Cauvery Water Dispute: ಕಾಂಗ್ರೆಸ್ ಪಕ್ಷ ತಮಿಳುನಾಡಿನ ಏಜೆಂಟ್: ಬಿ ಎಸ್ ಯಡಿಯೂರಪ್ಪ
ಬೆಂಗಳೂರು,ಸೆಪ್ಟೆಂಬರ್ 23: ಕಾಂಗ್ರೆಸ್ ಪಕ್ಷ ತಮಿಳುನಾಡಿನ ಏಜೆಂಟರಂತೆ ವರ್ತಿಸುತ್ತಿದೆ. ಸುಪ್ರೀಂ ಕೋರ್ಟ್ ಹೇಳುವ ಮೊದಲೇ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.
ಈ ಕುರಿತು ಕಾವೇರಿ ನೀರಿನ ವಿಚಾರವೂ ಸೇರಿ ವಿವಿಧ ರಂಗಗಳಲ್ಲಿ ರಾಜ್ಯ ಸರಕಾರದ ವೈಫಲ್ಯವನ್ನು ಖಂಡಿಸಿ ಬಿಜೆಪಿ ವತಿಯಿಂದ ಶನಿವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದೆ ಮೈಸೂರು, ಬೆಂಗಳೂರಿಗೆ ನೀರಿನ ಸಮಸ್ಯೆ ಆಗಲಿದೆ ಎಂದು ಎಚ್ಚರಿಸಿದರು.

ಬೆಂಗಳೂರಿನ ಸುತ್ತಮುತ್ತ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ಸಿಗರಿಗೆ ಅಧಿಕಾರದಲ್ಲಿ ಮುಂದುವರೆಯಲು ಹಕ್ಕಿಲ್ಲ. ಸರಕಾರ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು. ಕಾವೇರಿ ನದಿಯ ಒಂದು ಹನಿ ನೀರು ಬಿಡಕೂಡದು ಎಂದು ಒತ್ತಾಯಿಸಿದರು. ತಮಿಳುನಾಡಿನ ಏಜೆಂಟರಂತೆ ವರ್ತನೆ ಖಂಡನೀಯ ಎಂದು ಅವರು ತಿಳಿಸಿದರು. ಇದೇವೇಳೆ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಲಾಯಿತು.
ಈ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ತಮಿಳುನಾಡು ವ್ಯವಸಾಯಕ್ಕೆ ಅಕ್ರಮವಾಗಿ ನೀರು ಬಳಸುತ್ತಿದೆ. 32 ಟಿಎಂಸಿ ಬದಲಾಗಿ 67 ಟಿಎಂಸಿ ನೀರು ಪಡೆದಿದ್ದಾರೆ. ತಮಿಳುನಾಡಿನ ರೈತರ ಹಿತ ಕಾಪಾಡಲು ಇಲ್ಲಿನ ಸರಕಾರ ಮುಂದಾಗಿದೆ. ಇದು ಅತ್ಯಂತ ಬೇಜವಾಬ್ದಾರಿಯ ಸರಕಾರ ಎಂದು ವಾಗ್ದಾಳಿ ನಡೆಸಿದರು.
ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟು ಆರ್ಥಿಕವಾಗಿ ಮುಖ್ಯ ನಗರ ಬೆಂಗಳೂರಿಗೆ ನೀರಿನ ಸಮಸ್ಯೆ ಆಗಲಿದೆ ಎಂದು ಸುಪ್ರೀಂ ಕೋರ್ಟಿನ ಗಮನಕ್ಕೆ ತರುವಲ್ಲಿ ಸರಕಾರ ವಿಫಲವಾಗಿದೆ. ಬ್ರ್ಯಾಂಡ್ ಬೆಂಗಳೂರಿಗೆ ಕನಿಷ್ಠ ನೀರಿಲ್ಲದ ದುಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.
ಸರಕಾರದಲ್ಲಿ ತಾಳಮೇಳ ಇಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರರು ತಮಿಳುನಾಡಿನ ಹಿತಕ್ಕಾಗಿ ಇಲ್ಲಿನ ಹಿತವನ್ನು ಬಲಿ ಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು. ಕೇಂದ್ರಕ್ಕೆ ಪತ್ರ ಎನ್ನುವ ಮೂಲಕ ರಾಜಕೀಯವಾಗಿ ಇದನ್ನು ಪರಿವರ್ತಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂದರು.
ವಿಚಾರ ಸುಪ್ರೀಂ ಕೋರ್ಟಿನ ಮುಂದಿರುವಾಗ ಕೇಂದ್ರದ ಮಧ್ಯಪ್ರವೇಶ ಮಾಡಲು ಅಸಾಧ್ಯ. ಸೋನಿಯಾ ಗಾಂಧಿಯವರಿಗೆ ಮಧ್ಯಪ್ರವೇಶಕ್ಕೆ ಅವಕಾಶ ಇದೆ. ರಾಜಕೀಯವಾಗಿ ಇದನ್ನು ಬಗೆಹರಿಸಲು ಅವರಿಗೆ ಅವಕಾಶವಿದೆ ಎಂದು ತಿಳಿಸಿದರು. ಬಿಜೆಪಿ ಈ ವಿಚಾರವನ್ನು ಜನಾಂದೋಲನವಾಗಿ ಪರಿವರ್ತಿಸಲಿದೆ ಎಂದು ಅವರು ಎಚ್ಚರಿಸಿದರು. ಪ್ರತಿ ಎಕರೆ ಬೆಳೆ ಹಾನಿಗೆ 25 ಸಾವಿರ ಪರಿಹಾರ ಕೊಡಿ ಎಂದೂ ಅವರು ಆಗ್ರಹಿಸಿದರು.
ಡಿಎಂಕೆ ಸರಕಾರ ಮತ್ತು ಐಎನ್‍ಡಿಐಎ ಒಕ್ಕೂಟವನ್ನು ಮೆಚ್ಚಿಸುವ ಉದ್ದೇಶದಿಂದ ರಾಜ್ಯದ ಕಾಂಗ್ರೆಸ್ ಸರಕಾರವು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಆಕ್ಷೇಪಿಸಿದರು. ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸುವಂತೆ ಅವರು ಆಗ್ರಹಿಸಿದ ಅವರು, ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಲು ಅವರು ಒತ್ತಾಯಿಸಿದರು. ಕಾವೇರಿ ಜಲಾನಯನ ಪ್ರದೇಶದ ಜನರು ನೀರಿಗಾಗಿ ಗುಳೆ ಹೋಗುವ ಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.
ಕರ್ನಾಟಕ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ಕಾಂಗ್ರೆಸ್ ಸರಕಾರವು ಸಂಪೂರ್ಣ ವಿಫಲವಾಗಿದೆ ಎಂದು ಸಂಸದ ಪಿ.ಸಿ.ಮೋಹನ್ ಅವರು ಆಕ್ಷೇಪಿಸಿದರು. ರಾಜ್ಯದ ಜನರನ್ನು ಬಲಿ ಕೊಡಲು ಈ ಸರಕಾರ ವಿಫಲವಾಗಿದೆ. ತಮಿಳುನಾಡಿನಲ್ಲಿ ಉತ್ತಮ ಮಳೆ ಆಗಿದ್ದರೂ, ಇಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಒಂದೆಡೆ ಖಾಲಿ ಕೊಡ ಹಿಡಿಯುವ ಸ್ಥಿತಿ ಇದೆ. ಇನ್ನೊಂದೆಡೆ ಬ್ರ್ಯಾಂಡ್ ಬೆಂಗಳೂರು ಎಂದು ತಿಳಿಸಿದರೆ ಹೇಗೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ಸಿನ ನಡತೆ ಖಂಡನೀಯ ಎಂದು ತಿಳಿಸಿದರು.












Click it and Unblock the Notifications