ಕೊರೊನಾ ರಹಿತ ಚಿಕಿತ್ಸೆಗಳನ್ನು ಆರಂಭಿಸಿದ ಆಸ್ಪತ್ರೆಗಳು
ಬೆಂಗಳೂರು, ಜುಲೈ 02; ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ಹಾಸಿಗೆಗಳ ಬೇಡಿಕೆ ಸಹ ಇಳಿಕೆಯಾಗಿದೆ. ಬೆಂಗಳೂರಿನಲ್ಲಿಯೇ ನೂರಾರು ಬೆಡ್‌ಗಳು ಖಾಲಿ ಇವೆ.
ಗುರುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ 3203 ಹೊಸ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 676 ಪ್ರಕರಣ ಪತ್ತೆಯಾಗಿದೆ. ಕೋವಿಡ್ ಸೋಂಕಿತರಿಗಾಗಿ ಮೀಸಲಿಟ್ಟ ಬೆಡ್‌ಗಳು ಹಾಗೇ ಉಳಿದಿವೆ.
ಬೆಂಗಳೂರು ಮೆಡಿಕಲ್ ಕಾಲೇಜಿನ ಎರಡು ಆಸ್ಪತ್ರೆಗಳಲ್ಲಿ ಸೇರಿ ಒಟ್ಟು 700 ಬೆಡ್ ಕೋವಿಡ್ ಸೋಂಕಿತರಿಗಾಗಿ ಇದ್ದು, ಇವುಗಳಲ್ಲಿ 87 ಬೆಡ್ ಮಾತ್ರ ಭರ್ತಿಯಾಗಿದೆ. ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ಮೂವರು ಕೋವಿಡ್ ಸೋಂಕಿತರು ಮಾತ್ರ ಇದ್ದಾರೆ.

ಬೆಡ್‌ಗಳು ಖಾಲಿ ಇರುವ ಕಾರಣ ಕೋವಿಡ್ ರಹಿತ ಚಿಕಿತ್ಸೆಗಳನ್ನು ಪುನಃ ಆರಂಭಿಸಲು ಆಸ್ಪತ್ರೆಗಳು ಮುಂದಾಗಿವೆ. ಕೋವಿಡ್ ಸೋಂಕಿತರಿಗೆ ಬೆಡ್ ಮೀಸಲಿಟ್ಟ ಕಾರಣ ಕೋವಿಡ್ ರಹಿತ ಚಿಕಿತ್ಸೆಗಳನ್ನು ಆಸ್ಪತ್ರೆಗಳು ಸ್ಥಗಿತಗೊಳಿಸಿದ್ದವು.
ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಸಹ ತರಗತಿಗಳಿಗೆ ಹಾಜರಾಗದೇ ಕೋವಿಡ್ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದರು. ಈಗ ವಿದ್ಯಾರ್ಥಿಗಳನ್ನು ವಾಪಸ್ ತರಗತಿಗೆ ಕಳಿಸಲು ಆಸ್ಪತ್ರೆಗಳು ಮುಂದಾಗಿವೆ.
ಕೆಲವು ಆಸ್ಪತ್ರೆಗಳು ಜುಲೈ 1ರಿಂದಲೇ ಕೋವಿಡ್ ರಹಿತರಿಗೆ ಚಿಕಿತ್ಸೆ ನೀಡುವುದನ್ನು ಆರಂಭಿಸಿವೆ. ಇದರಿಂದಾಗಿ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಸುಲಭವಾಗಿ ಬೆಡ್ ಸಿಗಲಿದೆ. ಇಷ್ಟು ದಿನ ಕೋವಿಡ್ ರಹಿತ ರೋಗಿಗಳು ಬೆಡ್ ಪಡೆಯಲು ಪರದಾಡಬೇಕಾಗಿತ್ತು.
ಏಪ್ರಿಲ್ ತಿಂಗಳಿನಲ್ಲಿ ಆರಂಭವಾದ ಕೋವಿಡ್ 2ನೇ ಅಲೆ ಹಲವಾರು ಜನರ ಸಾವಿಗೆ ಕಾರಣವಾಗಿತ್ತು. ಕೋವಿಡ್ ಸೋಂಕು ಹೊಂದಿರುವವರು ಸಹ ಬೆಡ್ ಪಡೆಯಲು ಹರಸಾಹಸ ಪಡಬೇಕಾಗಿತ್ತು. ಈಗ 2ನೇ ಅಲೆ ಪ್ರಭಾವ ಕಡಿಮೆಯಾಗಿದೆ.
ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷಕ್ಕೂ ಕಡಿಮೆಯಾಗಿದೆ. ಗುರುವಾರದ ಮಾಹಿತಿಯಂತೆ 65312 ಸಕ್ರಿಯ ಪ್ರಕರಣ ರಾಜ್ಯದಲ್ಲಿದ್ದು, ಬೆಂಗಳೂರು ನಗರದಲ್ಲಿಯೇ 33516 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications