ಯಾವ ವಯಸ್ಸಿನವರಿಗೆ ಅತಿಹೆಚ್ಚು ಅಂಟುತ್ತೆ ಕೊರೊನಾವೈರಸ್?
ಬೆಂಗಳೂರು, ಆಗಸ್ಟ್.27: ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಪ್ರತಿನಿತ್ಯ 8000 ಗಡಿ ದಾಟುತ್ತಿದೆ. ಕರ್ನಾಟಕದಲ್ಲಿ ಒಟ್ಟು ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಂತೂ 3 ಲಕ್ಷವನ್ನೂ ಮೀರಿ ಹೋಗಿದೆ.
Recommended Video
ಕೊರೊನಾವೈರಸ್ ಅಟ್ಟಹಾಸದ ನಡುವೆ ಮಹಾಮಾರಿಯು ಯಾವ ವಯಸ್ಸಿನವರಿಗೆ ಹೆಚ್ಚು ಅಪಾಯಕಾರಿ ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಕೊರೊನಾವೈರಸ್ ವಾರ್ ರೂಮ್ ನೀಡಿರುವ ಅಂಕಿ-ಅಂಶಗಳು ಆತಂಕಕಾರಿ ಅಂಶವನ್ನು ಬಿಚ್ಚಿಟ್ಟಿದೆ.
10 ವರ್ಷದೊಳಗಿನ ಮಕ್ಕಳು, 11 ರಿಂದ 20 ವರ್ಷ, 21 ರಿಂದ 30 ವರ್ಷ, 31 ರಿಂದ 40 ವರ್ಷ, 41 ರಿಂದ 50 ವರ್ಷ, 51 ರಿಂದ 60 ವರ್ಷ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಎಷ್ಟು ಪ್ರಮಾಣದಲ್ಲಿ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ ಎನ್ನುವುದನ್ನು ಸಮೀಕ್ಷೆ ತೆರೆದಿಟ್ಟಿದೆ.

20- 40 ವರ್ಷದವರಿಗೆ ಕೊರೊನಾವೈರಸ್ ಅಪಾಯ
ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು ಕೊರೊನಾವೈರಸ್ ಸೋಂಕಿತರ ಪ್ರಕರಣಗಳ ಪೈಕಿ ಅತಿಹೆಚ್ಚು ಸೋಂಕಿತರು ಮಧ್ಯ ವಯಸ್ಸಿನವರೇ ಆಗಿದ್ದಾರೆ. 21 ವರ್ಷದಿಂದ 30 ಮತ್ತು 31 ವರ್ಷದಿಂದ 40 ವರ್ಷದ ಮಧ್ಯ ವಯಸ್ಕರಲ್ಲಿ ಅತಿಹೆಚ್ಚು ಸೋಂಕು ಕಾಣಿಸಿಕೊಂಡಿರುವುದು ಸಮೀಕ್ಷೆಯಲ್ಲಿ ಸಾಬೀತಾಗಿದೆ. ಪೋಷಕರ ಜಾಗೃತಿ ಮತ್ತು ಮುನ್ನೆಚ್ಚರಿಕೆ ಹಿನ್ನೆಲೆ 10 ವರ್ಷಕ್ಕಿಂತ ಪುಟ್ಟ ಮಕ್ಕಳಲ್ಲಿ ಕೊವಿಡ್-19 ಸೋಂಕು ತಗುಲಿರುವ ಪ್ರಮಾಣವು ಕಡಿಮೆಯಾಗಿದೆ ಎಂದು ಸಮೀಕ್ಷೆಯು ಉಲ್ಲೇಖಿಸಿದೆ.

ಯಾವ ವಯಸ್ಸಿನ ಎಷ್ಟು ಮಂದಿಗೆ ಕೊವಿಡ್-19
ಕೊರೊನಾವೈರಸ್ ಸೋಂಕಿನ ಅಪಾಯ ಯಾವ ವಯಸ್ಸಿನವರಿಗೆ ಅದೆಷ್ಟು ಪ್ರಮಾಣದಲ್ಲಿದೆ ಎನ್ನುವುದನ್ನು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಿದೆ. ಈ ಕುರಿತು ಒಂದು ಪಟ್ಟಿ ಇಲ್ಲಿದೆ ನೋಡಿ:
| ವಯಸ್ಸು | ಕೊವಿಡ್-19 ಪ್ರಕರಣಗಳ ಸಂಖ್ಯೆ |
| 00-10 | 11,513 |
| 11-20 | 22,225 |
| 21-30 | 65,900 |
| 31-40 | 64,036 |
| 41-50 | 50,348 |
| 51-60 | 41,361 |
| 60 ವರ್ಷ ಮೇಲ್ಪಟ್ಟವರು | 36,431 |

ರಾಜ್ಯದಲ್ಲಿ ಕೊರೊನಾವೈರಸ್ ಅಂಕಿ-ಅಂಶಗಳು
ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 8580 ಜನರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 3,00,406ಕ್ಕೆ ಏರಿಕೆಯಾಗಿತ್ತು. ಒಂದೇ ದಿನ ಕೊವಿಡ್-19 ಸೋಂಕಿಗೆ 133 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆಯು 5091ಕ್ಕೆ ಏರಿಕೆಯಾಗಿತ್ತು. ಬುಧವಾರ ರಾಜ್ಯದಲ್ಲಿ 7249 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೂ 211688 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಒಂದೇ ದಿನ ರಾಜ್ಯದಲ್ಲಿ ಎಷ್ಟು ಜನರ ತಪಾಸಣೆ?
ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 25886 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 41180 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 67066 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 25,80,621 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ಕರ್ನಾಟಕದ ಯಾವ ಜಿಲ್ಲೆಯಲ್ಲೆಷ್ಟು ಪ್ರಕರಣ ಪತ್ತೆ?
ರಾಜ್ಯದಲ್ಲಿ ಒಟ್ಟು 8580 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 30 ಜಿಲ್ಲೆಗಳಲ್ಲೂ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಬಾಗಲಕೋಟೆ 154, ಬಳ್ಳಾರಿ 510, ಬೆಳಗಾವಿ 289, ಬೆಂಗಳೂರು ಗ್ರಾಮಾಂತರ 136, ಬೆಂಗಳೂರು 3284, ಬೀದರ್ 42, ಚಾಮರಾಜನಗರ 51, ಚಿಕ್ಕಬಳ್ಳಾಪುರ 87, ಚಿಕ್ಕಮಗಳೂರು 97, ಚಿತ್ರದುರ್ಗ 78, ದಕ್ಷಿಣ ಕನ್ನಡ 314, ದಾವಣಗೆರೆ 233, ಧಾರವಾಡ 255, ಗದಗ 124, ಹಾಸನ 154, ಹಾವೇರಿ 164, ಕಲಬುರಗಿ 180, ಕೊಡಗು 26, ಕೋಲಾರ 88, ಕೊಪ್ಪಳ 158, ಮಂಡ್ಯ 155, ಮೈಸೂರು 951, ರಾಯಚೂರು 136, ರಾಮನಗರ 47, ಶಿವಮೊಗ್ಗ 166, ತುಮಕೂರು 88, ಉಡುಪಿ 251, ಉತ್ತರ ಕನ್ನಡ 129, ವಿಜಯಪುರ 131, ಯಾದಗಿರಿ 102 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications