚನ್ನಪಟ್ಟಣ ಕ್ಷೇತ್ರದ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದ ಸಿ ಪಿ ಯೋಗೇಶ್ವರ್ ಅವರು ಬಿಜೆಪಿ ಹೈಕಮಾಂಡ್ ನಾಯಕರ ಮಾತಿಗೆ ಮನ್ನಣೆ ಕೊಡದೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ವಾಟ್ಸಪ್ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ವಿಜಯೇಂದ್ರ ಅವರಿಗೆ ರಾಜೀನಾಮೆ ನೀಡಿರುವ ಸಿ. ಪಿ. ಯೋಗೇಶ್ವರ ಅವರು, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಭೇಟಿ ಮಾಡಿದ ನಂತರ ಕೆಪಿಸಿಸಿ ಕಛೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಪಿ ಯೋಗೇಶ್ವರ್ ಅವರಿಗೆ ಡಿ.ಕೆ ಶಿವಕುಮಾರ್ ಪಕ್ಷದ ಭಾವುಟ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.

ಚನ್ನಪಟ್ಟಣ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಯೆ ಎಲ್ಲಾ ಪಕ್ಷಗಳಿಗೂ ಕಗ್ಗಂಟಾಗಿ ಪರಿಣಮಿಸಿತ್ತು.ಇದೀಗ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ ಎನ್ನಲಾಗಿದ್ದು, ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ ಪಿ ಯೋಗೇಶ್ವರ್ ಅವರು ಗುರುವಾರ ನಾಮಪತ್ರ ಸಲ್ಲಿಕೆ ಮಾಡಲು ತಯಾರಿಯನ್ನು ಸಹ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾತನಾಡಿ, ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸಿಪಿ ಯೋಗೇಶ್ವರ್ ಮರಳಿ ಗೂಡಿಗೆ ಬಂದಿದ್ದಾರೆ. ಹಿಂದೆ ಕೆಲವರು ಬಿಜೆಪಿಗೆ ಹೋಗಿದ್ದರು ಈಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಅವರು ತಿಳಿಸಿದರು. ನಾನು ವಯನಾಡು ಕ್ಷೇತ್ರಕ್ಕೆ ಹೋಗಬೇಕಾಗಿತ್ತು. ಪ್ರಿಯಾಂಕ ಗಾಂಧಿ ಅವರು ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಬೇಕಾಗಿತ್ತು.ಆದರೆ ಅನಿವಾರ್ಯ ಕಾರಣಗಳಿಂದ ಹೋಗಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ತೆರಳಿದ್ದಾರೆ ಎಂದು ತಿಳಿಸಿದರು.
ನಮ್ಮ ರಾಮನಗರ ಜಿಲ್ಲೆಯ ಪ್ರಮುಖ ಮುಖಂಡರಲ್ಲಿ ಒಬ್ಬರಾದ ಯೋಗೇಶ್ವರ್ ಅವರು ಷರತ್ತು ಇಲ್ಲದೆ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ನಮ್ಮ ಪಕ್ಷದ ಮುಖಂಡರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ, ಈಗಾಗಲೇ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ. ಯೋಗೇಶ್ವರ್ ರಾಜಕಾರಣ ಆರಂಭಿಸಿದ್ದೆ ಕಾಂಗ್ರೆಸ್ ನಿಂದ, ಹೀಗಾಗಿ ಮರಳಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ನಾಳೆ ಬೆಳಗ್ಗೆ ಚನ್ನಪಟ್ಟಣ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ಸಿ.ಪಿ.ಯೋಗೇಶ್ವರ್ ಅವರಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಈ ಕಾರಣಕ್ಕೆ ಯಾವುದೇ ಷರತ್ತುಗಳನ್ನು ವಿಧಿಸದೆ ಮತ್ತೊಮ್ಮೆ ಮರಳಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ಅವರ ರಾಜಕಾರಣ ಪ್ರಾರಂಭವಾಗಿತ್ತು. ಮತ್ತೊಮ್ಮೆ ಇದೇ ಪಕ್ಷದಿಂದಲೇ ರಾಜಕಾರಣ ಪ್ರಾರಂಭ ಮಾಡಬೇಕು ಎಂದು ಸಿ.ಪಿ.ಯೋಗೇಶ್ವರ್ ಅವರು ಬುಧವಾರ (ಇಂದು) ಬೆಳಿಗ್ಗೆ ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದರು. ಇಷ್ಟು ದಿನ ಎನ್ ಡಿಎಯಲ್ಲಿದ್ದೂ, ಮತ್ತೆ ಕಾಂಗ್ರೆಸ್ಸಿಗನಾಗಿ ಮುಂದುವರೆಯಬೇಕು ಎಂದು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಯೋಗೇಶ್ವರ್ ಅವರ ಪಕ್ಷ ಸೇರ್ಪಡೆ ವಿಚಾರವನ್ನು ಮುಖ್ಯಮಂತ್ರಿಗಳ ಬಳಿ ದೂರವಾಣಿಯಲ್ಲಿ ಚರ್ಚೆ ಮಾಡಿದೆ. ನಂತರ ಪಕ್ಷದ ಎಲ್ಲ ಮುಖಂಡರ ಬಳಿ ಸಮಾಲೋಚನೆ ನಡೆಸಿದೆ. ನಮ್ಮ ಬಳಿ ಹೆಚ್ಚು ಸಮಯವಿಲ್ಲದೇ ಇರುವ ಕಾರಣಕ್ಕೆ ಬುಧವಾರ (ಇಂದು) ಬೆಳಿಗ್ಗೆಯೇ ಮುಖ್ಯಮಂತ್ರಿಗಳ ನಿವಾಸದಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸಿದೆ. ಇವರ ಪಕ್ಷ ಸೇರ್ಪಡೆ ಬಗ್ಗೆ ವರಿಷ್ಠರ ಗಮನಕ್ಕೆ ತಂದು ಎಲ್ಲರ ಒಪ್ಪಿಗೆ ಮೇರೆಗೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೀಡಲಾಗಿದೆ ಎಂದು ಹೇಳಿದರು.












Click it and Unblock the Notifications