ಸಚಿವ ಕೆಜೆ ಜಾರ್ಜ್‌ಗೆ ಹೈಕಮಾಂಡ್ ಬುಲಾವ್

Posted By:
Subscribe to Oneindia Kannada

ಬೆಂಗಳೂರು, ಜುಲೈ 14 : ಮಹತ್ವದ ಬೆಳವಣಿಗೆಯೊಂದರಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ದೆಹಲಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿದೆ. ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.

ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಆದರೆ, ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಬೇಕು ಎಂಬ ಪ್ರತಿಪಕ್ಷಗಳ ಒತ್ತಾಯವನ್ನು ಪರಿಗಣಿಸದೇ, ಆ ಜವಾಬ್ದಾರಿಯನ್ನು ಹೈಕಮಾಂಡ್ ನಾಯಕರ ಹೆಗಲಿಗೆ ವರ್ಗಾಯಿಸಿದ್ದಾರೆ. [ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ]

kj george

ಈ ಹಿನ್ನಲೆಯಲ್ಲಿ ಹೈಕಮಾಂಡ್ ನಾಯಕರು ಸಚಿವ ಕೆ.ಜೆ.ಜಾರ್ಜ್ ಅವರಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಇಂದೇ ಸಚಿವರು ದೆಹಲಿಗೆ ಹೊರಡುವ ಸಾಧ್ಯತೆ ಇದ್ದು, ಹೈಕಮಾಂಡ್ ನಾಯಕರಿಗೆ ತಮ್ಮ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ವಿವರಣೆ ನೀಡುವ ಸಾಧ್ಯತೆ ಇದೆ. [ಸದನಕ್ಕೆ ಉತ್ತರಿಸಿ, ಸಚಿವ ಕೆಜೆ ಜಾರ್ಜ್ ಸಮರ್ಥಿಸಿಕೊಂಡ ಸಿಎಂ]

ಜಾರ್ಜ್ ರಾಜೀನಾಮೆ? : ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೈಕಮಾಂಡ್‌ಗೆ ವಿವರಗಳನ್ನು ನೀಡಿದ ಬಳಿಕ ಅವರ ರಾಜೀನಾಮೆ ಪಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ಧರಣಿಯನ್ನು ಗುರುವಾರವೂ ಸದನದಲ್ಲಿ ವಿಪಕ್ಷಗಳು ಮುಂದುವರೆಸಲಿವೆ. ['ಸಿದ್ದರಾಮಯ್ಯ ಕೇಳಿದರೆ ರಾಜೀನಾಮೆ ಕೊಡುವೆ']

ಮಂಗಳೂರು ಐಜಿ ಕಚೇರಿ ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 'ನನಗೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್‌ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಎಂದು ಹೇಳಿದ್ದರು.

ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಹಿಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಲೋಕಾಯುಕ್ತ ಐಜಿಪಿ ಪ್ರಣಬ್‌ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಡ ಹೇರುತ್ತಿವೆ.

ಜುಲೈ 7ರಂದು ಎಂ.ಕೆ.ಗಣಪತಿ ಅವರು ಮಡಿಕೇರಿಯ ವಿನಾಯಕ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು. ಬುಧವಾರ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಆದರೆ, ಪ್ರತಿಪಕ್ಷಗಳು ಸಿಬಿಐ ತನಿಖೆಗಾಗಿ ಪಟ್ಟು ಹಿಡಿದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru Deputy Superintendent of Police (DySP) M.K. Ganapathi suicide case, The Congress high command has called KJ George for talks.
Please Wait while comments are loading...