300 ಕೋಟಿ ಫಂಡಿಂಗ್ ಮಾಡಿ ಮಂತ್ರಿ ಪಟ್ಟದ ಷರತ್ತು ಹಾಕಿದ್ರಾ ಕಾಂಗ್ರೆಸ್ ಆ ಶಾಸಕ: ಏನಿದು ಸ್ಟೋಟಕ ಆರೋಪ
ಬೆಂಗಳೂರು, ಅಕ್ಟೋಬರ್ 10: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅಕ್ರಮ ಆನ್ಲೈನ್ ಗೇಮ್ ಕೇಸ್ ಸಂಬಂಧ ಸದ್ಯ ಜೈಲಿನಲ್ಲಿ ವಿಲ ವಿಲ ಅಂತಾ ಒದ್ದಾಡುತ್ತಿದ್ದಾರೆ. ರಾಜ್ಯ ಸಚಿವ ಸಂಪುಟ ಸೇರಿಸಿಕೊಳ್ಳುವಂತೆ ವೀರೇಂದ್ರ ಪಪ್ಪಿ ಷರತ್ತುವೊಂದನ್ನ ಹಾಕಿದ್ರಂತೆ. ಬಿಹಾರ ಚುನಾವಣೆಗೆ 300 ಕೋಟಿ ರೂಪಾಯಿ ಫಂಡ್ ಮಾಡಲು ಸಿದ್ಧವಾಗಿದ್ದರು ಎನ್ನಲಾಗಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಫಂಡಿಂಗ್ ಮಾಡಿ, ತಾನು ಮಂತ್ರಿಯಾಗಲು ಪ್ಲ್ಯಾನ್ ಸಹ ಮಾಡಿಕೊಂಡಿದ್ದರು ಎನ್ನುವ ಸ್ಫೋಟಕ ಅಂಶ ತಿಳಿದುಬಂದಿದೆ.
ಹೌದು, ಈ ಕುರಿತು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರು ಸುಮಾರು 300 ಕೋಟಿ ರೂ. ಬಿಹಾರ ಚುನಾವಣೆಗೆ ಕೊಡಲು ಮುಂದಾಗಿದ್ದರೆಂಬ ಮಾಹಿತಿ ಇದೆ. ಆ ಮೊತ್ತ ಕೊಡುವ ಕಾರಣಕ್ಕೆ ಮಂತ್ರಿ ಮಾಡಬೇಕೆಂದು ಕೇಳಿದ್ದಾಗಿ ಕೆಲವರು ಮಾತನಾಡಿದ್ದು ನನ್ನ ಗಮನಕ್ಕೂ ಬಂದಿದೆ ಎಂದರು. ಇನ್ನೂ ಇ.ಡಿ. ದಾಳಿ ವೇಳೆ ಸುಮಾರು 400 ಕೋಟಿ ಮೌಲ್ಯದ ಆಸ್ತಿ ಸಿಕ್ಕಿದೆ ಎಂದು ಕೇಳಿದ್ದೇನೆ. ನಿನ್ನೆ ದಾಳಿ ವೇಳೆ 50 ಕೆಜಿ ಚಿನ್ನ ಸಿಕ್ಕಿರುವುದಾಗಿ ಕೇಳಿದ್ದಾಗಿ ವಿವರಿಸಿದರು. ಅತಿ ಭ್ರಷ್ಟಾಚಾರದಲ್ಲಿ ತೊಡಗಿದ ಈ ಕಾಂಗ್ರೆಸ್ ಪಕ್ಷದಲ್ಲಿ ಇವರೊಬ್ಬರೇ ಅಲ್ಲ, ಕಾಂಗ್ರೆಸ್ಸಿನೊಳಗೆ ನೂರಾರು ಕುಟುಂಬಗಳು ಭ್ರಷ್ಟಾಚಾರದಲ್ಲಿ ಇವೆ ಎಂದು ಆರೋಪಿಸಿದರು.

ನವೆಂಬರ್ ಕ್ರಾಂತಿ ಮತ್ತು ಸಿಎಂ ಕರೆದಿರುವ ಡಿನ್ನರ್ ಮೀಟಿಂಗ್‍ಗೆ ನಿಕಟ ಸಂಬಂಧವಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದ್ದಾರೆ. ಕಾಂಗ್ರೆಸ್ಸಿನಲ್ಲಿ ದೊಡ್ಡ ಬೆಳವಣಿಗೆ ನಡೆಯುತ್ತಿದೆ ಎಂಬುದು ಜನರ ಅನಿಸಿಕೆಯಾಗಿದೆ. ಮುಖ್ಯಮಂತ್ರಿಗಳೇ ಡಿನ್ನರ್ ಮೀಟಿಂಗ್ ಕರೆದಿದ್ದಾರೆ. ಕೆಲವು ಸಚಿವರು, ಬೇರೆ ಬೇರೆ ಸಭೆ ನಡೆಸುತ್ತಿದ್ದಾರೆ. ಇವೆಲ್ಲ ಕ್ರಾಂತಿಯ ಆಜುಬಾಜು ಓಡಾಡುವ ವಿಚಾರಗಳು. ಒಟ್ಟಾರೆ ಹೇಳುವುದಾದರೆ, ಡಿನ್ನರ್ ಮೀಟಿಂಗ್ ಎಂದರೆ ಅದೊಂದು ವಿಶೇಷತೆ. ಎರಡೂವರೆ ವರ್ಷಗಳಲ್ಲಿ ಡಿನ್ನರ್ ಮೀಟಿಂಗ್ ಯಾವಾಗ ಆಗಿತ್ತು ಎಂದು ಪ್ರಶ್ನಿಸಿದರು.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರದ ಅಂತ್ಯವೇ? ಡಿ.ಕೆ.ಶಿವಕುಮಾರರ ಗುಂಪು ಹೇಳುವ ರೀತಿಯಲ್ಲಿ ನವೆಂಬರ್‍ನಲ್ಲಿ ಶಿವಕುಮಾರರ ಮುಖ್ಯಮಂತ್ರಿ ಅಧಿಕಾರಾವಧಿ ಪ್ರಾರಂಭವೇ? ದಲಿತರನ್ನು ಮುಖ್ಯಮಂತ್ರಿ ವಿಚಾರದಲ್ಲಿ 75ಕ್ಕೂ ಹೆಚ್ಚು ವರ್ಷಗಳಿಂದ ವಂಚಿಸಿದ ಕಾಂಗ್ರೆಸ್ ಪಕ್ಷವು ಈಗಲಾದರೂ ದಲಿತ ಸಿಎಂ ವಿಚಾರಕ್ಕೆ ತೆರೆ ಎಳೆಯುವುದೇ? ಎಂದು ಕೇಳಿದರು. ಮುಖ್ಯಮಂತ್ರಿಯಾಗಿ ಡಾ. ಪರಮೇಶ್ವರ್ ಅವರನ್ನು ಮಾಡುವ ವಿಚಾರ ನಿನ್ನೆಯಿಂದ ಹೊರಕ್ಕೆ ಬರುತ್ತಿದೆ. ಸಿದ್ದರಾಮಯ್ಯನವರ ಕಡೆಯವರು ಈ ಕುರಿತು ಮಾತನಾಡುತ್ತಿದ್ದು, ಸಿದ್ದರಾಮಯ್ಯನವರು ಡಾ. ಪರಮೇಶ್ವರ್ ಅವರನ್ನು ತರಬೇಕೆಂದು ಯೋಚಿಸಿದ್ದಾರಾ?- ಹೀಗೆ ಅನೇಕ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಬರುತ್ತಿದೆ ಎಂದು ತಿಳಿಸಿದರು.
ಅಕ್ಕಿ ಜೊತೆಗೆ ಬೇಳೆಕಾಳು ಉಳ್ಳ ಇಂದಿರಾ ಕಿಟ್ ಕೊಡುವ ಸರಕಾರದ ತೀರ್ಮಾನ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, 5 ಗ್ಯಾರಂಟಿಗಳಲ್ಲಿ 5 ಕೆಜಿ ಅಕ್ಕಿ ಇತ್ತು. ಯಾವತ್ತೂ ಅಕ್ಕಿ ಕೊಡಲಿಲ್ಲ. ಮೋದಿ ಅವರು ಕೊಡುವ ಅಕ್ಕಿಯನ್ನೇ ಇಲ್ಲಿ ವರೆಗೆ ಕೊಡುತ್ತ ಬಂದಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಇಂದಿರಾ ಹೆಸರು ಈಗ ಯಾಕೆ ಬಂದಿದೆ? ಎಂದು ಕೇಳಿದರು. ಇವೆಲ್ಲ ಕಾಂಗ್ರೆಸ್ಸಿನ ಒಳಗಿನ ಗುಲಾಮಗಿರಿಯ ಚಟುವಟಿಕೆಯೇ ಹೊರತು ಬೇರೇನೂ ಅಲ್ಲ ಎಂದು ತಿಳಿಸಿದರು.












Click it and Unblock the Notifications