ನಂಗೆ ಪ್ರತಿಪಕ್ಷಗಳು ಬೈದಿದ್ದಕ್ಕಿಂತ ಸ್ಪೀಕರ್ ಬೈದಿದ್ದೆ ಹೆಚ್ಚು- ಶಾಸಕ ಪ್ರದೀಪ್ ಈಶ್ವರ್
ಬೆಂಗಳೂರು, ಆಗಸ್ಟ್ 13: ಚಿಕ್ಕಬಳ್ಳಾಪರ ಶಾಸಕ ಪ್ರದೀಪ್ ಈಶ್ವರ್ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತಾರೆ. ಅದರಲ್ಲೂ ವಿಧಾನಸಭೆ ಅಧಿವೇಶನದಲ್ಲಿ ಪ್ರದೀಪ್ ಈಶ್ವರ್ ಹಾಗೂ ಸ್ಪೀಕರ್ ಯು.ಟಿ ಖಾದರ್ ಅವರ ನಡುವಿನ ಸಂಭಾಷಣೆ ಹೆಚ್ಚು ಟ್ರೋಲ್ ಆಗುತ್ತಲೇ ಇರುತ್ತದೆ. ಜೊತೆಗೆ ಪ್ರದೀಪ್ ಈಶ್ವರ್ ಅವರ ಮಾತುಗಳು ಕೂಡ ವೈರಲ್ ಆಗುತ್ತದೆ. ಇದೀಗ ಪ್ರದೀಪ್ ಈಶ್ವರ್, ಸ್ಪೀಕರ್ ಯು.ಟಿ ಖಾದರ್ ಅವರ ಬಗ್ಗೆ ಮಾತನಾಡಿರುವ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇತ್ತೀಚಿಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ವಿಪಕ್ಷ ನಾಯಕರು ಬಳಸಿದ ಪದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಪ್ರದೀಪ್ ಈಶ್ವರ್, ಸದನದಲ್ಲಿ ನನಗೆ ಶಾಸಕನಾಗಿ ಮಾತನಾಡುವ ಒಂದು ಸ್ವಾತಂತ್ರ್ಯ ಇದೆ. ಮೊನ್ನೆ ಚರ್ಚೆ ನಡೆಯುವಾಗ ಶಾಸಕರು ಬಹಳಷ್ಟು ಪದಗಳನ್ನು ಬಳಸಿದರು. ವಿರೋಧ ಪಕ್ಷದ ನಾಯಕರು ಕೆಲವು ಪದಗಳನ್ನು ಬಳಸಿದರು. ಆ ಪದಗಳಿಂದ ಬೇಸರವಾಗಿದೆ ಅಂತಾ ನಾನು ಮಾತನಾಡುತ್ತಿಲ್ಲ. ಆದರೆ ಅವರಿಗೆ ಅಂತಹ ಪದಗಳನ್ನು ಹೊಸ ಶಾಸಕರ ವಿರುದ್ಧ ಬಳಸಬಾರದು. ಅಂತಹ ಪದಗಳು ನನಗೆ ಸೂಕ್ತವಲ್ಲ ಎಂದರು.

ಒಬ್ಬ ಹೊಸ ಶಾಸಕ ಸಾವಿರಾರು ಕನಸುಗಳನ್ನು ಇಟ್ಟುಕೊಂಡು ವಿಧಾನಸಭೆಗೆ ಬರುತ್ತಾರೆ. ನಾನು ವಿಧಾನಸಭೆಗೆ ಬಂದಾಗ ಸಂತೋಷ ಪಡಲು ನಮ್ಮ ತಂದೆ-ತಾಯಿ ಇರಲಿಲ್ಲ. ಬಡತನ, ಕಣ್ಣೀರು ಎಲ್ಲವನ್ನೂ ಕಂಡು ವಿಧಾನಸೌಧದವರೆಗೂ ಬಂದಿದ್ದೇವೆ. ನಮ್ಮ ನೋವು. ನಮ್ಮ ಬಡತನ, ನಮ್ಮ ಹಸಿವು ನಮ್ಮ ಅಗ್ರೇಷನ್‌ನಲ್ಲಿ ಕಾಣಿಸುತ್ತದೆ. ನಾವು ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಕಷ್ಟ ಪಟ್ಟು ಬದುಕು ಕಟ್ಟಿಕೊಂಡವನು ಎಂದು ತಮ್ಮ ಕಷ್ಟದ ದಿನಗಳನ್ನು ಸದನದಲ್ಲಿ ನೆನಪಿಸಿಕೊಂಡರು.
ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಆಗಿ ಬಂದೆ. ಕೆಲವು ವಿರೋಧ ಪಕ್ಷದವರು ಬಿಜೆಪಿ ಸದಸ್ಯರು ಕೆಲವು ಪದಗಳನ್ನು ಬಳಸುತ್ತಾರೆ. ಅದು ನನಗೆ ಬಳಸುವುದು ಸೂಕ್ತವಲ್ಲ ಎಂದರು. ಈ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಾವು ಅಂತಹ ಪದಗಳನ್ನು ಬಳಸಿದ್ದರೆ ತಪ್ಪು ತಪ್ಪೇ ಎಂದು ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಯು.ಟಿ ಖಾದರ್ ಪ್ರದೀಪ್ ಈಶ್ವರ್ ಅವರಿಗೆ ಕುಳಿತುಕೊಳ್ಳವಂತೆ ಹೇಳಿದರು. ಈ ಚರ್ಚೆ ವೇಳೆ ಪ್ರದೀಪ್ ಈಶ್ವರ್ ನೀಡಿರುವ ಹೇಳಿಕೆಯೊಂದು ಭಾರೀ ವೈರಲ್ ಆಗುತ್ತಿದೆ. ನನಗೆ ಪ್ರತಿ ಪಕ್ಷದವರು ಬೈದಿದ್ದಕ್ಕಿಂತ ಸ್ಪೀಕರ್ ಅವರು ಬೈದಿದ್ದೇ ಹೆಚ್ಚು ಎಂದರು. ಈ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದೆ.












Click it and Unblock the Notifications