ಶೀಘ್ರದಲ್ಲೇ ಕೆ.ಸಿ. ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ: ಸಿದ್ದರಾಮಯ್ಯ ಜೊತೆಗಿನ ರಹಸ್ಯ ಸಭೆಯ ಗುಟ್ಟೇನು?
ಬೆಂಗಳೂರು, ಫೆಬ್ರವರಿ 08: ಲೋಕಸಭಾ ಚುಣಾವಣೆಗೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವದ ಗುಸುಗುಸು ಜೋರಾಗಿದೆ. ವಿಧಾನಸಭಾ ಚುಣಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್ ಇದೀಗ ಲೋಕಸಮರಕ್ಕೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ. ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆಯಲ್ಲಿ ಠಕ್ಕರ್ ಕೊಡುವಿ ನಿಟ್ಟಿನಲ್ಲಿ ಕಮಲ-ದಳ ಒಂದಾಗಿದ್ರೆ, ಇತ್ತ ಕಾಂಗ್ರೆಸ್ ಸದ್ದಿಲ್ಲದೇ ಆಪರೇಷನ್ ಹಸ್ತಕ್ಕೆ ಮುಂದಾಗಿದೆ.
ಹೌದು, 2019 ರ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಸದ್ದು ಮಾಡಿರುವ ಕ್ಷೇತ್ರ ಎಂದರೇ ಅದು ಮಂಡ್ಯ ಲೋಕಸಭಾ ಕ್ಷೇತ್ರ. ಇದೀಗ 2024 ರ ಲೋಕಸಭಾ ಕ್ಷೇತ್ರವೂ ಸಹ ತೀವ್ರ ಕುತೂಹಲದ ಕ್ಷೇತ್ರವಾಗಿದೆ. ಏಕೆಂದರೆ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ನಾಯಕರ ತೆಕ್ಕೆಗೆ ಸಿಗಲಿದ್ದು, ಹಾಲಿ ಸಂಸದೆಯಾದ ಸುಮಲತಾ ಅಂಬರೀಶ್ ಅವರಿಗೆ ಈ ಬಾರೀ ಬಿಜೆಪಿ ಟಿಕೆಟ್ ಸಿಗುವುದು ಅನುಮಾನವಾಗಿದೆ.

ಇತ್ತ ಮಂಡ್ಯದಲ್ಲಿ ತಮ್ಮ ಅಸ್ತಿತ್ವವನ್ನ ಇನ್ನಷ್ಟು ಭದ್ರಪಡಿಸಿಕೊಳ್ಳಲು ಮುಂದಾಗಿರುವ ದಳಪತಿಗಳು ಮಂಡ್ಯ ಕ್ಷೇತ್ರವನ್ನ ಬಿಟ್ಟುಕೊಡುವಂತೆ ಬಿಜೆಪಿ ಹೈಕಮಾಂಡ್ ನಾಯಕರಿಗೆ ಬೇಡಿಕೆ ಇಟ್ಟಿದ್ದು, ಅದರಂತೆ ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. ಇತ್ತ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಮಾಜಿ ಸಚಿವರಾದ ಕೆ.ಸಿ. ನಾರಾಯಣಗೌಡ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ವಿರೋಧದ ಹಿಂದೆ ಕೈ ಹಿಡಿಯುವ ತಂತ್ರಗಾರಿಕೆ ಇದೆ ಎಂದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ನಾಯಕ ಹಾಗೂ ಮಾಜಿ ಸಚಿವರಾಗಿರುವ ನಾರಾಯಣ ಗೌಡ ಅವರು ಬಿಜೆಪಿ ತೊರೆಯುತ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸಿದ ಕೆ.ಸಿ. ನಾರಾಯಣಗೌಡ ಅವರು ಮತ್ತೊಮ್ಮೆ ಪಕ್ಷಾಂತರಕ್ಕೆ ರೆಡಿಯಾಗಿದ್ದಾರೆ ಎಂದು ಹೇಳಲಾಗಿದೆ.

ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಮಂಡ್ಯದಲ್ಲಿ ಕಮಲ-ದಳ ನಾಯಕರನ್ನು ಒಮ್ಮತದ ಅಭಿಪ್ರಾಯಗಳು ಮೂಡಿಬಂದಿಲ್ಲ. ಮೈತ್ರಿ ವಿರುದ್ಧ ಸಿಡಿದೆದ್ದಿರುವ ಬಿಜೆಪಿಯ ಕೆಸಿ ನಾರಾಯಣಗೌಡ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಹಸ್ಯವಾಗಿ ಮಾಜಿ ಸಚಿವರಾದ ಕೆ ಸಿ ನಾರಾಯಣಗೌಡ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿಯಾಗಿರುವುದು ಮಾಜಿ ಸಚಿವರಾದ ಕೆ ಸಿ ನಾರಾಯಣ್ ಗೌಡ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದ್ದು, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡದಂತೆ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಆದರೆ, ಮಂಡ್ಯ ಬಿಜೆಪಿ ಕೈ ತಪ್ಪುವುದು ಬಹುತೇಕ ಖಚಿತವಾಗಿರುವುದರಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ರಹಸ್ಯೆ ಸಭೆ ನಡೆಸಿರುವ ಮಾಜಿ ಸಚಿವ ಕೆ ಸಿ ನಾರಾಯಣ್ ಗೌಡ್ರು, ಈ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ. ಆದರೆ, ಮಂಡ್ಯ ಕ್ಷೇತ್ರದ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಎನ್ನಲಾಗಿದ್ದು, ಪಕ್ಷಕ್ಕೆ ಸೇರುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಮೊದಲು ಪಕ್ಷ ಸೇರಿ ನಂತರ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಒದಗಿಸುವುದಾಗಿ ಸಿದ್ದರಾಮಯ್ಯ ಅವರು ನಾರಾಯಣಗೌಡರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ನಾಲಿ, ಲೋಕಸಮರದಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಇತ್ತ ಮಂಡ್ಯ ರಾಜಕಾರಣವೇ ದಳಪತಿಗಳಿಗೆ ದೊಡ್ಡ ತಲೆನೋವಾಗಿದೆ. ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲದರೇ ಹಲವು ಮಂಡ್ಯ ಬಿಜೆಪಿ ನಾಯಕರು ಕಮಲ ಬಿಟ್ಟು ಕೈ ಹಿಡಿಯಲು ರೆಡಿಯಾಗಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications