Covid scam report ಸಚಿವ ಸಂಪುಟ ಸಭೆಯಲ್ಲಿ ಶೀಘ್ರ ನಿರ್ಧಾರ: ಸಿ.ಎಂ
ರಾಜ್ಯದಲ್ಲಿ ಮುಡಾ ಹಗರಣದ ಕಾರ್ಮೋಡ್ ಸರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಕೋವಿಡ್ ಕಾಲದ ಕೋವಿಡ್ ಹಗರಣಗಳ ತನಿಖಗೆ ಮುಂದಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಕೋವಿಡ್ ಹಗರಣದ ತನಿಖಾ ವರದಿಯನ್ನು ಇಷ್ಟರಲ್ಲೇ ಸಚಿವ ಸಂಪುಟ ಸಭೆಯ ಮುಂದೆ ಇಡ್ತೀವಿ ಅಂತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಈಗಾಗಲೇ ಕೋವಿಡ್ ಹಗರಣದ ತನಿಖೆಯ ಬಿಸಿ ಕೆಲವು ಬಿಜೆಪಿ ನಾಯಕರಿಗೆ ಮುಟ್ಟಿದೆ.
ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಕರ್ನಾಟಕದಲ್ಲಿ ಕೋವಿಡ್ ಅವಧಿಯಲ್ಲಿ ನಡೆದಿರುವ ಹಗರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಮೂರ್ತಿಗಳಾದ ಡಿ. ಕುನ್ಹಾ ಆಯೋಗದಿಂದ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಮಧ್ಯಂತರ ವರದಿ ಕೈ ಸೇರಿದ ಬೆನ್ನಲ್ಲೇ ಕ್ರಮ ತೆಗೆದುಕೊಳ್ಳುವ ಮಾತನಾಡುತ್ತಿದೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಕೋವಿಡ್ ಹಗರಣದ ವರದಿ ಬಗ್ಗೆ ಚರ್ಚೆ ಮಾಡ್ತೀವಿ. ಇದಾದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ವರದಿಯನ್ನು ಸಚಿವ ಸಂಪುಟದ ಮುಂದೆ ಇರಿಸಿ, ಚರ್ಚೆಯೆಲ್ಲ ನಡೆದ ನಂತರ ಕ್ರಮದ ಬಗ್ಗೆ ಒಂದು ತೀರ್ಮಾನಕ್ಕೆ ಬರ್ತೀವಿ ಎಂದು ಹೇಳಿದ್ದಾರೆ.

ನಾನೇ ನೋಡಿಲ್ಲರೀ ಅವ್ರಿಗೆ ಯಾರು ಕೊಟ್ರು!
ಕೋವಿಡ್ ಹಗರಣದ ಮಧ್ಯಂತರ ವರದಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗಷ್ಟೇ ತಲುಪಿದೆ. ಆ ವರದಿಯಲ್ಲಿ ಏನಿದೆ, ವರದಿಯ ಸಾರಾಂಶ ಏನು ಎನ್ನುವುದನ್ನು ನಾನೇ ಇನ್ನೂ ನೋಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಆ ವರದಿಯಲ್ಲಿ ಏನಿದೆ ಅಂತ ನಾನೇ ಇಲ್ಲಿಯವರೆಗೇ ನೋಡಿಲ್ಲ. ಅದನ್ನು ವಿರೋಧ ಪಕ್ಷದವರಿಗೆ ಕೊಟ್ಟೂ ಇಲ್ಲ. ವರದಿಯನ್ನೇ ನೋಡದೆ ವರದಿಯಲ್ಲಿ ಏನಿದೆ ಎಂದು ಹೇಳಲು ಹೇಗೆ ಸಾಧ್ಯ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ ಅನ್ನುವ ಹಾಗೆ ಆಗಿದೆ.
ಸುಧಾಕರ್‌ಗೆ ಮಾನಸಿಕ ಭಾವನೆ
ಸಂಸದ ಡಾ. ಸುಧಾಕರ್‌ಗೆ ತಾವು ತಪ್ಪು ಮಾಡಿದ್ದೇನೆ ಎಂದು ಅನಿಸಿರಬೇಕು. ಮಾನಸಿಕವಾಗಿ ಆ ಭಾವನೆ ಅವರಲ್ಲಿ ಮೂಡಿರಬೇಕು ಇದೇ ಕಾರಣಕ್ಕೆ ಅವರು ವರದಿ ಬಂದ ಬೆನ್ನಲ್ಲೇ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ವರದಿ ಬಹಿರಂಗವಾಗುವ ಮುನ್ನವೇ ಟೀಕಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಸುಧಾಕರ್ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮುಂದಿನ ಕ್ರಮ ತೆಗೆದುಕೊಳ್ಳವ ಸಾಧ್ಯತೆ
ರಾಜ್ಯ ಕಾಂಗ್ರೆಸ್ ಸರ್ಕಾರವು ಕೋವಿಡ್ ಕಾಲದಲ್ಲಿ ನಡೆದಿದೆ ಎನ್ನುವ ಹಗರಣಗಳ ವರದಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರವು ತೀವ್ರ ಮುಜುಗರ ಅನುಭವಿಸುತ್ತಿದೆ. ಈ ಸಂದರ್ಭದಲ್ಲಿ ಅದರಿಂದ ಆಗುತ್ತಿರುವ ರಾಜಕೀಯ ಡ್ಯಾಮೇಜ್ ಅನ್ನು ಕಂಟ್ರೋಲ್ ಮಾಡಿಕೊಳ್ಳಲು ರಾಜ್ಯ ಸರ್ಕಾರ ಕೋವಿಡ್ ವರದಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications