ಕಾಪಿ ರೈಟ್ ಉಲ್ಲಂಘನೆ; ಸಂಕಷ್ಟದಲ್ಲಿ ಓಲಾ ನಿರ್ದೇಶಕರು
ಬೆಂಗಳೂರು, ಫೆಬ್ರವರಿ 02; ಕಾಪಿರೈಟ್ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ಓಲಾ ಕಂಪನಿ ನಿರ್ದೇಶಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಮ್ಮ ವಿರುದ್ಧ ಲಹರಿ ಆಡಿಯೋ ಸಂಸ್ಥೆ ಹೂಡಿದ್ದ ಪ್ರಕರಣದಲ್ಲಿ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಇದರಿಂದಾಗಿ ಎನ್‌ಎಐ ಖಾಸಗಿ ಕಂಪನಿ (ಓಲಾ ಕ್ಯಾಬ್ ಎಂದೇ ಹೆಸರುವಾಸಿ)ಯ ನಿರ್ದೇಶಕರಾದ ಭವಿಶ್ ಅಗರವಾಲ್ ಮತ್ತು ಅಂಕಿತ್ ಭಾಟಿ ಮತ್ತಿತರು ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಓಲಾ ಕ್ಯಾಬ್ಗಳಲ್ಲಿ ಸಿನಿಮಾ ಹಾಡುಗಳ ಪ್ರಸಾರ ಸಂಬಂಧ ಲಹರಿ ಆಡಿಯೋ ಸಂಸ್ಥೆ ನೀಡಿದ್ದ ದೂರು ಆಧರಿಸಿ ಕಾಪಿರೈಟ್ ಕಾಯ್ದೆಯಡಿ ದಾಖಲಿಸಿದ್ದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಕಾಯಿ ರೈಟ್ ಕಾಯ್ದೆ ಸೆಕ್ಷನ್ 63ರಡಿ ಸಕ್ಷಮ ನ್ಯಾಯಾಲಯ ತಪ್ಪಿತಸ್ಥರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಹಾಗಾಗಿ ಇದು ಸಿಆರ್‌ಪಿಸಿಯ ಶೆಡ್ಯೂಟ್ 2 ರ ಐಟಂ 2ಕ್ಕೆ ಒಳಪಡುತ್ತದೆ. ಆದ್ದರಿಂದ ಪೊಲೀಸರು ದೂರು ಆಧರಿಸಿ ಎಫ್‌ಐಅರ್ ದಾಖಲು ಮಾಡಿರುವುದು ಸರಿಯಾಗಿಯೇ ಇದೆ. ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಅದೇ ಕಾಯ್ದೆಯ ಸೆಕ್ಷನ್ 63ರಡಿ ಪೊಲೀಸರಿಗೆ ಶೋಧದ ಕಾರ್ಯ ಮತ್ತು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇದೆ ಎಂದ ಮಾತ್ರಕ್ಕೆ ಸೆಕ್ಷನ್ 63ರಡಿ ಲಭ್ಯವಿರುವ ಕಾಗ್ನಿಜಬಲ್ ಅಫೆನ್ಸ್ ಅಧಿಕಾರ ಕಸಿಯಲಾಗದು ಎಂದು ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಪರ ವಾದಿಸಿದ್ದ ಹಿರಿಯ ನ್ಯಾಯವಾದಿ ಸಿ. ವಿ. ನಾಗೇಶ್, ಕಾಪಿ ರೈಟ್ ಕಾಯಿದೆ ಸೆಕ್ಷನ್ 63ರಡಿ ತನಿಖೆ ನಡೆಸಲು ಪೊಲೀಸರಿಗೆ ಅಧಿಕಾರವಿಲ್ಲವೆಂದು ವಾದಿಸಿದ್ದರು. ಆದರೆ ದೂರುದಾರರ ಪರ ವಾದ ಮಂಡಿಸಿದ ವಕೀಲ ಎಂ. ಎಸ್. ಶ್ಯಾಮ್ ಸುಂದರ್, ಕಾಪಿ ರೈಟ್ ಕಾಯಿದೆ ಸೆಕ್ಷನ್ 63ರಡಿ ಕಾಗ್ನಿಜಬಲ್ ಅಪರಾಧವಾಗಿದ್ದು, ಅದಕ್ಕೆ ಮೂರು ವರ್ಷ ಶಿಕ್ಷೆ ಇದೆ. ಹಾಗಾಗಿ ಪೊಲೀಸರಿಗೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವ ಅಧಿಕಾರವಿದೆ ಎಂದು ತಿಳಿಸಿದ್ದರು.
ಪ್ರಕರಣದ ಹಿನ್ನಲೆ; ಓಲಾ ಕ್ಯಾಬ್‌ಗಳಲ್ಲಿ ಹೊಸದಾಗಿ ಅಳವಡಿಸಿದ್ದ ಟಿವಿ/ ಡಿಸ್‌ಪ್ಲೇ ಸೆಟ್ ಗಳಲ್ಲಿ ಜನಪ್ರಿಯ ಚಿತ್ರಗೀತೆಗಳ ವಿಡಿಯೋ ಮತ್ತು ಆಡಿಯೋ ಪ್ರಸಾರ ಮಾಡಲಾಗಿತ್ತು. ಇದಕ್ಕೆ ಆಕ್ಷೇಪ ಎತ್ತಿದ್ದ ಲಹರಿ ಆಡಿಯೋ ಸಂಸ್ಥೆಯ ಲಹರಿ ವೇಲು ಅವರು, 2017ರ ಮೇ 13ರಂದು ಪೊಲೀಸರಿಗೆ ದೂರು ನೀಡಿದ್ದರು.
ಕಾಪಿ ರೈಟ್ ಕಾಯಿದೆಯ ಉಲ್ಲಂಘನೆಯಾಗಿದ್ದು, ಓಲಾ ಕಂಪನಿ ತಮ್ಮ ಅನುಮತಿ ಪಡೆಯದೆ, ತಮ್ಮ ಕಾಫಿರೈಟ್ ಇಡುವ ಹಾಡುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದರು. ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆಗೆ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಓಲಾ ನಿರ್ದೇಶಕರು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications