ಆ ಎರಡು ಗ್ಯಾರಂಟಿಗಳನ್ನು ನಿಲ್ಲಿಸಿ, ಸಿಎಂಗೆ ಕಾಂಗ್ರೆಸ್ ಶಾಸಕನ ಮನವಿ!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೇರಲು ಪಂಚಗ್ಯಾರಂಟಿಗಳ ಕೊಡುಗೆ ಸಾಕಷ್ಟಿದೆ. ಮತ್ತೊಂದೆಡೆ ಈ ಗ್ಯಾರಂಟಿಗಳನ್ನು ನಿಭಾಯಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವ ದೂರು ಕೂಡ ಇದೆ. ಇದರ ನಡುವೆ ಆಗಾಗ ಗ್ಯಾರಂಟಿ ಯೋಜನೆಗಳು ಬಂದ್ ಆಗುವ ಮಾತುಗಳು ಕೇಳಿಬರುತ್ತಿವೆ. ಈಗ ಖುದ್ದು ಕಾಂಗ್ರೆಸ್ ಶಾಸಕರೊಬ್ಬರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಆರ್.ಗವಿಯಪ್ಪ ಅವರು ಈ ರೀತಿ ಸಿಎಂ ಸಿದ್ದರಾಮಯ್ಯ ಅವರಿಗೆ ವೇದಿಕೆಯಲ್ಲೇ ಮನವಿ ಮಾಡಿಕೊಂಡಿದ್ದಾರೆ. ಐದು ಗ್ಯಾರಂಟಿಗಳಲ್ಲಿ ಎರಡು ಯೋಜನೆಗಳನ್ನು ಕೈ ಬಿಡಬೇಕೆಂದು ಎಂದು ಗವಿಯಪ್ಪ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿ ಆಶ್ರಯ ಮನೆಗಳು ಬರುತ್ತಿಲ್ಲ, ಶಕ್ತಿ ಯೋಜನೆ ಹಾಗೂ ಮತ್ತೊಂದು ಗ್ಯಾರಂಟಿಯನ್ನು ನಿಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ನಾನೂ ಮನವಿ ಮಾಡುತ್ತೇನೆ ಎಂದು ಶಾಸಕ ಹೇಳಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯ ಅವರ ಬಳಿ ಮಾತನಾಡುತ್ತೇನೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದು ಹೇಳಿದ್ದಾರೆ. ಈ ಹಿಂದೆಯೂ ಶಾಸಕ ಗವಿಯಪ್ಪ ಅವರು ಸರ್ಕಾರದ ವಿರುದ್ಧ ಬೇಸರ ತೋಡಿಕೊಂಡಿದ್ದರು. ಕ್ಷೇತ್ರಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ ಎಂದೂ ಹೇಳಿಕೆ ನೀಡಿದ್ದರು.
ಗವಿಯಪ್ಪ ವಿರುದ್ಧ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷ ಮೊಹಮ್ಮದ್ ಇಮಾಮ್ ನಿಯಾಜಿ ಕೂಡ ತಿರುಗಿ ಬಿದ್ದಿದ್ದಾರೆ. ಗವಿಯಪ್ಪ ಅವರು ಅನುದಾನ ಬಂದ್ರೂ ಬಂದಿಲ್ಲ ಎನ್ನುವ ಅವರು ಹೊಸಪೇಟೆ ಪಾಲಿಗೆ ಶಾಪ ಎಂದಿದ್ದಾರೆ. ಕ್ಷೇತ್ರಕ್ಕೆ ಸುಮಾರು 150 ಕೋಟಿ ರೂಪಾಯಿ ಅನುದಾನ ಬಂದ್ರೂ ಸುಳ್ಳು ಹೇಳುತ್ತಿದ್ದಾರೆ. ಕ್ಷೇತ್ರಕ್ಕೆ ಕೆಕೆಆರ್‌ಡಿಬಿಯಿಂದ ಅನುದಾನ ರಿಲೀಸ್ ಆಗಿದೆ. ಆದ್ರೆ ಗವಿಯಪ್ಪ ಕ್ರಿಯಾಯೋಜನೆ ಸಿದ್ಧಪಡಿಸಿಲ್ಲ, ಈ ತಪ್ಪು ಮುಚ್ಚಿ ಹಾಕಲು ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಗವಿಯಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರೆ ಯಾವ ಸಚಿವರ ಜೊತೆಗೂ ಉತ್ತಮ ಸಂಪರ್ಕ ಹೊಂದಿಲ್ಲ. ಅವರ ಪ್ರತಿಷ್ಠೆಯಿಂದಾಗಿ ಈ ಕ್ಷೇತ್ರ ಬಡವಾಗುತ್ತಿದೆ. ಗವಿಯಪ್ಪ ಯಾವ ಪುರುಷಾರ್ಥಕ್ಕೆ ಇವರು ಶಾಸಕರಾಗಿದ್ದಾರೆ ಎಂದು ಕ್ಷೇತ್ರದ ಜನ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಗ್ಯಾರಂಟಿಗಳ ಬಗ್ಗೆ ಬೆನ್ನುತಟ್ಟಿಕೊಂಡ ಸಿಎಂ
ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ, ರಾಜ್ಯದ ಜನರ ಮನೆ ಮನೆಗೆ ತಲುಪಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದರು. ಶಕ್ತಿ ಯೋಜನೆಯಡಿ ಇಲ್ಲಿಯವರೆಗೂ ಈ ಗ್ಯಾರಂಟಿಯಿಂದ 325 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ ಎಂದಿದ್ದರು.
ಗೃಹಜ್ಯೋತಿ ಯೋಜನೆಯಡಿ 1 ಕೋಟಿ 62 ಲಕ್ಷ ಕುಟುಂಬಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಒಂದು ಕೋಟಿ 20 ಲಕ್ಷ ಕುಟುಂಬಗಳು ಐದು ಕೆಜಿ ಉಚಿತ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಬಾಬ್ತು 170 ರೂಪಾಯಿಗಳನ್ನು ತಲಾ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಒಂದು ಕೋಟಿ 22 ಲಕ್ಷ ಕುಟುಂಬಗಳ ಯಜಮಾನಿಯರು ಪ್ರತಿ ತಿಂಗಳು ₹2,000 ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದಾರೆ ಎಂದು ಲೆಕ್ಕ ಬಿಚ್ಚಿಟ್ಟಿದ್ದರು.
ಹೆಚ್ಚೂ ಕಡಿಮೆ ಈ ಗ್ಯಾರಂಟಿಯಿಂದ ಪ್ರತೀ ವರ್ಷ 30 ಸಾವಿರ ಕೋಟಿ ರೂಪಾಯಿ ಹಣ ಮನೆ ಯಜಮಾನಿಯರ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮೋ ಹೊಂದಿರುವವರು ಯುವನಿಧಿ ಅಡಿಯಲ್ಲಿ ಭತ್ಯೆ ಪಡೆಯುತ್ತಿದ್ದಾರೆ. ನಾನು ನೀಡಿರುವ ಲೆಕ್ಕ ಸುಳ್ಳಾದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಎಂದು ಸವಾಲು ಹಾಕಿದ್ದರು.












Click it and Unblock the Notifications