ಮೇಲುಕೋಟೆ : ರೈತ ನಾಯಕನಿಗೆ ರಾಷ್ಟ್ರೀಯ ಪಕ್ಷಗಳ ಸವಾಲು!
Recommended Video

ಮಂಡ್ಯ, ಫೆಬ್ರವರಿ 6 : ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರ ಕುತೂಹಲಕ್ಕೆ ಕಾರಣವಾಗಿದೆ. ಒಕ್ಕಲಿಗರ ಪಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನೇರ ಹಣಾಹಣಿ ನಿರೀಕ್ಷಿಸಲಾಗಿದೆ.
ಕ್ಷೇತ್ರದ ಹಾಲಿ ಶಾಸಕರು ಸರ್ವೋದಯ ಕರ್ನಾಟಕ ಪಕ್ಷದಿಂದ ಆಯ್ಕೆಯಾಗಿರುವ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ. ಹಲವು ಬಾರಿ ಸೋಲು ಕಂಡಿದ್ದ ಅವರು 2013ರ ಚುನಾವಣೆಯಲ್ಲಿ ಜಯಗಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಅವರು ಸ್ವರಾಜ್ ಇಂಡಿಯಾ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ ಪುಟ್ಟಣ್ಣಯ್ಯ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಅವರು ಸ್ಪರ್ಧಿಸಿ ಸೋಲು ಕಂಡಿದ್ದರು.
ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಲ್.ಡಿ.ರವಿ ಸ್ಪರ್ಧಿಸಿದ್ದರು. ಈ ಬಾರಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಎಂ.ರವೀಂದ್ರ ಅವರು 827 ಮತಗಳನ್ನು ಮಾತ್ರ ಪಡೆದಿದ್ದರು.
ರೈತ ನಾಯಕನಿಗೆ ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷದ ಸವಾಲು ಹಾಕಲಿವೆ. ಯಾರಿಗೆ ಗೆಲುವು? ಎಂಬುದು ಮಾತ್ರ ಜನರ ತೀರ್ಪಿನ ಮೇಲೆ ಅವಲಂಬಿತವಾಗಿದೆ. ನಾಗಮಂಗಲ ಕ್ಷೇತ್ರದ ಶಾಸಕ ಚೆಲುವರಾಯಸ್ವಾಮಿ ಅವರ ಪ್ರಭಾವ ಇಲ್ಲಿ ಕೆಲಸ ಮಾಡಲಿದೆಯೇ? ಕಾದು ನೋಡಬೇಕು.

ಒಕ್ಕಲಿಗರ ಮತ ನಿರ್ಣಾಯಕ
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಹಣಾಹಣಿ ನಡೆಯುತ್ತದೆ. ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ನಿರ್ಣಾಯಕ. 63,870 ಒಕ್ಕಲಿಗ, 36,564 ಲಿಂಗಾಯತ ಮತಗಳಿವೆ.

ಕೆ.ಎಸ್.ಪುಟ್ಟಣ್ಣಯ್ಯ ಶಾಸಕರು
2013ರ ಚುನಾವಣೆಯಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರು ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿ 80,041 ಮತಗಳನ್ನು ಪಡೆದು ಜಯಗಳಿಸಿದ್ದರು. ಈ ಬಾರಿ ಅವರ ಸ್ವರಾಜ್ ಇಂಡಿಯಾ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಸಿ.ಎಸ್.ಪುಟ್ಟರಾಜು ವಿಧಾನಸಭೆಗೆ
ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು 70,193 ಮತಗಳನ್ನು ಪಡೆದು ಜಯಗಳಿಸಿದ್ದರು.

ಟಿಕೆಟ್‌ಗಾಗಿ ಭಾರೀ ಪೈಪೋಟಿ
ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಭಾರೀ ಪೈಪೋಟಿ ನಡೆಯುತ್ತಿದೆ. ಕಾಂಗ್ರೆಸ್ ಸೇರಲಿರುವ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಆಪ್ತರಾದ ರೇವಣ್ಣ, ಅಂಬರೀಶ್ ಬೆಂಬಲಿಗರಾದ ಎಲ್.ಡಿ.ರವಿ, ಎಲ್.ಸಿ.ಮಂಜುನಾಥ ಅವರು ಟಿಕೆಟ್ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಕಳೆದ ಬಾರಿ ಎಲ್.ಡಿ.ರವಿ 2,314 ಮತಗಳನ್ನು ಪಡೆದು ಸೋಲು ಕಂಡಿದ್ದರು.

ಬಿಜೆಪಿಗೆ ಭಾರೀ ಮುಖಭಂಗ
ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿತ್ತು. ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜಿ.ಎಂ.ರವೀಂದ್ರ ಅವರು ಕೇವಲ 827 ಮತಗಳನ್ನು ಪಡೆದು 8ನೇ ಸ್ಥಾನಕ್ಕೆ ಕುಸಿದಿದ್ದರು. ಈ ಬಾರಿ ಅಭ್ಯರ್ಥಿ ಯಾರು?.












Click it and Unblock the Notifications